ಬೀದರ್: ಮುಸ್ಲಿಂಮರ ಕೆಲಸವನ್ನು ಸಚಿವ ಈಶ್ವರ ಖಂಡ್ರೆ ತಲೆಬಾಗಿ ಮಾಡಬೇಕಾಗುತ್ತದೆ. ಏಕೆಂದರೆ ಲೋಕಸಭೆ ಚುನಾವಣೆಯಲ್ಲಿ ಬೀದರ್ನಲ್ಲಿ ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆ ಗೆದ್ದಿದ್ದೇ ಮುಸ್ಲಿಮರ ಮತಗಳಿಂದ ಎಂದು ಹೇಳಿ ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ಸಚಿವ ಜಮೀರ್ ಅಹ್ಮದ್ ಖಾನ್ ವಿವಾದ ಮೈಮೇಲೆ ಎಳೆದುಕೊಂಡಿದ್ದರು.ವಿವಾದ ದೊಡ್ಡದಾಗುತ್ತಿದ್ದಂತೆ ಉಲ್ಟಾ ಹೊಡೆದಿದ್ದಾರೆ.
ಬೀದರ್ನಲ್ಲಿಂದು ಸ್ಪಷ್ಟನೆ ನೀಡಿದ ಅವರು, ಮುಸ್ಲಿಮರು ಒನ್ಸೈಡ್ ಮತ ನೀಡಿದ್ರು ಎಂದಿದ್ದೇನೆ. ಸಾಗರ್ ಖಂಡ್ರೆ 6 ಲಕ್ಷ ವೋಟ್ ಪಡೆದಿದ್ದಾರೆ. ಮುಸ್ಲಿಮರು 2 ಲಕ್ಷ ವೋಟ್ ನೀಡಿದ್ದಾರೆ. ಕೇವಲ 2 ಲಕ್ಷ ವೋಟ್ನಿಂದ ಗೆಲ್ಲಲು ಸಾಧ್ಯನಾ? ನನ್ನ ಹೇಳಿಕೆಯಲ್ಲಿ ತಪ್ಪೇನಿದೆ ಎಂದು ಕೇಳಿದ್ದಾರೆ.
ಕೇವಲ ಮುಸ್ಲಿಮರು ಮಾತ್ರವಲ್ಲ, ನೀವೆಲ್ಲ ಸೇರಿ ಮತ ನೀಡಿದ್ದೀರಿ. ಎಂಪಿನೂ ನಮ್ಮವರೂ, ಸಚಿವರೂ ನಮ್ಮವರಿದ್ದಾರೆ. ಆ ಕಾರಣಕ್ಕೆ ಗೆದ್ದಿದ್ದಾರೆ ಎಂದು ಹೇಳಿದ್ದೇನೆ. ಇಷ್ಟು ವರ್ಷ ನಮ್ಮ ಎಂಪಿ ಇರಲಿಲ್ಲ, ಬಿಜೆಪಿ ಎಂಪಿ ಇದ್ದರು. ಈಗ ನಮ್ಮ ಎಂಪಿ ಬಂದಿದ್ದಾರೆ, ಕೆಲಸ ಮಾಡಿಸಿಕೊಳ್ಳಬಹುದು ಎಂದಿದ್ದೇನೆ. ಇದರಲ್ಲಿ ತಪ್ಪೇನಿದೆ ಎಂದು ಕೇಳಿದರು.