200 ಆನೆಗಳನ್ನು ಕೊಲ್ಲಲು ಆದೇಶ ಮಾಡಿದ ಜಿಂಬಾಬ್ವೆ ಸರ್ಕಾರ, ಯಾಕೆ ಗೊತ್ತಾ..?

200 ಆನೆಗಳನ್ನು ಕೊಲ್ಲಲು ಆದೇಶ ಮಾಡಿದ ಜಿಂಬಾಬ್ವೆ ಸರ್ಕಾರ, ಯಾಕೆ ಗೊತ್ತಾ..?

Free public domain CC0 photo.

ಇಡೀ ದೇಶಕ್ಕೆ ಬರಗಾಲ ಬಂದರೆ ಅಲ್ಲಿರುವ ಪ್ರಾಣಿಗಳನ್ನ ಕೊಲ್ಲಲು ಆ ಒಂದು ದೇಶ ಆದೇಶ ನೀಡುತ್ತದೆ ಎಂದರೆ ನೀವು ನಂಬುತ್ತೀರಾ..? ಹೌದು ಇದು ಆಶ್ಚರ್ಯವಾದರೂ ನೀವು ನಂಬಲೇ ಬೇಕು. ಅಷ್ಟಕ್ಕೂ ಆ ಪ್ರಾಣಿಗಳಿಗೂ ಬರಗಾಲಕ್ಕೂ ಏನು ಸಂಬಂಧ. ಇಂತಹದೊಂದು ಪ್ರಶ್ನೆ ಕೂಡ ನಿಮ್ಮ ತಲೆಯಲ್ಲಿ ಬರದೆ ಇರಲಾರದು. ಇದಕ್ಕೆ ಉತ್ತರವನ್ನು ಹುಡುಕೋದಕ್ಕೆ ಹೋದ್ರೆ ನೇರವಾಗಿ ಜಿಂಬಾಬ್ವೆ ಕಡೆ ಪ್ರಯಾಣ ಮಾಡಬೇಕುಆಗುತ್ತದೆ.

ಹೌದು,,,, ಜಿಂಬಾಬ್ವೆಯಲ್ಲಿ ನಾಲ್ಕು ದಶಕಗಳಲ್ಲೇ ಅತ್ಯಂತ ಭೀಕರ ಬರಗಾಲ ಆವರಿಸಿದೆ. ಜನರಿಗೆ ತಿನ್ನೋದಕ್ಕೆ ಆಹಾರ ಕೂಡ ಸಿಗ್ತಿಲ್ಲ. ಹೀಗಾಗಿ ಸುಮಾರು 200 ಆನೆಗಳನ್ನು ಕೊಲ್ಲೋದಕ್ಕೆ ಇಲ್ಲಿನ ವನ್ಯಜೀವಿ ಪ್ರಾಧಿಕಾರ ನಿರ್ಧಾರ ಮಾಡಿದೆ. ಅರೆ ಈ ಆನೆಗಳನ್ನ ಕೊಲ್ಲೋದ್ರಿಂದ ಬರಗಾಲ ಹೊರಟು ಹೋಗುತ್ತಾ..? ಖಂಡಿತ ಇಲ್ಲ. ಆನೆಗಳನ್ನು ಕೊಂದು ಅವುಗಳ ಮಾಂಸವನ್ನು ಅಲ್ಲಿರುವ ಮನುಷ್ಯರಿಗೆ ನೀಡುವಂತಹ ಕೆಲಸ ಮಾಡಲಾಗುತ್ತೆ. ಇದರಿಂದ ಆಹಾರದ ತೀವ್ರ ಕೊರತೆ ಇರುವ ಮಾನವ ಸಮುದಾಯ ಆನೆ ಮಾಂಸವನ್ನ ತಿಂದು ತಮ್ಮ ಜೀವ ಉಳಿಸಿಕೊಳ್ಳುತ್ತೆ.

