ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ಮತ್ತು ಮೇಕೆದಾಟು ಯೋಜನೆಗಳಲ್ಲಿ ತಡೆಗೋಡೆಯಾಗಿ ನಿಂತಿರುವ ತಮಿಳುನಾಡು ಕ್ಯಾತೆ ಮುಂದುವರೆದಿರುವAತೆಯೇ ಇತ್ತ ಕರ್ನಾಟಕ ತನ್ನ ಹಕ್ಕುಗಳನ್ನು ಸಾಧಿಸಿಕೊಳ್ಳುವಲ್ಲಿ ತಮಿಳು ಪ್ರಜೆಗಳು ರಾಜ್ಯದ ಬೆನ್ನಿಗೆ ನಿಂತಿದ್ದಾರೆ.
ಹೌದು.. ಕರ್ನಾಟಕದ ಹಕ್ಕುಗಳನ್ನು ವಿಶೇಷವಾಗಿ ಭಾಷೆ, ನೆಲ, ಜಲ, ಗಡಿ, ಇತರ ವಿಷಯಗಳ ರಕ್ಷಣೆಯಲ್ಲಿ ಕರ್ನಾಟಕ ಸರ್ಕಾರವನ್ನು ಬೆಂಬಲಿಸುವುದು ಸೇರಿದಂತೆ ಒಟ್ಟು 35 ನಿರ್ಣಯಗಳನ್ನು ಕನ್ನಡಿಗರು ಮತ್ತು ತಮಿಳರ ಏಕತೆಯ ಸಾಂಸ್ಕೃತಿಕ ಸಮ್ಮೇಳನದಲ್ಲಿ ತೆಗೆದುಕೊಳ್ಳಲಾಗಿದೆ.
ಪ್ರಮುಖವಾಗಿ ಕಾವೇರಿ ಮತ್ತು ಮಹದಾಯಿ ನೀರು ಹಂಚಿಕೆ, ಮೇಕೆದಾಟು ಸಮತೋಲನ ಜಲಾಶಯ ಯೋಜನೆ ಮತ್ತು ಬೆಳಗಾವಿ ಗಡಿ ಸಮಸ್ಯೆಯಂತಹ ವಿಷಯಗಳಲ್ಲಿ ಕರ್ನಾಟಕದ ಹಕ್ಕುಗಳನ್ನು ಬೆಂಬಲಿಸುವ ನಿರ್ಧಾರವನ್ನು ಅವರು ತೆಗೆದುಕೊಂಡರು.
ಮಾತೃ ಭಾಷಾ ಒಕ್ಕೂಟವು ಬೆಂಗಳೂರಿನಲ್ಲಿ ಭಾನುವಾರ ಈ ಸಮಾವೇಶವನ್ನು ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ‘ಕನ್ನಡಿಗರು ಮತ್ತು ತಮಿಳರು ಇಬ್ಬರೂ ದ್ರಾವಿಡ ಕುಲಕ್ಕೆ ಸೇರಿದವರು. ಅವರಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಬೆಂಗಳೂರಿನ ಹಲಸೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಮತ್ತು ಚೆನ್ನೈನಲ್ಲಿ ಕವಿ ಮತ್ತು ದಾರ್ಶನಿಕ ಸರ್ವಜ್ಞ ಅವರ ಪ್ರತಿಮೆಯನ್ನು ತಮಿಳುನಾಡು ಸಿಎಂ ಎಂ ಕರುಣಾನಿಧಿ ಅವರೊಂದಿಗೆ ಮಾತನಾಡಿ ಪೂರ್ಣಗೊಳಿಸಿದ ಅವರು ಕನ್ನಡಿಗರು ಮತ್ತು ತಮಿಳರ ನಡುವೆ ಭಾಂದವ್ಯವನ್ನು ಮೂಡಿಸಿದರು ಎಂದು ಅವರು ನೆನಪಿಸಿಕೊಂಡರು.
ಅAತೆಯೇ ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಮಿಳರು ಮತ್ತು ಕನ್ನಡಿಗರ ನಡುವೆ ಸೌಹಾರ್ದತೆ ಮೂಡಿಸಲು ಪ್ರಯತ್ನಿಸಿದ್ದೆ, ಕರ್ನಾಟಕದಲ್ಲಿ ತಮಿಳರ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದು ಯಡಿಯೂರಪ್ಪ ಹೇಳಿದರು.
ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಮಾತನಾಡಿ, ‘ಕಾವೇರಿ ನದಿ ನೀರು ವಿವಾದದಿಂದ ಕನ್ನಡಿಗರು ಮತ್ತು ತಮಿಳರ ಬಾಂಧವ್ಯದಲ್ಲಿ ಬಿರುಕು ಮೂಡಿದ್ದು, ಕರ್ನಾಟಕ ಮತ್ತು ತಮಿಳುನಾಡು ನಡುವೆ ಉತ್ತಮ ಬಾಂಧವ್ಯ ಮೂಡಲಿ ಎಂದು ಹಾರೈಸಿದರು. “ನಾವೆಲ್ಲರೂ ದಕ್ಷಿಣ ಭಾರತದ ಭಾಗವಾಗಿದ್ದೇವೆ ಮತ್ತು ನಾವು ಸಹೋದರರಂತೆ ಇರಬೇಕು” ಎಂದು ಅವರು ಹೇಳಿದರು. ಅಂತೆಯೇ ಹಿಂದಿ ಹೇರಿಕೆಯ ವಿರುದ್ಧ ಏಕೀಕೃತ ಹೋರಾಟಕ್ಕೆ ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ನಾಯಕ ರಿಜ್ವಾನ್ ಅರ್ಷದ್, ‘ಇಂದು ಮಾತೃಭಾಷಾ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಕರ್ನಾಟಕ ಕನ್ನಡಿಗರು ಹಾಗೂ ತಮಿಳರ ಒಗ್ಗಟ್ಟಿನ ಸಾಂಸ್ಕೃತಿಕ ಸಮ್ಮೇಳನದಲ್ಲಿ ಪಾಲ್ಗೊಂಡಿರುವುದು ಖುಷಿ ನೀಡಿತು. ನನ್ನ ಶಿವಾಜಿನಗರ ಧಾರ್ಮಿಕ ಅಲ್ಪಸಂಖ್ಯಾತರು- ಭಾಷಿಕ ಅಲ್ಪಸಂಖ್ಯಾತರು ಹೆಚ್ಚಿರುವ ಕ್ಷೇತ್ರ. ಆದರೆ, ಇಲ್ಲಿ ಯಾರೂ ತಮಿಳರು, ತೆಲುಗು ಜನರಿಲ್ಲ; ತಮಿಳು- ತೆಲುಗು ಮಾತನಾಡುವ ಕನ್ನಡಿಗರಿದ್ದಾರೆ. ಮಾತೃಭಾಷೆ ಯಾವುದೇ ಆಗಿದ್ದರೂ ನಮ್ಮೆಲ್ಲರ ಹೃದಯ ಭಾಷೆ ಕನ್ನಡ ಎಂದು ಬಾಳುತ್ತಿದ್ದೇವೆ; ಇಂದಿನ ಕಾರ್ಯಕ್ರಮ ಈ ಭಾಷಾ ಸಾಮರಸ್ಯಕ್ಕೆ ಇನ್ನಷ್ಟು ಶಕ್ತಿ ತುಂಬಲಿದೆ ಎಂದು ಭಾವಿಸಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.