ರಾಜೀವ್ ಗೌಡಗೆ ಹೈಕೋರ್ಟ್ ಕಠಿಣ ತರಾಟೆ.
ಬೆಂಗಳೂರು: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಹಾಕಿರುವ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಸದ್ಯ ತಲೆ ಮರೆಸಿಕೊಂಡಿದ್ದಾರೆ. ಕೈ ಮುಖಂಡ ಬಂಧನ ವಿಳಂಬ ಖಂಡಿಸಿ ಬಿಜೆಪಿ ನಾಯಕರು ಕಿಡಿಕಾರುತ್ತಿದ್ದಾರೆ. ಪ್ರಕರಣ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಕ್ಷಮೆ ಕೂಡ ಕೇಳಿದ್ದರು. ಇನ್ನು ಎಫ್ಐಆರ್ FIR ರದ್ದು ಕೋರಿ ಅರ್ಜಿ ವಿಚಾರಣೆ ಮಾಡಿದ ಹೈಕೋರ್ಟ್ ಪೀಠ ರಾಜೀವ್ ಗೌಡಗೆ ತರಾಟೆ ತೆಗೆದುಕೊಂಡಿದ್ದು, ಆದೇಶ ಕಾಯ್ದಿರಿಸಿದೆ.
ಸಾರ್ವಜನಿಕವಾಗಿ ಕ್ಷಮೆ ಕೇಳಲು ರಾಜೀವ್ ಗೌಡ ಸಿದ್ಧರಿದ್ದಾರೆ: ಹಿರಿಯ ವಕೀಲ ವಿವೇಕ್ ರೆಡ್ಡಿ ವಾದ
ಶಿಡ್ಲಘಟ್ಟ ನಗರಸಭೆ ಆಯುಕ್ತೆಗೆ ಜೀವ ಬೆದರಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ FIR ರದ್ದು ಕೋರಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅರ್ಜಿ ಸಲ್ಲಿಸಿದ್ದರು. ಕಾಂಗ್ರೆಸ್ ಮುಖಂಡನ ಪರವಾಗಿ ಹಿರಿಯ ವಕೀಲ ವಿವೇಕ್ ರೆಡ್ಡಿ ವಾದ ಮಂಡಿಸಿದರು. ಫೋನ್ ಮೂಲಕ ಆಡಿದ ಮಾತಿಗೆ ಮಾಧ್ಯಮದಲ್ಲೇ ಕ್ಷಮೆ ಕೇಳಿದ್ದಾರೆ. ಬಿಎನ್‌ಎಸ್ ಸೆಕ್ಷನ್ 132 ಈ ಕೇಸಿನಲ್ಲಿ ಅನ್ವಯಿಸುವುದಿಲ್ಲ. ಸಾರ್ವಜನಿಕವಾಗಿ ಕ್ಷಮೆ ಕೇಳಲು ರಾಜೀವ್ ಗೌಡ ಸಿದ್ಧರಿದ್ದಾರೆ. ತನಿಖೆಗೆ ಸಹಕರಿಸಲು ಸಿದ್ಧರಿರುವುದರಿಂದ ರಕ್ಷಣೆಗೆ ಮನವಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಈ ವೇಳೆ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ಅರ್ಜಿದಾರರ ವಿರುದ್ಧ ಬಿಎನ್‌ಎಸ್ ಸೆಕ್ಷನ್ 74, 79 ಏಕೆ ಹಾಕಿಲ್ಲ? ಅರ್ಜಿದಾರನಿಗೆ ಮಹಿಳೆಯರೆಂದರೆ ಗೌರವ ಇಲ್ಲವೇ ಎಂದು ಪ್ರಶ್ನೆ ಮಾಡಿದೆ. ಅರ್ಜಿದಾರ ಇಂತಹ ಮಾತನ್ನೆಲ್ಲಾ ಹೇಗೆ ಆಡಲು ಸಾಧ್ಯ? ಒಮ್ಮೆ ಮಾತನಾಡಿದರೆ ವಾಪಸ್ ಪಡೆಯಲು ಆಗುವುದಿಲ್ಲ. ನಿಯಂತ್ರಣವಿಲ್ಲದ ನಾಲಿಗೆಯೇ ಎಲ್ಲವನ್ನೂ ಹಾಳುಮಾಡಬಲ್ಲದು. ನೀವು ಕ್ಷಮೆ ಕೇಳಿದರೂ ಒಡೆದಿರುವುದು ಒಂದಾಗುವುದಿಲ್ಲ ಎಂದು ತರಾಟೆ ತೆಗೆದುಕೊಂಡ ಹೈಕೋರ್ಟ್, ಆ ಮೂಲಕ ರಾಜೀವ್ ಗೌಡ ಅರ್ಜಿ ಸಂಬಂಧ ಆದೇಶ ಕಾಯ್ದಿರಿಸಿದೆ.
ಇನ್ನು ರಾಜೀವ್ ಗೌಡ ವಿರುದ್ಧ ಶಿಡ್ಲಘಟ್ಟ ಟೌನ್ ಪೊಲೀಸ್ ಠಾಣೆಯಲ್ಲಿ ಎರಡು FIR ದಾಖಲಾಗಿವೆ. ಒಂದು ನಗರಸಭೆ ಪೌರಾಯುಕ್ತೆ ಅಮೃತಾಗೌಡ ನೀಡಿದ ದೂರು, ಮತ್ತೊಂದು ಶಾಸಕ ರವಿಕುಮಾರ್ ಪರ ಜೆಡಿಎಸ್ ಕೊಟ್ಟ ದೂರು. ಈ ನಡುವೆ ರಾಜೀವ್ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.
For More Updates Join our WhatsApp Group :




