ಗುತ್ತಿಗೆದಾರರ ಸಂಘದ ಎಚ್ಚರಿಕೆ: ಮಾರ್ಚ್ 5 ರೊಳಗೆ ಸ್ಪಂದಿಸದಿದ್ದರೆ ಎಲ್ಲಾ ಸರ್ಕಾರಿ ಕಾಮಗಾರಿಗಳು ಬಂದ್.
ಬೆಂಗಳೂರು: ರಾಜ್ಯ ಸರ್ಕಾರವು ಗುತ್ತಿಗೆದಾರರಿಗೆ ಪಾವತಿಸಬೇಕಿರುವ ಸಾವಿರಾರು ಕೋಟಿ ರೂಪಾಯಿಗಳ ಬಾಕಿ ಬಿಲ್ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ, ರಾಜ್ಯ ಗುತ್ತಿಗೆದಾರರ ಸಂಘವು ಸರ್ಕಾರದ ವಿರುದ್ಧ ನೇರ ಸಮರ ಸಾರಿದೆ. ‘ಮಾರ್ಚ್ 5 ರೊಳಗೆ ಬಾಕಿ ಹಣ ಬಿಡುಗಡೆ ಮಾಡದಿದ್ದರೆ ಅಥವಾ ಮುಖ್ಯಮಂತ್ರಿಯವರು ಸಭೆ ಕರೆದು ಚರ್ಚಿಸದಿದ್ದರೆ ರಾಜ್ಯಾದ್ಯಂತ ಎಲ್ಲಾ ಇಲಾಖೆಗಳ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗುವುದು’ ಎಂದು ಸಂಘದ ಅಧ್ಯಕ್ಷ ಆರ್. ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್. ಮಂಜುನಾಥ್, ಬಾಕಿ ಉಳಿದಿರುವ 37,370 ಕೋಟಿ ರೂ.ಗಳ ವಿವರ ಬಿಡುಗಡೆ ಮಾಡಿದರು. ಅವರು ಹೇಳಿದ ಪ್ರಕಾರ ಇಲಾಖಾವಾರು ಬಾಕಿ ವಿವರ ಹೀಗಿದೆ;
ಇಲಾಖೆಯ ಹೆಸರು – ಬಾಕಿ ಮೊತ್ತ (ಕೋಟಿ ರೂ.ಗಳಲ್ಲಿ)
- ಲೋಕೋಪಯೋಗಿ ಇಲಾಖೆ (PWD) – 13,000
- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR) – 3,800
- ಸಣ್ಣ ನೀರಾವರಿ ಇಲಾಖೆ – 3,000
- ನಗರಾಭಿವೃದ್ದಿ ಇಲಾಖೆ – 2,000
- ವಸತಿ ಮತ್ತು ವಕ್ಫ್ ಇಲಾಖೆ – 2,600
- ಕಾರ್ಮಿಕ ಇಲಾಖೆ – 2,000
- ಗಣಿ ಮತ್ತು ಭೂವಿಜ್ಞಾನ (GBA) – 2,600
- ಒಟ್ಟು – 37,370
ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ ಆರ್. ಮಂಜುನಾಥ್, ಈ ಸರ್ಕಾರದಲ್ಲಿ ಹಣ ಬಿಡುಗಡೆ ವಿಚಾರದಲ್ಲಿ ಭ್ರಷ್ಟಾಚಾರ ಮತ್ತು ಪರ್ಸಂಟೇಜ್ ಪ್ರಮಾಣ ಹೆಚ್ಚಾಗಿದೆ ಎಂದು ಪರೋಪಕ್ಷವಾಗಿ ಉಲ್ಲೇಖಿಸಿದರು. ಈ ಹಿಂದೆ ಕೆಂಪಣ್ಣ ಅವರು 40% ಆರೋಪ ಮಾಡಿದ್ದರು. ಈಗ ನಿಮ್ಮ ಸಹಕಾರ ಇದ್ದರೆ ದಯಮಾಡಿ ಅದನ್ನ ಕಡಿಮೆ ಮಾಡಿಸಿ ಎಂದು ಮಂಜುನಾಥ್ ಆಗ್ರಹಿಸಿದರು.
10 ಮಹಾನಗರ ಪಾಲಿಕೆಗಳಲ್ಲಿ ಮತ್ತು ಕಾರ್ಮಿಕ ಇಲಾಖೆಯಲ್ಲಿ ಸ್ಥಳೀಯ ಗುತ್ತಿಗೆದಾರರಿಗೆ ಅನ್ಯಾಯವಾಗುವಂತೆ ಪ್ಯಾಕೇಜ್ ಟೆಂಡರ್ ಮಾಡಲಾಗುತ್ತಿದೆ. ಆರ್‌ಟಿ ನಗರ ಮತ್ತು ರಾಜಾಜಿನಗರದ ಖಾಸಗಿ ಕಚೇರಿಗಳಲ್ಲಿ ಕುಳಿತು ಟೆಂಡರ್ ಹಂಚಿಕೆ ಮಾಡಲಾಗುತ್ತಿದೆ ಎಂದು ಅವರು ದೂರಿದ್ದಾರೆ.
For More Updates Join our WhatsApp Group :




