ಪುಣೆ : ಕಾಂಗ್ರೆಸ್ ಪಕ್ಷ ಜಮ್ಮು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿಯನ್ನು ಮರುಸ್ಥಾಪಿಸಲು ಬಯಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿರುವುದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ವಿವಾದಿತ ವಿಧಿಯನ್ನು ಸಂಸತ್ತೇ ರದ್ದುಗೊಳಿಸಿದೆ ಎಂದು ತಿಳಿಸಿದರು.
ಈ ಕುರಿತು ಗುರುವಾರ ಪುಣೆಯಲ್ಲಿ ಮಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, “ಸಮಾಜವನ್ನು ವಿಭಜಿಸಲು 370ನೇ ವಿಧಿಯನ್ನು ಬಿಜೆಪಿ ಜೀವಂತವಿರಿಸುತ್ತಿದೆ” ಎಂದು ಆರೋಪಿಸಿದರು. “ಅಮಿತ್ ಶಾ ಅವರು ಚುನಾವಣಾ ಪ್ರಚಾರ ಸಭೆಗಳಲ್ಲಿ ಕಾಂಗ್ರೆಸ್ ಕುರಿತು ಸುಳ್ಳು ಮಾಹಿತಿ ಹರಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ಮರುಸ್ಥಾಪಿಸುತ್ತದೆ ಎಂದು ಹೇಳಿದ್ದಾರೆ. ಇದನ್ನು ಯಾರು, ಯಾವಾಗ ಹೇಳಿದರು ಎಂದು ನೀವು ಹೇಳಿ. ನೀವು ವಿಷಯವನ್ನು ಹುಟ್ಟು ಹಾಕುತ್ತಿದ್ದೀರಿ. ಸಂವಿಧಾನದ 320ನೇ ವಿಧಿಯನ್ನು ರದ್ದುಪಡಿಸುವ ನಿರ್ಣಯವನ್ನು ಸಂಸತ್ತು ಅಂಗೀಕರಿಸಿದೆ. ಹೀಗಾಗಿ ಈ ವಿಷಯವನ್ನು ಯಾಕೆ ಪ್ರಸ್ತಾಪಿಸುತ್ತಿದ್ದೀರಿ?, ಸಮಾಜವನ್ನು ವಿಭಜಿಸಲು ಈ ವಿಷಯವನ್ನು ನೀವು ಜೀವಂತವಾಗಿಡುತ್ತಿದ್ದೀರಿ ಎಂದೇ ಇದರರ್ಥ. ನೀವಿದನ್ನು ಕಾಶ್ಮೀರಕ್ಕೆ ಹೋಗಿ ಹೇಳಿ. ಅಲ್ಲಿ ಈಗ ಚುನಾವಣೆ ಮುಗಿದಿದೆ” ಎಂದು ಟೀಕಿಸಿದರು.
ಜಮ್ಮು ಕಾಶ್ಮೀರದಲ್ಲಿ ಆಡಳಿತದಲ್ಲಿರುವ ನ್ಯಾಷನಲ್ ಕಾನ್ಪರೆನ್ಸ್ ಪಕ್ಷದೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ. ವಿಶೇಷ ವಿಧಿ ಮರುಸ್ಥಾಪನೆಯ ಕುರಿತಾಗಿ ಕೇಂದ್ರ ಸರ್ಕಾರವು ಜಮ್ಮು ಕಾಶ್ಮೀರದ ಚುನಾಯಿತ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಬೇಕು ಎಂದು ಕಳೆದ ವಾರ ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು.
ಇದೇ ಸಂದರ್ಭದಲ್ಲಿ ಖರ್ಗೆ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ‘ಬಾಟೆಂಗೆ ತೋ ಕಾಟೆಂಗೇ’ (ನಾವು ವಿಭಜನೆಯಾದರೆ ನಾಶವಾಗುತ್ತೇವೆ) ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, ಇಂಥ ಘೋಷಣೆಗಳ ಹಿಂದಿನ ತಾರ್ಕಿಕತೆಯನ್ನು ಪ್ರಶ್ನಿಸಿದರು. “ಇಂಥ ಘೋಷಣೆಗಳು ಯಾಕೆ?. ದೇಶ ಒಗ್ಗಟ್ಟಾಗಿದೆ. ದೇಶವನ್ನು ಒಗ್ಗಟ್ಟಾಗಿಡಲು ಕಾಂಗ್ರೆಸ್ ಸಾಕಷ್ಟು ಕೆಲಸ ಮಾಡಿದೆ. ಇದಕ್ಕಾಗಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ತಮ್ಮ ಪ್ರಾಣತ್ಯಾಗ ಮಾಡಿದರು. ಮಹಾತ್ಮಾ ಗಾಂಧಿ ಅವರ ಹತ್ಯೆಯಾಯಿತು. ಇದೆಲ್ಲವನ್ನೂ ಕಾಂಗ್ರೆಸ್ ದೇಶಕ್ಕಾಗಿ ಮಾಡಿತು. ಅದರೆ ನೀವು ದೇಶದ ಒಗ್ಗಟ್ಟು, ಸ್ವಾತಂತ್ರ್ಯ ಅಥವಾ ಬಡವರಿಗಾಗಿ ಯಾವುದೇ ಹೋರಾಟ ಮಾಡಿದವರಲ್ಲ” ಎಂದು ವಾಗ್ದಾಳಿ ನಡೆಸಿದರು.
ಎಸ್ಸಿ, ಎಸ್ಟಿ ಸಮುದಾಯದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಿದ್ದು ಕಾಂಗ್ರೆಸ್ ಪಕ್ಷ. ಇದಕ್ಕೆ ಅನುಮೋದನೆ ದೊರಕಿಸಿಕೊಡಲು ದೇಶದ ಮೊದಲ ಪ್ರಧಾನಿ ನೆಹರು ಮತ್ತು ಡಾ.ಅಂಬೇಡ್ಕರ್ ಕೆಲಸ ಮಾಡಿದ್ದರು. ಆದರೆ ಈಗ ಬಿಜೆಪಿಯವರು ಮೀಸಲಾತಿ ವಿಚಾರವನ್ನು ಮುನ್ನೆಲೆಗೆ ತಂದು ಮಾತನಾಡುತ್ತಿದ್ದಾರೆ ಎಂದರು.
ಇದೇ ವೇಳೆ ಖರ್ಗೆ, ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಬಿಜೆಪಿ 50 ಶಾಸಕರಿಗೆ ತಲಾ 50 ಕೋಟಿ ರೂಪಾಯಿ ಆಮಿಷ ಒಡ್ಡಿದೆ ಎಂಬ ಸಿಎಂ ಸಿದ್ದರಾಮಯ್ಯ ಆರೋಪವನ್ನು ಬೆಂಬಲಿಸಿದರು.