ನವದೆಹಲಿ: ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ನಾಯಕತ್ವದಲ್ಲಿ ಭಾರತ ಚಾಂಪಿಯನ್ಸ್ ತಂಡವು ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್-2024 ಟ್ರೋಫಿಯನ್ನು ಗೆದ್ದು ಬೀಗಿದೆ. ಶನಿವಾರ (ಜುಲೈ 12) ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧದ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗರು ಅತ್ಯದ್ಭುತವಾಗಿ ಆಡಿದರು.
ಈ ಅದ್ಧೂರಿ ಗೆಲುವಿನ ನಂತರ, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಹಾಗೂ ಸುರೇಶ್ ರೈನಾ ವಿಭಿನ್ನ ರೀತಿಯಲ್ಲಿ ಸಂಭ್ರಮಾಚಣೆ ಮಾಡಿದರು. ಅವರ ಸಂಭ್ರಮಾಚರಣೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅವರ ಸಂಭ್ರಮಾಚರಣೆ ಹಿಂದಿನ ಅರ್ಥ ಗೊತ್ತಿಲ್ಲದಿದ್ದರೂ, ಪಾಕಿಸ್ತಾನದ ವಿರುದ್ಧ ವ್ಯಂಗ್ಯವಾಗಿ ಈ ವಿಡಿಯೋ ಮಾಡಲಾಗಿದೆ ಎಂದು ಕ್ರಿಕೆಟ್ ಅಭಿಮಾನಿಗಳು ಊಹಿಸಿದ್ದಾರೆ.
ಫೈನಲ್ ಪಂದ್ಯ ಮುಗಿದ ಬಳಿಕ ಮೈದಾನದಲ್ಲಿ ಸಂಭ್ರಮಾಚರಣೆ ಮುಗಿಸಿ, ಡ್ರೆಸ್ಸಿಂಗ್ ರೂಂಗೆ ಮರಳಿದಾಗ ಭಾರತದ ಮಾಜಿ ಕ್ರಿಕೆಟಿಗರಾದ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಹಾಗೂ ಸುರೇಶ್ ರೈನಾ ಅವರು ಪೆಟ್ಟು ತಿಂದ ಮುದುಕರಂತೆ ಬಾಗಿಲು ತೆಗೆದುಕೊಂಡು ನಡೆದು ಬಂದರು. ಆದರೆ, ಮುಖದಲ್ಲಿ ಮಾತ್ರ ನಗು ಇತ್ತು.
ಈ ಸಂಭ್ರಮಾಚರಣೆಯನ್ನು ನೋಡಿದ ಕ್ರಿಕೆಟ್ ಪ್ರೇಮಿಗಳು, ಪಾಕಿಸ್ತಾನವನ್ನು ಎಳೆದುತಂದಿದ್ದಾರೆ. ಪಾಕಿಸ್ತಾನ ತಂಡದಲ್ಲಿರುವ ವೇಗದ ಬೌಲರ್ಗಳನ್ನು ವ್ಯಂಗ್ಯ ಮಾಡಿದರೇ? ಎಂದು ಕೆಲ ನೆಟ್ಟಿಗರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಏಕೆಂದರೆ, ಪಾಕ್ ಆಟಗಾರರು ಎರಡು ತಿಂಗಳಿಗೊಮ್ಮೆ ಗಾಯಗೊಂಡು ಆಟದಿಂದ ದೂರ ಸರಿಯುತ್ತಾರೆ ಮತ್ತು ಸರಿಯಾದ ಫಿಟ್ನೆಸ್ ಇಲ್ಲದಿರುವುದರಿಂದ ಭಾರತದ ಮಾಜಿ ಆಟಗಾರರು ಈ ರೀತಿ ವ್ಯಂಗ್ಯವಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಟಿ20 ವಿಶ್ವಕಪ್ ಗೆದ್ದ ಬಳಿಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ವೆರೈಟಿಯಾಗಿ ಬಂದು ಕಪ್ ಸ್ವೀಕರಿಸಿದ್ದರು. ನೀವು ಅದನ್ನು ಅನುಕರಿಸುವ ಮೂಲಕ ತಮಾಷೆ ಮಾಡುತ್ತಿದ್ದೀರಾ ಎಂದು ಕ್ರಿಕೆಟ್ ಅಭಿಮಾನಿಗಳೂ ಪ್ರಶ್ನಿಸಿದ್ದಾರೆ. ಅದೇನೇ ಇರಲಿ, ಯುವಿ, ಭಜ್ಜಿ ಮತ್ತು ರೈನಾ ಮಾಡಿದ ಸಂಭ್ರಮಾಚರಣೆ ಚೆನ್ನಾಗಿದೆ.
ಇನ್ನು ಪಂದ್ಯದ ವಿಷಯಕ್ಕೆ ಬಂದರೆ, ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಚಾಂಪಿಯನ್ ತಂಡ ನಿಗದಿತ 20 ಓವರ್ಗಳಲ್ಲಿ 156 ರನ್ ಗಳಿಸಿತು. ಶೋಯೆಬ್ ಮಲಿಕ್ 41, ಕಮ್ರಾನ್ ಅಕ್ಮಲ್ 24 ಮತ್ತು ತನ್ವಿರ್ 19 ರನ್ ಗಳಿಸಿದರು. ಭಾರತೀಯ ಬೌಲರ್ಗಳ ಪೈಕಿ ಅನುರೀತ್ ಸಿಂಗ್ 3 ವಿಕೆಟ್ ಪಡೆದು ತಮ್ಮ ಶಕ್ತಿ ಪ್ರದರ್ಶಿಸಿದರು. ವಿನಯ್ ಕುಮಾರ್, ನೇಗಿ ಮತ್ತು ಇರ್ಫಾನ್ ಪಠಾಣ್ ತಲಾ ಒಂದೊಂದು ವಿಕೆಟ್ ಪಡೆದರು.
ಪಾಕಿಸ್ತಾನ ನೀಡಿದ 156 ರನ್ ಗುರಿ ಬೆನ್ನತ್ತಿದ ಭಾರತ ಚಾಂಪಿಯನ್ ತಂಡ 19.1 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 159 ರನ್ ಗಳಿಸಿ, ಚಾಂಪಿಯನ್ ಆಯಿತು. ಅಂಬಟಿ ರಾಯುಡು 50 ರನ್, ಗುರುಕೃತ್ ಸಿಂಗ್ 34 ರನ್ ಮತ್ತು ಯೂಸುಫ್ ಪಠಾಣ್ 30 ರನ್ ಗಳಿಸಿದರು. ಅಂತಿಮವಾಗಿ ಟೀಮ್ ಇಂಡಿಯಾ ಟ್ರೋಫಿಯನ್ನು ಎತ್ತಿಹಿಡಿಯಿತು.