ಹುಬ್ಬಳ್ಳಿ: ಅಪ್ರಾಪ್ತರಿಗೆ ವಾಹನ ಚಲಾಯಿಸಲು ಅವಕಾಶ ಮಾಡಿಕೊಟ್ಟ ನಾಲ್ವರು ಪಾಲಕರಿಗೆ ದಂಡ ವಿಧಿಸಿ ಇಲ್ಲಿನ ಕೋರ್ಟ್ ಆದೇಶ ನೀಡಿದೆ. ಹುಬ್ಬಳ್ಳಿಯ ಜೆಎಂಎಫ್‌ಸಿ 3ನೇ ನ್ಯಾಯಾಲಯವು ನಾಲ್ವರು ಪೋಷಕರಿಗೆ ಈ ದಂಡ ವಿಧಿಸಿದೆ. ಅಪ್ರಾಪ್ತ ಮಕ್ಕಳ ಮೂವರು ಪಾಲಕರಿಗೆ ತಲಾ 25 ಸಾವಿರ ರೂಪಾಯಿ ಹಾಗೂ ಮತ್ತೋರ್ವ ಪಾಲಕರಿಗೆ 26 ಸಾವಿರ ಹೀಗೆ.. ಒಟ್ಟು 1.1 ಲಕ್ಷ ರೂಪಾಯಿ ದಂಡ ವಿಧಿಸಿ ನ್ಯಾಯಾಲಯವು ಆದೇಶ ನೀಡಿದೆ.
ಅಪ್ರಾಪ್ತರಿಗೆ ವಾಹನ ನೀಡಿದ ಆರೋಪದಡಿ ನಗರದ ಲಕ್ಷ್ಮೀ ಭಜಂತ್ರಿ, ಸತೀಶ ಬೆಳ್ಳಿಗಟ್ಟಿ, ಸುಚೇತ ಹೂಗಾರ ಎಂಬುವರಿಗೆ ತಲಾ 25 ಸಾವಿರ ರೂಪಾಯಿ ದಂಡ ವಿಧಿಸಿದರೆ, ಕೃಷ್ಣರಾಮ ದೇವಾಸಿ ಅವರಿಗೆ 26 ಸಾವಿರ ರೂಪಾಯಿ ದಂಡ ಪಾವತಿ ಮಾಡುವಂತೆ ನ್ಯಾಯಾಲಯ ಆದೇಶ ನೀಡಿದೆ.
ಕೆಲ ದಿನಗಳ ಹಿಂದೆ ದಕ್ಷಿಣ ಸಂಚಾರ ಠಾಣೆ ಪೊಲೀಸರು ವಾಹನಗಳ ಪರಿಶೀಲನೆ ನಡೆಸುತ್ತಿದ್ದ ವೇಳೆ ವಾಹನ ಚಲಾಯಿಸುವಾಗ ನಾಲ್ವರು ಅಪ್ರಾಪ್ತರು ಸಿಕ್ಕಿಬಿದಿದ್ದರು. ವಾಹನ ಸಂಖ್ಯೆ ಆಧರಿಸಿ ಆಯಾ ವಾಹನ ಮಾಲೀಕರಿಗೆ ಹುಬ್ಬಳ್ಳಿ – ಧಾರವಾಡ ದಕ್ಷಿಣ ಸಂಚಾರಿ ಠಾಣೆ ಪೊಲೀಸರು ನೋಟಿಸ್ ನೀಡಿದ್ದರು. ಕಾನೂನು ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಇದೀಗ ಆ ಅಪ್ರಾಪ್ತ ಮಕ್ಕಳ ಪೋಷಕರು ಕೋರ್ಟ್‌ನಲ್ಲಿ ದಂಡ ಪಾವತಿಸಿದ್ದಾರೆ.
ವಾಹನ ಚಾಲನಾ ಪರವಾನಗಿ ಇಲ್ಲದೇ ಮತ್ತು ಅಪ್ರಾಪ್ತರು ವಾಹನ ಚಲಾವಣೆ ಮಾಡುತ್ತಿರುವುದರಿಂದ ಅಪಘಾತಗಳು ಹೆಚ್ಚಾಗುತ್ತದೆ. ಈ ಹಿನ್ನೆಲೆ ನಗರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದ್ದು, ವಾಹನ ಮಾಲೀಕರು ಜಾಗೃತರಾಗಬೇಕು. ಅಪ್ರಾಪ್ತರಿಗೆ ಮತ್ತು ಚಾಲನಾ ಪರವಾನಗಿ ಇಲ್ಲದವರಿಗೆ ವಾಹನ ನೀಡಿ ಪೇಚಿಗೆ ಸಿಲುಕಬಾರದು ಎಂಬ ಸಂದೇಶ ರವಾನಿಸಿದ್ದಾರೆ.