ಉತ್ತರಪ್ರದೇಶ : ಈಗಿನ ಯುವಕ- ಯುವತಿಯರಲ್ಲಿ ರೀಲ್ಸ್ ಮಾಡುವ ಹುಚ್ಚು ಹೆಚ್ಚಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಿದ್ಧರಾಗಲು ಯಾವುದೇ ಹಂತಕ್ಕೆ ಬೇಕಾದರೂ ಹೋಗುತ್ತಿದ್ದಾರೆ. ಕೆಲವೊಮ್ಮೆ ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇನ್ನೊಂದು ಕಡೆ ಸಂಬಂಧಗಳೂ ಹಾಳಾಗಿವೆ. ಇಂಥದ್ದೇ ಮತ್ತೊಂದು ಪ್ರಕರಣ ಉತ್ತರಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

ತನ್ನ ಪತಿ ರೀಲ್ಸ್ ಮಾಡಲು ಬಿಡುವುದಿಲ್ಲ, ಇದರಿಂದಾಗಿ ನನಗೆ ಸಾಮಾಜಿಕ ಮಾಧ್ಯಮದಲ್ಲಿ ಫಾಲೋವರ್ಗಳು ಕಡಿಮೆಯಾಗಿದ್ದಾರೆ ಎಂದು ಪತ್ನಿಯೊಬ್ಬಳು ಪೊಲೀಸ್ ಠಾಣೆಯಲ್ಲಿ ಪತಿಯ ವಿರುದ್ಧ ದೂರು ನೀಡಿದ್ದಾರೆ. ಇದನ್ನು ಕೇಳಿ ಪೊಲೀಸರೇ ದಂಗಾಗಿದ್ದಾರೆ.
ಮಹಿಳೆಯ ವಿಚಿತ್ರ ಆರೋಪ: ಹಾಪುರ್ ಜಿಲ್ಲೆಯ ಪಿಲ್ಖುವಾ ಕೊಟ್ವಾಲಿ ಪ್ರದೇಶದ ನಿವಾಸಿಯಾಗಿರುವ ಮಹಿಳೆ ತನ್ನ ಗಂಡನೊಂದಿಗೆ ರೀಲ್ಸ್ ಮಾಡುವ ವಿಷಯವಾಗಿ ಜಗಳವಾಡಿದ್ದಾಳೆ. ಇದೇ ಕಾರಣಕ್ಕಾಗಿ ಆಕೆ ಪತಿಯನ್ನು ಬಿಟ್ಟು ತವರು ಮನೆಗೆ ಬಂದಿದ್ದಾಳೆ. ಕೋಪದಲ್ಲಿ ಸ್ಥಳೀಯ ಮಹಿಳಾ ಪೊಲೀಸ್ ಠಾಣೆಗೆ ತೆರಳಿ ಪತಿಯ ಮೇಲೆ ದೂರು ದಾಖಲಿಸಿದ್ದಾರೆ.
ದೂರಿನ ಬಳಿಕ ಪೊಲೀಸರು ಇಬ್ಬರಿಗೂ ಕೌನ್ಸೆಲಿಂಗ್ ಮಾಡಿದ್ದಾರೆ. ಈ ವೇಳೆ ಪತ್ನಿಯು, ಗಂಡನ ಮನೆಯಲ್ಲಿ ಯಾವಾಗಲೂ ಕೆಲಸವಿರುತ್ತದೆ. ಪಾತ್ರೆ, ಕಸ ಗುಡಿಸುವುದೇ ಕೆಲಸವಾಗಿದೆ. ಇದರಿಂದ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಇಬ್ಬರು ಫಾಲೋವರ್ಸ್ ಕಡಿಮೆಯಾಗಿದ್ದಾರೆ ಎಂದು ದೂರಿದ್ದಾರೆ.
ಪತಿಯ ಪ್ರತಿ ದೂರಿದು: ಪತ್ನಿ ಮನೆಕೆಲಸ ಮಾಡುವುದಿಲ್ಲ, ಯಾವಾಗಲೂ ರೀಲ್ಸ್ಗಳನ್ನು ಮಾಡುತ್ತಲೇ ಇರುತ್ತಾಳೆ. ಫಾಲೋವರ್ಸ್ ಕಡಿಮೆಯಾದಾಗ, ಅಡುಗೆಯೂ ಮಾಡುವುದಿಲ್ಲ. ಊಟ ಬಡಿಸದೇ ಕಿರುಕುಳ ನೀಡುತ್ತಾಳೆ ಎಂದು ಪತಿರಾಯ ತನ್ನ ದುಃಖ ತೋಡಿಕೊಂಡಿದ್ದಾನೆ.
ಪೊಲೀಸ್ ಠಾಣೆಯಲ್ಲಿ ಕೌನ್ಸೆಲಿಂಗ್ ವೇಳೆ ಇಬ್ಬರೂ ಸುಮಾರು 4 ಗಂಟೆಗಳ ಕಾಲ ಒಬ್ಬರ ಮೇಲೊಬ್ಬರು ಆರೋಪ ಮತ್ತು ಪ್ರತ್ಯಾರೋಪ ಮಾಡಿದ್ದಾರೆ. ನಂತರ ಪೊಲೀಸ್ ಅಧಿಕಾರಿಗಳು ಇಬ್ಬರನ್ನೂ ಸಮಾಧಾನಿಸಿ, ಒಂದಾಗಿ ಬಾಳುವಂತೆ ಹೇಳಿ ಕಳುಹಿಸಿದ್ದಾರೆ.
ರಾಜಿಗೆ ಷರತ್ತು ವಿಧಿಸಿದ ಪತ್ನಿ: ಆದಾಗ್ಯೂ, ಮಹಿಳೆಯು ತನ್ನ ಪತಿಯೊಂದಿಗೆ ಬಾಳಲು ವಿಚಿತ್ರವಾದ ಷರತ್ತನ್ನು ವಿಧಿಸಿದ್ದಾಳೆ. ಅದೇನೆಂದರೆ, ಪ್ರತಿದಿನ ತಾನು ಕನಿಷ್ಠ 2 ರೀಲ್ಸ್ಗಳನ್ನು ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವೆ. ಇದಕ್ಕೆ ಪತಿ ಅಡ್ಡಿಪಡಿಸಬಾರದು ಎಂದು ಕರಾರು ಹಾಕಿದ್ದಾಳೆ. ಇತ್ತ ಪತಿಗೂ ಯಾವುದೇ ಅವಕಾಶವಿಲ್ಲದೇ, ಒಪ್ಪಿಗೆ ಎಂಬಂತೆ ಗೋಣು ಹಾಕಿದ್ದಾನೆ.