ಬೆಂಗಳೂರು : ಇದೇ ಆ.27ರಂದು ಕೆಎಎಸ್ ಪೂರ್ವಭಾವಿ ಪರೀಕ್ಷೆ ನಡೆಸಲು ಸರ್ಕಾರ ತರಾತುರಿಯಲ್ಲಿ ದಿನಾಂಕ ಪ್ರಕಟಿಸಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.
ಕೆಲಸದ ಅವಧಿಯ ದಿನದಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತಿರುವುದನ್ನು ವಿರೋಧಿಸಿ ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘವು ನಾಳೆ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ಮಾಡಲು ಕೋರಿ ಉಪ ಪೊಲೀಸ್ ಆಯುಕ್ತರಿಗೆ ಬರೆದ ಪತ್ರವನ್ನು ಉಲ್ಲೇಖಿಸಿ ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.
ಕೆಲಸದ ದಿನದಲ್ಲಿ ಪರೀಕ್ಷೆ ನಿಗದಿ ಮಾಡಿದ್ದು, ದೂರ-ದೂರದಿಂದ ಬಂದು ಪರೀಕ್ಷೆ ಬರಲು, ಬೇರೆಡೆ ಕೆಲಸ ಮಾಡುವ ಆಕಾಂಕ್ಷಿಗಳಿಗೆ, ಕರ್ನಾಟಕದ ಕೇಂದ್ರ ಸರ್ಕಾರಿ ನೌಕರರು ಈ ಪರೀಕ್ಷೆಗಳಿಂದ ವಂಚಿತರಾಗುತ್ತಾರೆ. ಯಾವ ಉದ್ದೇಶಕ್ಕೆ ಈ ರೀತಿ ದಿಢೀರ್ ಎಂದು ಕೆಲಸದ ದಿನದಲ್ಲಿ ಪರೀಕ್ಷೆ ನಿಗದಿ ಮಾಡಲಾಗಿದೆ ಎಂದು ಸರ್ಕಾರಕ್ಕೆ ವಿಜಯೇಂದ್ರ ಪ್ರಶ್ನಿಸಿದ್ದಾರೆ.
ಕೂಡಲೇ ಸಿಎಂ ಸಿದ್ದರಾಮಯ್ಯ ಅವರು ಮಧ್ಯಪ್ರವೇಶಿಸಿ ಈ ಸಮಸ್ಯೆ ಬಗೆಹರಿಸಬೇಕು ಹಾಗೂ ಪರೀಕ್ಷೆಗೆ ತಯಾರಿ ಮಾಡಲು ಅಭ್ಯರ್ಥಿಗಳಿಗೆ ಇನ್ನಷ್ಟು ದಿನಗಳವರೆಗೆ ಕಾಲಾವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.