ಬಾಕಿ ದುಡ್ಡು ಕೊಟ್ಟರಷ್ಟೇ ರಸ್ತೆ ಗುಂಡಿ ಮುಚ್ತೀವಿ

ಬಾಕಿ ದುಡ್ಡು ಕೊಟ್ಟರಷ್ಟೇ ರಸ್ತೆ ಗುಂಡಿ ಮುಚ್ತೀವಿ!

ಬೆಂಗಳೂರಿನ ಬೀದಿ ಬೀದಿಗಳಲ್ಲಿ ರಸ್ತೆ ಗುಂಡಿಗಳ ಸಂಖ್ಯೆ ವಿಪರೀತಿವಾಗಿ ಜನ ನರಕ ಅನುಭವಿಸುತ್ತಿದ್ದಾರೆ. ಇದೀಗ ನಮ್ಗೆ ಬಿಲ್ ಕೊಟ್ರಷ್ಟೇ ನಾವು ರಸ್ತೆ ಗುಂಡಿ ಮುಚ್ಚೋದು ಅಂತಿದ್ದಾರೆ ಬಿಬಿಎಂಪಿ ಕಾಂಟ್ರ್ಯಾಕ್ಟರ್ಸ್. ನಗರದಲ್ಲಿರುವ ರಸ್ತೆ ಗುಂಡಿಗಳನ್ನೆಲ್ಲ ಮುಂದಿನ 15 ದಿನಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ತಾಕೀತು ಮಾಡಿದ್ದಾರೆ.

ಇದನ್ನು ಓದಿ : ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿ ಕಮಿಷನರ್ ಗೆ 15 ದಿನಗಳ ಗಡುವು

ಆದರೆ, ಅದು ಈ ಕಾಲಕ್ಕೆ ಈಡೇರುವಂತೆ ಕಾಣುತ್ತಿಲ್ಲ. ನಮ್ಮ ಬಾಕಿ ಬಿಲ್ ಬಿಡುಗಡೆ ಮಾಡಿ, ಆ ಮೇಲೆ ಬಾಕಿ ಕೆಲಸ ಹೇಳಿ ಅಂತಿದ್ದಾರೆ ಗುತ್ತಿಗೆದಾರರು.

ಈಗಾಗಲೇ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳು ಯಮಸ್ವರೂಪಿ ರೂಪ ಪಡೆದುಕೊಂಡಿದ್ದು, ಜನ ಹಾಗೂ ವಾಹನ ಸವಾರರು ಸಂಕಷ್ಟ ಅನುಭ ವಿಸುತ್ತಿದ್ದಾರೆ. ಇದರ ನಡುವೆ ಬಿಬಿಎಂಪಿಯ ಗುತ್ತಿಗೆದಾರರು ಬಾಕಿ ಬಿಲ್ ಕೊಟ್ಟು ಕೆಲಸ ಹೇಳಿ ಅಂತಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗುತ್ತಿಗೆದಾರರ ಸಂಘದ ಅಧ್ಯಕ್ಷ ನಂದಕುಮಾರ್ ಮತ್ತು ಬಿಬಿಎಂಪಿ ಕಾರ್ಯನಿರತ ಗುತ್ತಿದಾರರ ಸಂಘದ ಅಧ್ಯಕ್ಷ ಕೆ.ಟಿ.ಮಂಜುನಾಥ್ ಅವರ ನೇತೃತ್ವದಲ್ಲಿ ಶೇಕಡ 25% ಬಾಕಿ ಬಿಲ್ ಬಿಡುಗಡೆಗಾಗಿ ಒತ್ತಾಯಿಸಿ ಪ್ರತಿಭಟನೆ ನಡೆದಿದೆ.

ಅಲ್ಲದೇ ಗುತ್ತಿಗೆದಾರರ ಸದಸ್ಯರು ಇಂದಿನಿಂದ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವುದು ಸೇರಿದಂತೆ ಎಲ್ಲಾ ಮಾದರಿಯ ಕಾಮಗಾರಿಗಳನ್ನು ಬಂದ್ ಮಾಡಿದ್ದಾರೆ. ಸೋಮವಾರ ಬಿಬಿಎಂಪಿಯ ಪ್ರಧಾನ ಕಚೇರಿಯ ಮುಂದೆ ನೂರಾರು ಜನ ಗುತ್ತಿಗೆದಾರರು ಪ್ರೊಟೆಸ್ಟ್ ಮಾಡಿದ್ದು,ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ವಿರುದ್ಧ ಕೆಂಡಕಾರಿದ್ದಾರೆ. ಬಿಬಿಎಂಪಿ ಗುತ್ತಿಗೆದಾರರ ಸಂಪೂರ್ಣ ಕಾಮಗಾರಿ ಬಿಲ್ ಮೊತ್ತವನ್ನು 75ರಷ್ಟು ಬಿಡುಗಡೆ ಮಾಡಲಾಗಿದೆ. ಇನ್ನುಳಿದ 25%ರಷ್ಟು ಮೊತ್ತವನ್ನು ಜಿ.ಎಸ್.ಟಿ 18% ಎನ್ನುವುದು ಸೇರಿದಂತೆ ವಿವಿಧ ವಿಷಯಗಳಿಗೆ ಕಟ್ ಮಾಡುತ್ತಿದ್ದಾರೆ. ಇದನ್ನು ತಪ್ಪಿಸಬೇಕು. ಈಗಾಗಲೇ ಗುತ್ತಿಗೆದಾರರು ಸಂಕಷ್ಟದಲ್ಲಿ ಇದ್ದೇವೆ ಎಂದು ಹೇಳಿದ್ದಾರೆ.