ದಕ್ಷಿಣ ಆಫ್ರಿಕಾದ ದೇಶಗಳಲ್ಲಿ ಈಗ ಬರಗಾಲ ತಾಂಡವವಾಡುತ್ತಿದೆ. ಸುಮಾರು 6 ಕೋಟಿ 80 ಲಕ್ಷ ಸರಿಸುಮಾರು ಕರ್ನಾಟಕ ರಾಜ್ಯದ ಜನಸಂಖ್ಯೆಯಷ್ಟು ಜನರು ಇದರಿಂದ ತೊಂದರೆಯನ್ನ ಅನುಭವಿಸುತ್ತಿದ್ದಾರೆ. ಇಡೀ ಪ್ರದೇಶದಲ್ಲಿ ಆಹಾರ ಪದಾರ್ಥಗಳ ಭೀಕರ ಕೊರತೆ ಕಾಡುತ್ತಿದೆ. ಜಿಂಬಾಬ್ವೆ ಉದ್ಯಾನವನಗಳು ಮತ್ತು ವನ್ಯಜೀವಿ ಪ್ರಾಧಿಕಾರದ ವಕ್ತಾರ ಟಿನಾಶೆ ಫರಾವೊ, ವನ್ಯಜೀವಿ ಪ್ರಾಧಿಕಾರವು 200 ಆನೆಗಳನ್ನು ಕೊಲ್ಲಲು ನಿರ್ಧರಿಸಿದೆ ಸ್ಪಷ್ಟಪಡಿಸಿದ್ದಾರೆ.

ಇಡೀ ದೇಶದಲ್ಲಿ ಈ ಕೆಲಸ ನಡೆಯಲಿದೆ ಎಂದು ಟಿನಾಶೆ ಹೇಳಿದ್ದಾರೆ. ಇದನ್ನು ಹೇಗೆ ಮಾಡಬೇಕೆಂದು ನಾವು ಈಗಾಗಲೇ ಲೆಕ್ಕಾಚಾರ ಮಾಡುತ್ತಿದ್ದೇವೆ. ಬರಗಾಲ ಅನುಭವಿಸುತ್ತಿರುವ ಮತ್ತು ಆಹಾರಕ್ಕಾಗಿ ಪರದಾಡುತ್ತಿರುವ ಸಮುದಾಯಗಳಿಗೆ ಆನೆ ಮಾಂಸವನ್ನು ಕಳುಹಿಸಲಾಗುತ್ತದೆ. ಜಿಂಬಾಬ್ವೆಯಲ್ಲಿ ಆನೆಗಳ ಅಧಿಕೃತ ಹತ್ಯೆ ಮಾಡುವ ಕಾರ್ಯ ಇಂದು ನೆನ್ನೆಯದಲ್ಲ ಇದು 1988 ರಲ್ಲಿ ಪ್ರಾರಂಭವಾಯಿತು. ವಿಶೇಷವಾಗಿ ಹ್ವಾಂಗೆ, ಮಾಬಿರೆ, ಶೋಲೋಶೋ ಮತ್ತು ಚಿರೇಜಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ನಡೆಯುತ್ತದೆ ಎಂದು ಟಿನಾಶೆ ಹೇಳಿದ್ದಾರೆ.

ಕಳೆದ ತಿಂಗಳು, ಸಮೀಪವಿರುವ ನಮೀಬಿಯಾದಲ್ಲಿ 83 ಆನೆಗಳನ್ನು ಕೊಲ್ಲಲಾಗಿದೆ, ಇದರಿಂದ ಆಹಾರಕ್ಕಾಗಿ ಹವಣಿಸುತ್ತಿರುವ  ಮನುಷ್ಯರಿಗೆ ಮಾಂಸವನ್ನು ನೀಡಲಾಗುತ್ತಿದೆ. ಆಫ್ರಿಕಾದ ಐದು ಪ್ರದೇಶಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಆನೆಗಳು ವಾಸಿಸ ಮಾಡುತ್ತಿವೆ. ಜಿಂಬಾಬ್ವೆ, ಜಾಂಬಿಯಾ, ಬೋಟ್ಸ್ವಾನ, ಅಂಗೋಲಾ ಮತ್ತು ನಮೀಬಿಯಾಗಳಲ್ಲಿ ವ್ಯಾಪಕವಾಗಿ ಕಂಡುಬರುತ್ತವೆ. ಈ ಆಫ್ರಿಕನ್ ದೇಶಗಳು ಇಡೀ ಪ್ರಪಂಚದಲ್ಲಿ ಅತಿ ಹೆಚ್ಚು ಆನೆಗಳನ್ನು ಕೂಡ ಹೊಂದಿವೆ.

