ದಕ್ಷಿಣ ಕನ್ನಡ : ಖಾಸಗಿ ಬಸ್ ಕಂಡಕ್ಟರ್‌ಗಳ ನಡುವೆ ತೊಕ್ಕೊಟ್ಟಿನಲ್ಲಿ ಮಾರಾಮಾರಿ, ಬೀದಿ ಕಾಳಗ ನಡೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಮಂಗಳೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಲಪಾಡಿಯಿಂದ ಮಂಗಳೂರು ನಡುವೆ ಸಂಚರಿಸುವ ಪದ್ಮ ಟ್ರಾವೆಲ್ಸ್ ಖಾಸಗಿ ಬಸ್ ಹಾಗೂ ಮಂಜೇಶ್ವರದ ಹೊಸಂಗಡಿ ಜಂಕ್ಷನ್‌ನಿಂದ ಮಂಗಳೂರು ನಡುವೆ ಸಂಚರಿಸುವ ಅಸರ್ ಟ್ರಾವೆಲ್ಸ್ ಖಾಸಗಿ ಸರ್ವಿಸ್ ಬಸ್‌ಗಳ ಕಂಡಕ್ಟರ್‌ಗಳ ನಡುವೆ ತೊಕ್ಕೊಟ್ಟಿನ ಓವರ್ ಬ್ರಿಡ್ಜ್ ರೈಲ್ವೆ ಮೇಲ್ವೇತುವೆ ಬಳಿಯ ಬಸ್ ತಂಗುದಾಣದಲ್ಲಿ ಬೀದಿಕಾಳಗ ನಡೆದಿದೆ.
ತಲಪಾಡಿಯಿಂದ ಮಂಗಳೂರಿಗೆ ಬರುತ್ತಿದ್ದ ಅಸರ್ ಟ್ರಾವೆಲ್ಸ್ ಬಸ್ ಅನ್ನು ಬೆನ್ನಟ್ಟಿ ಹಿಂದಿಕ್ಕಲು ಧಾವಿಸಿ ಬಂದ ಪದ್ಮ ಟ್ರಾವೆಲ್ಸ್ ಬಸ್ ಚಾಲಕ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಸ್ ನಿಲ್ದಾಣದಲ್ಲಿ ಅಡ್ಡಲಾಗಿ ನಿಲ್ಲಿಸಿದ್ದಾರೆ. ಈ ವೇಳೆ, ಎರಡು ಬಸ್‌ಗಳ ಕಂಡಕ್ಟರ್‌ಗಳ ನಡುವೆ ಮಾತಿನ ಚಕಮಕಿ ನಡೆದು, ಬೀದಿ ಕಾಳಗ ಆಗಿದೆ.
ಈ ವೇಳೆ, ಓವರ್ ಬ್ರಿಡ್ಜ್ ಆಟೋ ರಿಕ್ಷಾ ಪಾರ್ಕಿನ ರಿಕ್ಷಾ ಚಾಲಕರಾದ ಆನಂದ್ ಮತ್ತು ದೀಪಕ್ ಅವರು ಮಧ್ಯ ಪ್ರವೇಶಿಸಿ ನಿರ್ವಾಹಕರನ್ನು ಸಮಾಧಾನಗೊಳಿಸಿ ಕಳುಹಿಸಿದ್ದಾರೆ. ಕಂಡಕ್ಟರ್‌ಗಳ ಬೀದಿಕಾಳಗದ ದೃಶ್ಯವನ್ನು ಹೆದ್ದಾರಿಯಲ್ಲಿ ಚಲಿಸುತ್ತಿದ್ದ ವಾಹನ ಸವಾರರು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದಾರೆ. ಖಾಸಗಿ ಬಸ್ ಚಾಲಕರ ಟೈಮಿಂಗ್ಸ್ ವಿಚಾರದಲ್ಲಿ ಗಲಾಟೆ, ಅಪಘಾತಗಳಾಗುತ್ತಿರುವುದು ಸರ್ವೇ ಸಾಮಾನ್ಯ ಎಂಬಂತಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.