ಬಾರಾಬಂಕಿ : ಹರಿದ್ವಾರದ ಮಾನಸಾ ದೇವಿ ದೇಗುಲದಲ್ಲಿ ಭಾನುವಾರ ನಡೆದ ದುರ್ಘಟನೆ ಬೆನ್ನಲ್ಲೇ, ತಡರಾತ್ರಿ ಉತ್ತರ ಪ್ರದೇಶದ ಬಾರಾಬಂಕಿಯ ಅವಸಾನೇಶ್ವರ ಮಹಾದೇವ ದೇವಸ್ಥಾನದಲ್ಲಿಯೂ ಕಾಲ್ತುಳಿತ ಸಂಭವಿಸಿದ್ದು, ಇಬ್ಬರು ಭಕ್ತರು ಸಾವನ್ನಪ್ಪಿ, ಸುಮಾರು 32 ಮಂದಿ ಗಾಯಗೊಂಡಿದ್ದಾರೆ.
ಹರಿದ್ವಾರದ ಮಾನಸಾ ದೇವಿ ದೇವಸ್ಥಾನದಲ್ಲಿ ಭಾನುವಾರ ಬೆಳಗ್ಗೆ ನಡೆದ ಕಾಲ್ತುಳಿತದಲ್ಲಿ 8 ಜನರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದರು. ವಿದ್ಯುತ್ ಅವಘಡದ ವದಂತಿ ಹಿನ್ನೆಲೆಯಲ್ಲಿ ಜನರು ಭಯಭೀತರಾಗಿ ಘಟನೆ ಸಂಭವಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದರು.
ಅದೇ ರೀತಿ, ಬಾರಾಬಂಕಿಯ ಅವಸಾನೇಶ್ವರ ಮಹಾದೇವ ದೇವಸ್ಥಾನದಲ್ಲಿಯೂ ವಿದ್ಯುತ್ ತಂತಿಯಿಂದಲೇ ದುರಂತ ಸಂಭವಿಸಿದೆ. ಭಾನುವಾರ ತಡರಾತ್ರಿ ಭಕ್ತರು ದೇವರ ದರ್ಶನ ಪಡೆಯುತ್ತಿದ್ದಾಗ ಕೋತಿಯೊಂದು ಸಮೀಪದಲ್ಲಿನ ವಿದ್ಯುತ್ ತಂತಿಯ ಮೇಲೆ ಹಾರಿದೆ. ಇದರಿಂದ ವಿದ್ಯುತ್ ಲೈನ್ ಶೆಡ್ಗೆ ತಗುಲಿದೆ. ಅಲ್ಲೇ ಪಕ್ಕದಲ್ಲಿದ್ದ ಭಕ್ತರಿಗೂ ವಿದ್ಯುತ್ ಪ್ರವಹಿಸಿದೆ. ಆಗ ಭಕ್ತ ಸಮೂಹ ಭಯಭೀತರಾಗಿ ಓಡಿದ್ದು, ಕಾಲ್ತುಳಿತ ಸಂಭವಿಸಿದೆ. ಘಟನೆಯಲ್ಲಿ ತೀವ್ರ ಗಾಯಗೊಂಡ ಇಬ್ಬರು ಸಾವನ್ನಪ್ಪಿದ್ದು, ಇತರ 32 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೋಮವಾರ ಮುಂಜಾನೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ, ಬಾರಾಬಂಕಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಶಶಾಂಕ್ ತ್ರಿಪಾಠಿ, ”ಭಕ್ತರು ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಕೋತಿಯೊಂದು ವಿದ್ಯುತ್ ತಂತಿಯ ಮೇಲೆ ಹಾರಿತು, ಆಗ ವಿದ್ಯುತ್ ಲೈನ್ ಶೆಡ್ ಮೇಲೆ ಬಿದ್ದಿತು. ಇದರಿಂದಾಗಿ ವಿದ್ಯುತ್ ಪ್ರವಹಿಸಿದ್ದು, ಕೆಲ ಭಕ್ತರಿಗೂ ಶಾಕ್ ತಗುಲಿತು. ಘಟನೆಯಲ್ಲಿ, ಹಲವರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳಿಗೆ ವೈದ್ಯಕೀಯ ಚಿಕಿತ್ಸೆ ನಡೆಯುತ್ತಿದೆ” ಎಂದು ಹೇಳಿದ್ದರು.
ಘಟನೆ ಸಂದರ್ಭದಲ್ಲಿ ಶ್ರಾವಣ ಮಾಸದ ವಿಶೇಷವಾಗಿ ದೇವರಿಗೆ ‘ಜಲಾಭಿಷೇಕ’ ನಡೆಯುತ್ತಿತ್ತು. ಈ ವೇಳೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.