ಜೀವನಶೈಲಿಯಿಂದ ಬರುವಂತಹ ಮಾನಸಿಕ ಒತ್ತಡ ಮತ್ತು ಬೆನ್ನು ನೋವನ್ನು ಯೋಗ ಮಾಡುವ ಮೂಲಕ ಕಡಿಮೆ ಮಾಡಿಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರಲ್ಲಿ ಈ ರೀತಿ ಸಮಸ್ಯೆಗಳು ಕಂಡುಬರುತ್ತಿದ್ದು ಇವುಗಳನ್ನು ಕಡಿಮೆ ಮಾಡಿಕೊಳ್ಳಲು ಔಷಧಿಗಳು ಬೇಕಾಗಿಲ್ಲ ಬದಲಾಗಿ ತಪ್ಪದೆ ಯೋಗ ಮಾಡುವುದರಿಂದ ಈ ರೀತಿಯ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಈ ಕುರಿತು ಎಸ್.ಡಿ. ಎಂ ಕ್ಷೇಮವನದ ಮುಖ್ಯ ಸ್ವಾಸ್ಥ್ಯ ಅಧಿಕಾರಿ ಡಾ. ನರೇಂದ್ರ ಕೆ ಶೆಟ್ಟಿ ಅವರು ಮಾನಸಿಕ ಒತ್ತಡ ಮತ್ತು ಜೀವನಶೈಲಿಯಿಂದ ಬರುವಂತಹ ಬೆನ್ನು ನೋವನ್ನು ಯೋಗದ ಮೂಲಕ ಹೇಗೆ ಕಡಿಮೆ ಮಾಡಬಹುದು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ.

ಬೆನ್ನು ನೋವು ಬರುವುದಕ್ಕೆ ಕಾರಣವೇನು?
ಡಾ. ನರೇಂದ್ರ ಕೆ ಶೆಟ್ಟಿ ಅವರು ಹೇಳಿರುವ ಪ್ರಕಾರ, “ಜೀವನಶೈಲಿಯಿಂದ ಬರುವಂತಹ ಮಾನಸಿಕ ಒತ್ತಡ ಮತ್ತು ಬೆನ್ನು ನೋವನ್ನು ಯೋಗ ಮಾಡುವ ಮೂಲಕ ಕಡಿಮೆ ಮಾಡಿಕೊಳ್ಳಬಹುದು. ಅದಕ್ಕೂ ಮೊದಲು ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಕೆಲವು ಅಂಶಗಳು ಬಹಳ ಮುಖ್ಯವಾಗುತ್ತದೆ. ಅಂದರೆ ಮೊದಲು ಕುಳಿತುಕೊಳ್ಳುವ ಭಂಗಿ ಅಂದರೆ ನೀವು ಯಾವ ರೀತಿ ಕುಳಿತುಕೊಳ್ಳಬೇಕು? ಎಷ್ಟು ಎತ್ತರದಲ್ಲಿ ಕುಳಿತುಕೊಳ್ಳುವುದು ಒಳ್ಳೆಯದು? ಅಲ್ಲದೆ ನಮ್ಮ ಕಣ್ಣು ಮತ್ತು ಕಂಪ್ಯೂಟರ್ ಇರುವ ಅಂತರ ಎಲ್ಲವೂ ಕೂಡ ಬಹಳ ಮುಖ್ಯವಾಗುತ್ತದೆ. ಜೊತೆಗೆ ಬೊಜ್ಜು. ಇದು ಕೂಡ ನಮ್ಮ ಬೆನ್ನು ನೋವಿಗೆ ಮುಖ್ಯ ಕಾರಣವಾಗಿರುತ್ತದೆ. ಹಾಗಾಗಿ ಇವುಗಳ ಬಗ್ಗೆ ನಿಗಾ ವಹಿಸಸಬೇಕು” ಎಂದು ಹೇಳಿದ್ದಾರೆ.
ಬೆನ್ನು ನೋವು ಕಡಿಮೆ ಮಾಡಲು ಈ ಆಸನಗಳು ಬೆಸ್ಟ್
ಡಾ. ನರೇಂದ್ರ ಕೆ. ಶೆಟ್ಟಿ ಅವರು ನೀಡಿರುವ ಮಾಹಿತಿ ಪ್ರಕಾರ, ನಾವು ಜಿಮ್, ವ್ಯಾಯಾಮ ಅಥವಾ ವಾಕಿಂಗ್ ಮಾಡುವುದರಿಂದ ನಮ್ಮ ಸ್ಕೆಲಿಟಲ್ ಮಸಲ್ ಇಂಪ್ರೂವ್ ಆಗುತ್ತೆ. ಆದ್ರೆ ಯೋಗ ಮಾಡುವುದರಿಂದ ಕೋರ್ ಸ್ನಾಯುಗಳು ಇಂಪ್ರೂವ್ ಆಗುತ್ತದೆ. ಬೆನ್ನು ನೋವು ಕಡಿಮೆ ಮಾಡಲು ಸ್ಕೆಲಿಟಲ್ ಮಸಲ್ ಇಂಪ್ರೂವ್ ಆದರೆ ಸಾಲುವುದಿಲ್ಲ ಕೋರ್ ಸ್ನಾಯುಗಳು ಸುಧಾರಣೆಯಾಗಬೇಕಾಗುತ್ತದೆ. ಇನ್ನು ನಮ್ಮ ಮಾನಸಿಕ ಒತ್ತಡ ಮತ್ತು ಬೆನ್ನು ನೋವನ್ನು ಕಡಿಮೆ ಮಾಡಲು ಭುಜಂಗಾಸನ, ಶಶಾಂಕಾಸನ, ಏಕಪಾದ ಉತ್ಕಟಾಸನ, ಉಷ್ಟ್ರಾಸನ ಹೀಗೆ ಹಲವಾರು ಆಸನಗಳು ನಮ್ಮ ಬೆನ್ನು ಮೂಳೆಗಳನ್ನು ಗಟ್ಟಿಗೊಳಿಸಲು ಸಹಾಯ ಮಾಡುತ್ತದೆ. ಇವುಗಳನ್ನು ತಪ್ಪದೆ ಮಾಡುವುದರಿಂದ ಬೆನ್ನು ನೋವು ಬರುವುದಿಲ್ಲ. ಒಂದು ಕಡೆ ಆಸನ ಇನ್ನೊಂದು ಕಡೆ ರಿಲಾಕ್ಸೇಷನ್ ಇವೆರಡನ್ನು ಜೊತೆಯಾಗಿ ಮಾಡುವುದರಿಂದ ಮಾನಸಿಕ ಒತ್ತಡ ಮತ್ತು ಜೀವನಶೈಲಿಯಿಂದ ಬರುವಂತಹ ಬೆನ್ನು ನೋವು ಎರಡನ್ನೂ ಕಡಿಮೆ ಮಾಡಬಹುದು” ಎಂದಿದ್ದಾರೆ.