ಬೆಂಗಳೂರು: ಪ್ರತಿ ವರ್ಷ ಖಾಸಗಿ ಶಾಲಾ ಕಾಲೇಜುಗಳು ಲಕ್ಷ ಲಕ್ಷ ರೂಪಾಯಿ ಶುಲ್ಕ ಏರಿಕೆ ಮಾಡಿ ಸುಲಿಗೆ ಮಾಡುತ್ತವೆ. ಇದಕ್ಕೆ ಕಡಿವಾಣ ಹಾಕುವಂತೆ ಪೋಷಕರು ಆಗ್ರಹಿಸುತ್ತಲೇ ಬಂದಿದ್ದಾರೆ. ಈಗ ಪ್ರೊಫೆಸರ್ ಥೋರಟ್ ನೇತೃತ್ವದ ರಾಜ್ಯ ಪಠ್ಯಕ್ರಮ ಸಮಿತಿ ಶುಲ್ಕ ನಿಯಂತ್ರಣ ಕಾಯ್ದೆ ಜಾರಿ ಬಗ್ಗೆ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಶುಲ್ಕ ನಿಯಂತ್ರಣ ವಿಚಾರದಲ್ಲಿ ಕಾಯ್ದೆ ರೂಪಿಸಲು ಪ್ರತ್ಯೇಕ ಸಮಿತಿ ರಚಿಸಲು ಸರ್ಕಾರಕ್ಕೆ ಶಿಫಾರಸು ಮಾಡಿದೆ. ಇದರೊಂದಿಗೆ, ಖಾಸಗಿ ಶಾಲೆಗಳಿಗೆ ಮೂಗುದಾರ ಹಾಕಲು ಶಿಕ್ಷಣ ಇಲಾಖೆ ತಯಾರಿ ಮಾಡಿದಂತಾಗಿದೆ.
ಪ್ರತ್ಯೇಕ ಶಾಲಾ ಶುಲ್ಕ ನಿಯಂತ್ರಣ ಮಂಡಳಿಗೆ ಎಸ್ಇಪಿ ಶಿಫಾರಸು ಮಾಡಿದ್ದು, ಈ ಸಂಬಂಧ ಮುಖ್ಯಮಂತ್ರಿಗಳಿಗೂ ವರದಿ ಸಲ್ಲಿಸಿದೆ. ಈ ವರದಿಯಲ್ಲಿ, ಶಾಲಾ ಹಂತದಲ್ಲಿ ಆಗಬೇಕಾದ ಬದಲಾವಣೆಗಳ ಬಗ್ಗೆ ಉಲ್ಲೇಖ ಮಾಡಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಖಾಸಗಿ ಕಾಲೇಜುಗಳು ಆಡಿದ್ದೇ ಆಟ ಎಂಬಂತಾಗಿದೆ. ಅವರು ನಿಗದಿ ಮಾಡಿದ್ದೇ ಶುಲ್ಕ ಎನ್ನುವಂತಾಗಿದೆ. ಪ್ರತಿವರ್ಷ ಶೇ 20 ರಿಂದ 30 ರಷ್ಟು ಶುಲ್ಕ ಏರಿಕೆ ಮಾಡಿಕೊಂಡು ಪೋಷಕರ ಪರದಾಟಕ್ಕೆ ಕಾರಣವಾಗಿದೆ. ಹೀಗಾಗಿ ಎಸ್ಇಪಿ ಖಾಸಗಿ ಶಾಲಾ ಕಾಲೇಜುಗಳ ಶುಲ್ಕಕ್ಕೆ ಬ್ರೇಕ್ ಹಾಕಲು ಮುಂದಾಗಿದೆ. ಎಸ್ಇಪಿ ಮಾಡಿರುವ ಶಿಫಾರಸಿಗೆ ಕೆಲವು ಖಾಸಗಿ ಶಾಲಾ ಒಕ್ಕೂಟಗಳಿಂದಲೂ ಬೆಂಬಲ ವ್ಯಕ್ತವಾಗಿದೆ.
ಒಟ್ಟಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಮಾತ್ರ ಯಾವುದನ್ನೂ ಲೆಕ್ಕಿಸದೇ, ಪ್ರತಿ ವರ್ಷ ಶುಲ್ಕ ಏರಿಕೆ ಮಾಡಿಕೊಂಡು ಕಾಸು ಮಾಡಲು ಮುಂದಾಗಿದ್ದು ಪೋಷಕರು ಪರದಾಡುವ ಸ್ಥಿತಿ ಎದುರಗಿದೆ. ಹೀಗಾಗಿ ಶುಲ್ಕ ನಿಯಂತ್ರಣ ಸಮಿತಿ ರಚನೆಗೆ ಎಸ್ಇಪಿ ಈಗ ಶಿಫಾರಸು ಮಾಡಿದ್ದು, ಸರ್ಕಾರ ಮುಂದಿನ ವರ್ಷದಿಂದಲೇ ಸಮಿತಿ ರಚಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
For More Updates Join our WhatsApp Group :