ಬಿಬಿಎಂಪಿಯಿಂದ ಸಂಪೂರ್ಣ ಬಿಲ್ ಪಾವತಿ ಮಾಡದೆ ಇರುವುದರಿಂದ ಗುತ್ತಿಗೆದಾರ ಸಂಕಷ್ಟದಲ್ಲಿದ್ದಾರೆ. ವಿಳಂಬ ಬಿಲ್ ಬಿಡುಗಡೆಯಿಂದಾಗಿ ಬ್ಯಾಂಕ್ಗಳಲ್ಲಿ ಸಾಲದ ಮೇಲೆ ಬಡ್ಡಿ ಏರಿಕೆಯಿಂದ ಆರ್ಥಿಕವಾಗಿ ಸಂಕಷ್ಟ ಎದುರಾಗಿದೆ. ಶೇಕಡ 25%ರಷ್ಟು ಗುತ್ತಿಗೆದಾರರಿಗೆ ಪಾವತಿ ಮಾಡಿದರೆ ಸಂಕಷ್ಟದಿಂದ ಪಾರಾಗಬಹುದು. ಹೀಗಾಗಿ, ಬೆಂಗಳೂರಿನಲ್ಲಿ ಎಲ್ಲಾ ಮಾದರಿಯ ಕಾಮಗಾರಿಗಳನ್ನು ಸೆಪ್ಟೆಂಬರ್ 2ರಿಂದ ನಿಲ್ಲಿಸುತ್ತಿದ್ದೇವೆ. ಬಾಕಿ ಬಿಲ್ ಕೊಡೊವರೆಗೂ ನಾವು ರಸ್ತೆ ಗುಂಡಿಗಳನ್ನೂ ಮುಚ್ಚುವುದಿಲ್ಲ ಎಂದು ಹೇಳಿದ್ದಾರೆ.

ಬಿಬಿಎಂಪಿ ಆಯುಕ್ತರಿಂದ ಉಡಾಫೆ ಉತ್ತರ: ಆರೋಪ

ಗುತ್ತಿಗೆದಾರರು ಬಿಬಿಎಂಪಿ ಕಮಿಷನರ್ ಮೇಲೂ ಕೆಂಡಾಮಂಡಲರಾಗಿದ್ದಾರೆ. ಗುತ್ತಿಗೆದಾರರು ಗರಂ ಆಗುವುದಕ್ಕೂ ಒಂದು ಕಾರಣ ಇದೆ. ಅದೇನೆಂದರೆ ಕಮಿಷನರ್ ಗುತ್ತಿಗೆದಾರರು ಬಾಕಿ ಬಿಲ್ ಬಿಡುಗಡೆ ಮಾಡುವಂತೆ ಕೇಳಿಕೊಂಡು ಹೋಗುವಾಗ ಗುತ್ತಿಗೆದಾರರ ಸಮಸ್ಯೆಗಳನ್ನು ಕೇಳುತ್ತಿಲ್ಲ. ಉಡಾಫೆ ಉತ್ತರ ಕೊಡ್ತಾರೆ. ನಮ್ಗೆ ರೆಸ್ಪೆಕ್ಟೇ ಕೊಡ್ತಿಲ್ಲ ಎಂದು ದೂರಿದ್ದಾರೆ. ಆದರೆ, ಗುತ್ತಿಗೆದಾರರ ಸಂಘದ ಪ್ರತಿಭಟನೆ ಹಾಗೂ ಆರೋಪದ ಬಗ್ಗೆ ಇಲ್ಲಿಯವರೆಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಯಾವುದೇ ಹೇಳಿಕೆ ಕೊಟ್ಟಿಲ್ಲ. ಆರೋಪಕ್ಕೆ ಪ್ರತಿಕ್ರಿಯೆ ನೀಡಿಲ್ಲ.

Leave a Reply

Your email address will not be published. Required fields are marked *