ಬೆಂಗಳೂರು: ಎಟಿಎಂಗಳಿಗೆ ಹಣ ಪೂರೈಸುತ್ತಿದ್ದ ವಾಹನವನ್ನು ಆರ್ಬಿಐ ಅಧಿಕಾರಿಗಳ ಸೋಗಿನಲ್ಲಿ ಅಡ್ಡಗಟ್ಟಿ ಬರೋಬ್ಬರಿ 7 ಕೋಟಿ 11 ಲಕ್ಷ ರೂಪಾಯಿ ದೋಚಿದ್ದ ಪ್ರಕರಣ ವೆಬ್ ಸೀರೀಸ್ ಪ್ರೇರಿತವಾ ಎನ್ನುವ ಅನುಮಾನ ವ್ಯಕ್ತವಾಗಿದೆ. ಆರೋಪಿಗಳು ದರೋಡೆಗೆ ಪಕ್ಕಾ ಪ್ಲ್ಯಾನ್ ಮಾಡಿಯೇ ಬಂದಿದ್ದು, ಆ ಪ್ರೀ ಪ್ಲಾನ್ ಪ್ರಕಾರ ಮೂರು ಠಾಣೆಗೆ ಸೇರುವ ಸ್ಥಳದಲ್ಲಿ ವಾಹನ ಬಿಡುವುದು ಕೂಡ ಯೋಜನೆ ಆಗಿತ್ತು ಎಂಬ ಅನುಮಾನ ತನಿಖೆ ವೇಳೆ ವ್ಯಕ್ತವಾಗಿದೆ.
ಸಿಎಂಎಸ್ ವಾಹನ ಸಿಕ್ಕಿದ್ದ ಫ್ಲೈ ಓವರ್ ಮೂರು ಪೊಲೀಸ್ ಠಾಣೆಗಳಿಗೆ ಬಾರ್ಡರ್. ನಿಮಾನ್ಸ್ನಿಂದ ಮೇಲ್ಭಾಗಕ್ಕೆ ಬಂದರೆ ಆಡುಗೋಡಿ ಪೊಲೀಸ್ ಸ್ಟೇಷನ್ ಸರಹದ್ದು, ವಾಹನದ ಎಡಬದಿಯಲ್ಲಿ ಸುದ್ಗುಂಟೆಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿ ಮತ್ತು ಕೃತ್ಯ ನಡೆದಿರುವುದು ಸಿದ್ದಾಪುರ ಠಾಣೆ ಲಿಮಿಟ್ಸ್ನಲ್ಲಿ. ಆ ಪೈಕಿ ಸಿದ್ದಾಪುರ ಠಾಣೆ ದಕ್ಷಿಣ ವಿಭಾಗಕ್ಕೆ ಸೇರಿದರೆ ವಾಹನ ಸಿಕ್ಕಿದ್ದು ಇಂಚಿನ ವ್ಯತ್ಯಾಸದಲ್ಲಿ ಸುದ್ಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ. ಈ ಠಾಣೆ ಸೌತ್ ಈಸ್ಟ್ ವಿಭಾಗಕ್ಕೆ ಸೇರಿದ್ದು. ಹೀಗಾಗಿ ವಾಹನ ಸಿಕ್ಕ ಬಳಿಕ ಮೊದಲು ಯಾವ ಠಾಣಾ ವ್ಯಾಪ್ತಿಗೆ ಘಟನೆ ಬರಲಿದೆ ಎಂಬ ಗೊಂದಲ ಉಂಟಾಗಿದೆ. ಪೊಲೀಸರು ಸಾಮಾನ್ಯವಾಗಿ ತಮ್ಮ ಠಾಣೆ ಸಹರದ್ದಿನ ಆಧಾರದ ಮೇಲೆ ಕೆಲಸ ಮಾಡಲಿರುವ ಕಾರಣ, ರಾಬರ್ಸ್ ಪ್ಲ್ಯಾನ್ನಲ್ಲಿ ಈ ಅಂಶವೂ ಇತ್ತಾ ಎಂಬ ಪ್ರಶ್ನೆ ಉದ್ಭವಿಸಿದೆ. ಹೀಗಾಗಿ, ಅನೇಕ ರಾಬರಿ ಸೀರೀಸ್ ಗಳಲ್ಲಿ ಇರುವಂತೆ ಪೊಲೀಸರನ್ನೇ ಗೊಂದಲಕ್ಕೆ ದೂಡಿ ಗ್ರೇಟ್ ಎಸ್ಕೇಪ್ ಆಗುವ ಪ್ಲ್ಯಾನ್ ಆರೋಪಿಗಳದ್ದಾಗಿತ್ತಾ ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ.
ಪರಪ್ಪನ ಅಗ್ರಹಾರ ಜೈಲಿಗೂ ತನಿಖಾ ತಂಡ ಭೇಟಿ
ಇನ್ನು ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ತನಿಖಾ ತಂಡ ಪರಪ್ಪನ ಅಗ್ರಹಾರ ಜೈಲಿಗೂ ಭೇಟಿ ನೀಡಿದೆ. ಜೈಲಿನಿಂದ ರಾಬರಿಗೆ ಸಂಚು ರೂಪಿಸಿರುವ ಅನುಮಾನ ವ್ಯಕ್ತವಾದ ಹಿನ್ನಲೆ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಜೈಲಿನಲ್ಲಿ ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕಲಾಗಿದೆ. ರಾಬರಿ ಗ್ಯಾಂಗ್ ಹಾಗೂ ಜೈಲಿನ ಒಳಗಿರುವ ಯಾರಿಗಾದರೂ ಲಿಂಕ್ ಇದೆಯಾ ಎಂಬ ಆಯಾಮದಲ್ಲಿ ವಿಚಾರಣೆ ನಡೆದಿದೆ.
For More Updates Join our WhatsApp Group :

