ನೀರಿನ ಕೊರತೆ ಎದುರಿಸಲು ರೆಡಿಯಾಗಬೇಕಿದ್ಯಾ ಕರ್ನಾಟಕ?
ಬೆಂಗಳೂರು : ದಿನದಿಂದ ದಿನಕ್ಕೆ ರಾಜ್ಯದಲ್ಲಿನ ಏರಿಕೆಯಾಗುತ್ತಿರುವ ಬೇಸಿಗೆ ತಾಪಮಾನವು ಕುಡಿಯುವ ನೀರಿನ ಸಂಕಷ್ಟಕ್ಕೆ ಕಾರಣವಾಗುವ ಸಾಧ್ಯತೆ ಇದೆ. ರಾಜ್ಯ ಮಟ್ಟದ ಹವಾಮಾನ ವೀಕ್ಷಣಾ ಸಮಿತಿಯ ಇತ್ತೀಚಿನ ವರದಿ ಪ್ರಕಾರ, ಈ ಬೇಸಿಗೆಯಲ್ಲಿ 207 ತಾಲೂಕುಗಳಲ್ಲಿ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇದ್ದು, ಈಗಾಗಲೇ 60 ತಾಲ್ಲೂಕುಗಳು ತೀವ್ರ ನೀರಿನ ಅಭಾವವನ್ನು ಎದುರಿಸುತ್ತಿವೆ. ಜೊತೆಗೆ 2,258 ಗ್ರಾಮ ಪಂಚಾಯಿತಿಗಳನ್ನು ಅಪಾಯ ಪ್ರದೇಶಗಳಾಗಿ ಗುರುತಿಸಲಾಗಿದ್ದು, ಅವುಗಳಲ್ಲಿ 212 ಪಂಚಾಯಿತಿಗಳು ಈಗಾಗಲೇ ಗಂಭೀರ ನೀರಿನ ಸಂಕಷ್ಟದಲ್ಲಿವೆ ಎನ್ನಲಾಗಿದೆ.
31 ಜಿಲ್ಲೆಗಳ ಪೈಕಿ ಉತ್ತರ ಕನ್ನಡ (12), ಬೆಳಗಾವಿ (14), ಕಲಬುರಗಿ (11) ಮತ್ತು ತುಮಕೂರು (10) ಜಿಲ್ಲೆಗಳ ತಾಲೂಕುಗಳು ಹೆಚ್ಚು ಸಮಸ್ಯೆಗೆ ಒಳಗಾಗಿವೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಲಬುರಗಿ (180), ಉತ್ತರ ಕನ್ನಡ (170), ಹಾವೇರಿ (138), ಮಂಡ್ಯ (130) ಮತ್ತು ಬೆಳಗಾವಿ (126) ಜಿಲ್ಲೆಗಳು ಹೆಚ್ಚು ಪರಿಣಾಮ ಎದುರಿಸುತ್ತಿವೆ. ಸಂಕಷ್ಟ ನಿವಾರಣೆಗೆ ಸರ್ಕಾರ ಒಟ್ಟು 60 ಟ್ಯಾಂಕರ್‌ಗಳನ್ನು ನಿಯೋಜಿಸಿದೆ. ಜೊತೆಗೆ 270 ಖಾಸಗಿ ಬೋರ್‌ವೆಲ್‌ಗಳನ್ನು ಬಳಸಿಕೊಂಡು 246 ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ.
ಮಾರ್ಚ್ನಿಂದ ಮೇ ಅವಧಿಯ ತೀವ್ರ ಬೇಸಿಗೆಯಲ್ಲಿ ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ತಾಪಮಾನ ಕಾಣಿಸಿಕೊಳ್ಳುವ ಸಾಧ್ಯತೆ ಅಂದಾಜಿಸಲಾಗಿದೆ. ಜುಲೈ-ಆಗಸ್ಟ್ ಅವಧಿಯಲ್ಲಿ ಕಡಿಮೆ ಮಳೆಯಾಗುವ ನಿರೀಕ್ಷೆ ಇದ್ದು, ಕೃಷ್ಣಾ ಮತ್ತು ಕಾವೇರಿ ನದಿ ತಟ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆಯ ಕೊರತೆ ಉಂಟಾಗಬಹುದು. ಇದರಿಂದ ಕೃಷಿ ಕಾರ್ಯಗಳಿಗೆ ಹಾನಿಯಾಗುವುದಲ್ಲದೆ, ನೀರಿನ ಕೊರತೆಯಿಂದ ಕಾಡು ಪ್ರಾಣಿಗಳು ಮಾನವ ವಸತಿಗಳತ್ತ ಬರುತ್ತಿರುವ ಸಾಧ್ಯತೆ ಇದೆ. ಜೊತೆಗೆ ಜನರಲ್ಲಿ ರೋಗಗಳ ಪ್ರಮಾಣವೂ ಹೆಚ್ಚಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
For More Updates Join our WhatsApp Group :




