ಮುಡಾ ಮಾಜಿ ಆಯುಕ್ತರ ಅಮಾನತು ಬಗ್ಗೆ ವಿಜಯೇಂದ್ರ ಹೇಳಿದ್ದೇನು?

ಬೆಂಗಳೂರು: ಮೈಸೂರು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಆಯುಕ್ತರ ವಿರುದ್ಧ ಅಕ್ರಮದ ಆರೋಪ ಕೇಳಿ ಬಂದಿತ್ತು. ವಿವಾದದ ನಡುವೆಯೂ ಸರ್ಕಾರ ಅವರನ್ನು ಹಾವೇರಿ ವಿವಿ ಕುಲಸಚಿವರನ್ನಾಗಿ ನೇಮಕ ಮಾಡಿತ್ತು, ಇದರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಮುಡಾ ಮಾಜಿ ಆಯುಕ್ತರ ತಲೆದಂಡವಾಗಿದೆ. ದಿನೇಶ್ ಕುಮಾರ್ ಅವರನ್ನು ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರತಿಕ್ರಿಯಿಸಿದ್ದು, ಶೇಕಡ 50:50ರ ಅನುಪಾತದಲ್ಲಿ ಪೂರ್ವಾನ್ವಯವಾಗಿ ನಿವೇಶನ ಪಡೆಯುವುದು ನಿಯಮಬಾಹಿರ ಎಂದು ನಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೇಮಿಸಿದ್ದ ತಾಂತ್ರಿಕ ಸಮಿತಿ ಕಳೆದ 3-11-2023 ರಂದೇ ಕಾಂಗ್ರೆಸ್ ಸರ್ಕಾರಕ್ಕೆ ವಿಸ್ತೃತ ವರದಿ ಸಲ್ಲಿಸಿತ್ತು. ಈ ವರದಿಯಲ್ಲಿ ಮುಡಾದಲ್ಲಿ ನಡೆಯುತ್ತಿದ್ದ ಬ್ರಹ್ಮಾಂಡ ಭ್ರಷ್ಟಾಚಾರಗಳ ಬಗ್ಗೆ ಪೂರ್ಣ ಮಾಹಿತಿಯನ್ನು ನೀಡಲಾಗಿತ್ತು.

ಕಾಂಗ್ರೆಸ್ ಸರ್ಕಾರದ ಭ್ರಷ್ಟ ಹಗರಣಗಳ ರಕ್ಷಣೆಯ ಪ್ರತೀಕವೆಂಬಂತೆ ಧೂಳು ಹಿಡಿದು ಕುಳಿತಿದ್ದ ತಾಂತ್ರಿಕ ಸಮಿತಿಯ ತನಿಖಾ ವರದಿಯ ಪ್ರತಿಯನ್ನು ನಾವು ಬಿಡುಗಡೆ ಮಾಡಿದ ನಂತರ ಗತ್ಯಂತರವಿಲ್ಲದೆ ಕೈಗೆತ್ತಿಕೊಂಡು ಇದೀಗ ಮುಡಾ ಬ್ರಹ್ಮಾಂಡ ಭ್ರಷ್ಟಾಚಾರದ ರೂವಾರಿಗಳಲ್ಲೊಬ್ಬರಾದ ಹಿಂದಿನ ಆಯುಕ್ತ ಜಿ. ಟಿ.ದಿನೇಶ್ ಕುಮಾರ್ರನ್ನು ಅಮಾನತ್ತು ಗೊಳಿಸಲಾಗಿದೆ.

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ’ ಕನಿಷ್ಟ ಈಗಲಾದರೂ ಲೂಟಿಕೋರ ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಿದೆ. ಸರ್ಕಾರ ಈ ಕೂಡಲೇ 50:50 ಅನುಪಾತದಲ್ಲಿ ಮುಡಾದಲ್ಲಿ ವಿತರಣೆಯಾಗಿರುವ ಸಾವಿರಾರು ನಿವೇಶನಗಳ ಕ್ರಯವನ್ನು ರದ್ದುಗೊಳಿಸಿ ಅಧಿಸೂಚನೆ ಹೊರಡಿಸಲಿ.

ಅಮಾನತ್ತಿಗೆ ನೀಡಿರುವ ಕಾರಣಗಳಲ್ಲಿ ಶೇಕಡ 50:50ರ ಅನುಪಾತದಲ್ಲಿ ನಿಯಮ ಬಾಹಿರವಾಗಿ ನಿವೇಶನಗಳನ್ನು ವಿತರಿಸಿರುವ ಅಂಶವನ್ನು ಪ್ರಮುಖವಾಗಿ ಉಲ್ಲೇಖಿಸಲಾಗಿದೆ, ಇದು ಏನು ಹೇಳುತ್ತದೆ ಎಂದರೆ ಶೇ 50:50ರ ಅನುಪಾತದಲ್ಲಿ ಪೂರ್ವನ್ವಯವಾಗಿ ಸಿದ್ದರಾಮಯ್ಯನವರ ಪತ್ನಿಯವರಿಗೆ ಮಂಜೂರಾಗಿರುವ 14 ನಿವೇಶನಗಳು ಸಂಪೂರ್ಣ ಅಕ್ರಮ ಹಾಗೂ ನಿಯಮಬಾಹಿರ ಎಂಬುದು ಸ್ಪಷ್ಟವಾಗಿದೆ.

ವಿಚಿತ್ರವೆಂದರೆ ಮುಖ್ಯಮಂತ್ರಿಗಳ ಕುಟುಂಬಕ್ಕೆ 14 ನಿವೇಶನಗಳನ್ನು ಬಳುವಳಿ ನೀಡಿದ ಹಿಂದಿನ ಆಯುಕ್ತರೊಬ್ಬರ ವಿರುದ್ಧ ಯಾವುದೇ ಕ್ರಮ ಜರುಗಿಸದೇ ಋಣ ಸಂದಾಯಮಾಡಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನ್ಯಾಯಾಲಯದ ಆದೇಶವನ್ನು ಕಾಯುವ ಅಗತ್ಯವಾದರೂ ಏನಿದೆ? ಸರ್ಕಾರವೇ ನಿಮ್ಮ ಧರ್ಮಪತ್ನಿ ಅವರು ಪಡೆದಿರುವ ನಿವೇಶನಗಳು ಅಕ್ರಮ ಹಾಗೂ ನಿಯಮ ಬಾಹಿರ ಎಂದು ಹೇಳಿರುವಾಗ ಈಗಲಾದರೂ ತಮ್ಮ ಭಂಡತನವನ್ನು ಪಕ್ಕಕ್ಕೆ ಸರಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸ್ಥಾನದ ಘನತೆಗೆ ಬಂದಿರುವ ಚ್ಯುತಿಯನ್ನು ಹೋಗಲಾಡಿಸಿ ಗೌರವ ಉಳಿಸಿಕೊಳ್ಳಿ ಎಂದು ಬಿ.ವೈ ವಿಜಯೇಂದ್ರ ಹೇಳಿದ್ದಾರೆ.

Leave a Reply

Your email address will not be published. Required fields are marked *