ಆನೆಗಳನ್ನು ಕೊಲ್ಲುವುದರಿಂದ ಆಗುವ ಒಂದು ಪ್ರಯೋಜನವೆಂದರೆ ಅವುಗಳ ಸಂಖ್ಯೆಯನ್ನ ನಿಯಂತ್ರಣ ಮಾಡಬಹುದು ಎಂದು ಹೇಳುತ್ತಾರೆ ಟಿನಾಶೆ. ಕಾಡಿನ ವಿಸ್ತೀರ್ಣ ಕಡಿಮೆ. ನಮ್ಮ ಕಾಡುಗಳಲ್ಲಿ ಕೇವಲ 55 ಸಾವಿರ ಆನೆಗಳು ಮಾತ್ರ ವಾಸ ಮಾಡ್ಬೋದು. ಆದರೆ ಪ್ರಸ್ತುತ ನಮ್ಮ ದೇಶದಲ್ಲಿ 84 ಸಾವಿರಕ್ಕೂ ಅಧಿಕ ಆನೆಗಳಿವೆ. 200 ಆನೆಗಳನ್ನು ಕೊಂದರೂ ಅದು ಸಾಗರದಿಂದ ಒಂದು ಹನಿಯನ್ನು ಹೊರತೆಗೆದಂತೆಯೇ ಆಗುತ್ತೆ.

ಇನ್ನೂ ಜಿಂಬಾಬ್ವೆಯಲ್ಲಿ ಸತತ ಬರಗಾಲ ಆವರಿಸಿಕೊಂಡಿದೆ. ಮನುಷ್ಯರು ಮತ್ತು ಆನೆಗಳ ನಡುವೆ ಸಂಘರ್ಷ ಕೂಡ ನಡೆಯುತ್ತಿದೆ. ಇದರಿಂದಾಗಿ ಸಂಪನ್ಮೂಲಗಳ ಕೊರತೆ ಉಂಟಾಗಲಿದೆ. ಕಳೆದ ವರ್ಷ ಜಿಂಬಾಬ್ವೆಯಲ್ಲಿ ಆನೆ ದಾಳಿಗೆ 50 ಮಂದಿ ಸಾವನ್ನಪ್ಪಿದ್ದರು. ಹೆಚ್ಚುತ್ತಿರುವ ಆನೆಗಳ ಜನಸಂಖ್ಯೆಗೆ ಹೆಸರುವಾಸಿಯಾದ ಜಿಂಬಾಬ್ವೆ, ಪ್ರಸ್ತುತ ಅಳಿವಿನಂಚಿನಲ್ಲಿರುವ ಪ್ರಭೇದಗಳಲ್ಲಿನ ಅಂತರರಾಷ್ಟ್ರೀಯ ವ್ಯಾಪಾರದ (CITES) UN ಸಮಾವೇಶಕ್ಕಾಗಿ ಪ್ರಯತ್ನಗಳನ್ನು ಮಾಡುತ್ತಿದೆ. ಇದರಿಂದ ಅವರು ಆನೆ ದಂತ ಮತ್ತು ಜೀವಂತ ಆನೆಗಳ ವ್ಯಾಪಾರಕ್ಕೆ ದಾರಿ ಮಾಡಿಕೊಡುತ್ತಿದೆ. ಜಿಂಬಾಬ್ವೆಯು ವಿಶ್ವದ ಅತಿ ದೊಡ್ಡ ಆನೆ ದಂತಗಳನ್ನು ಹೊಂದಿದೆ. ಸುಮಾರು 5022 ಕೋಟಿ ರೂಪಾಯಿ ಮೌಲ್ಯದ ದಂತಗಳು ಇಲ್ಲಿವೆ, ಜಿಂಬಾಬ್ವೆ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. CITES ಸಹಿ ಹಾಕಿದರೆ, ಈ ದೇಶದಲ್ಲಿ ಆಹಾರ ಮತ್ತು ನೀರಿನ ಕೊರತೆ ಇರುವುದಿಲ್ಲ.

ಒಟ್ಟಾರೆಯಾಗಿ ಜಿಂಬಾಬ್ವೆ ದೇಶದ ಸರ್ಕಾರ ತನ್ನ ದೇಶದ ಜನರನ್ನ ಉಳಿಸಿಕೊಳ್ಳಲು ದೇಶದ ಅಮೂಲ್ಯ ಸಂಪತ್ತಾಗಿರುವ ಆನೆ ಕೊರಳಿಗೆ ಕೊಡಲಿ ಹಾಕಲು ಹೊರಟಿದೆ. ಇದಕ್ಕೆ ಜಾಗತಿಕ ಮಟ್ಟದಲ್ಲಿ ಪರ ವಿರೋಧ ಚರ್ಚೆ ನಡೆಯುತ್ತಿದೆ.

Leave a Reply

Your email address will not be published. Required fields are marked *