ಕಲಬುರಗಿ: ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಕರ್ನಾಟಕದಲ್ಲಿ ಆರ್ಎಸ್ಎಸ್ ಅನ್ನು ನಿಷೇಧಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ. ಮತ್ತೊಂದೆಡೆ, ಅವರದೇ ತವರು ಜಿಲ್ಲೆ ಕಲಬುರಗಿಯಲ್ಲಿ, ಅವರದೇ ಪಕ್ಷದ ಶಾಸಕ ಎಂವೈ ಪಾಟೀಲ್ ಒಡೆತನದ ಶಾಲೆಯಲ್ಲಿ ಭಾನುವಾರ ಸಂಜೆ ಆರ್ಎಸ್ಎಸ್ ಬೈಠಕ್ ನಡೆದಿದೆ. ಅಷ್ಟೇ ಅಲ್ಲದೆ, ಶಾಲೆಯ ಆವರಣದಲ್ಲಿ ಆರ್ಎಸ್ಎಸ್ ಪಥಸಂಚಲನ ಕೂಡ ನಡೆದಿದೆ. ಅಫಜಲಪುರ ಕಾಂಗ್ರೆಸ್ ಶಾಸಕ ಎಂವೈ ಪಾಟೀಲ್ ಒಡೆತನದ ಮಹಾಂತೇಶ್ವರ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಅನುದಾನಿತ ಶಾಲೆ ಆವರಣದಲ್ಲಿಯೇ ಬೌದ್ಧಿಕ ಕಾರ್ಯಕ್ರಮ ನಡೆದಿದೆ.
ಶಾಲೆಯಲ್ಲಿ ಆರ್ಎಸ್ಎಸ್ ಬೈಠಕ್ ಬಗ್ಗೆ ಎಂವೈ ಪಾಟೀಲ್ ಹೇಳಿದ್ದೇನು?
ಮಹಾಂತೇಶ್ವರ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಅನುದಾನಿತ ಶಾಲೆ ಆವರಣದಲ್ಲಿ ಆರ್ಎಸ್ಎಸ್ ಪಥಸಂಚಲನ ನಡೆಸಿದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಶಾಲೆ ಸಾರ್ವಜನಿಕರ ಸ್ವತ್ತು. ಇಲ್ಲಿಯವರೆಗೆ ಎಲ್ಲಾ ಪಕ್ಷದವರಿಗೆ ಕಾರ್ಯಕ್ರಮ ಮಾಡಿಕೊಡಲು ಜಾಗ ಕೊಟ್ಟಿದ್ದೇವೆ. ನಮ್ಮದು ದ್ರಾವಿಡ, ಬುಡಕಟ್ಟು ಮನಸ್ಥಿತಿ. ಆದರೆ, ಆರ್ಎಸ್ಎಸ್ ಅವರನ್ನು ಆರ್ಯ ಸಮಾಜ ಪರಿಕಲ್ಪನೆ ಇದೆ. ಆರ್ಎಸ್ಎಸ್ ಮೂಲ ಉದ್ದೇಶವೇ ಬೇರೆ. ಅವರು ನಡೆದುಕೊಳ್ಳುತ್ತಿರುವ ರೀತಿಯೇ ಬೇರೆ ಎಂದರು.
ಆರ್ಎಸ್ಎಸ್ ನಿಷೇಧ ಬಗ್ಗೆ ಎಂವೈ ಪಾಟೀಲ್ ಹೇಳಿದ್ದೇನು?
ಆರ್ಎಸ್ಎಸ್ ಚಟುವಟಿಕೆ ನಿಷೇಧ ಕುರಿತು ಸಿಎಂಗೆ ಪ್ರಿಯಾಂಕ್ ಖರ್ಗೆ ಪತ್ರ ಬರೆದಿರುವ ಬಗ್ಗೆ ಕಲಬುರಗಿಯಲ್ಲಿ ಕಾಂಗ್ರೆಸ್ ಶಾಸಕ ಎಂ.ವೈ.ಪಾಟೀಲ್ ಪ್ರತಿಕ್ರಿಯಿಸಿದ್ದು, ಅದಕ್ಕೆ ಯಾವುದೇ ಆಕ್ಷೇಪವಿಲ್ಲ. ಆರ್ಎಸ್ಎಸ್ ಸಂಘಟನೆ ಉದ್ದೇಶ ಸರಿಯಲ್ಲ. ಅವರಲ್ಲೂ ಸ್ವಾತಂತ್ರ್ಯಕ್ಕೆ ಬಲಿಯಾದವರು ಒಬ್ಬರೋ ಇಬ್ಬರೋ ಇರಬಹುದು. ಆರ್ಎಸ್ಎಸ್ನವರು ಲಾಠಿ ಬಿಟ್ಟು ತಿರಂಗಾ ಬಾವುಟ ಹಿಡಿಯಲಿ. ಅವರು ತಿರಂಗಾ ಬಾವುಟ ಹಿಡಿದ್ರೆ ನಾವು ಸ್ವಾಗತ ಮಾಡುತ್ತೇವೆ. ಅದು ಬಿಟ್ಟು ಲಾಠಿ ಹಿಡಿದು ಪಥಸಂಚಲನ ಮಾಡಿದರೆ ಖಂಡಿಸುತ್ತೇವೆ ಎಂದಿದ್ದಾರೆ.
ಆರ್ಎಸ್ಎಸ್ ಯಾಕೆ ಕೇಂದ್ರ ಕಚೇರಿ ಮೇಲೆ ತಿರಂಗಾ ಬಾವುಟ ಹಾರಿಸಲ್ಲ? ಅದು ದೇಶ ಕಟ್ಟುವ ಸಂಘಟನೆ ಅಲ್ಲ, ಬದಲಾಗಿ ದೇಶ ಒಡೆಯುವ ಸಂಘಟನೆ ಎಂದು ಎಂವೈ ಪಾಟೀಲ್ ಹೇಳಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ರಾಜ್ಯದೆಲ್ಲೆಡೆ ಸಂಘದ ಪಥಸಂಚಲನ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದು ಸಂಘಟದ ಚಟುವಟಿಕೆಗಳ ನಿಷೇಧಕ್ಕೆ ಮನವಿ ಮಾಡಿದ್ದಾರೆ. ಆದರೆ, ಅದೇ ಸಮಯದಲ್ಲಿ ಅವರದೇ ಪಕ್ಷದ ಶಾಸಕರೊಬ್ಬರ ಒಡೆತನದ ಶಾಲೆಯಲ್ಲೇ ಆರ್ಎಸ್ಎಸ್ ಕಾರ್ಯಕ್ರಮ ನಡೆದಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.
For More Updates Join our WhatsApp Group :
