ಬೆಂಗಳೂರು: ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರು ಬೆಳಗಾವಿ ಸ್ವಾತಂತ್ರ್ಯ ಸಂಗ್ರಾಮದ ನೇತೃತ್ವ ವಹಿಸಿ 100 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಈ ಬಾರಿ ಗಾಂಧಿ ಜಯಂತಿಯನ್ನು ವಿಶಿಷ್ಟ ಹಾಗೂ ವಿಭಿನ್ನವಾಗಿ ಹಾಗೂ ಜತೆಗೆ ಇಡೀ ವರ್ಷ ನಾನಾ ಕಾರ್ಯಕ್ರಮಗಳ ನಡೆಸಲು ನಿರ್ಧರಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಸೋಮವಾರ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾರ್ಯಕ್ರಮಕ್ಕಾಗಿ ವೀರಪ್ಪ ಮೊಯ್ಲಿ, ಎಚ್.ಕೆ.ಪಾಟೀಲ್, ಬಿ.ಎಲ್.ಶಂಕರ್ ಅವರನ್ನೊಳಗೊಂಡ 60 ಸದಸ್ಯರ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯು ಕಾರ್ಯಕ್ರಮ ಕುರಿತು ಸರ್ಕಾರ ಮತ್ತು ಪಕ್ಷಕ್ಕೆ ಸಲಹೆ ಮತ್ತು ಸೂಚನೆಗಳನ್ನು ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವು ಸಭೆಗಳನ್ನು ನಡೆಸಿ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಿದ್ದಾರೆ. ಇದರಂತೆ ಪಕ್ಷ ಮತ್ತು ಸರ್ಕಾರ ಪ್ರತ್ಯೇಕವಾಗಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಮಹತ್ಮಾ ಗಾಂಧಿಯವರ ಜನ್ಮದಿನ ಅಕ್ಟೋಬರ್ 2ರಂದು ಗಾಂಧಿ ನಡಿಗೆ ಹಮ್ಮಿಕೊಂಡಿದ್ದೇವೆ. ಅಂದು ಬೆಳಗ್ಗೆ 9 ಗಂಟೆಗೆ ಗಾಂಧಿ ಭವನದಿಂದ 1.5 ಕಿಮೀ ನಡೆಯುತ್ತೇವೆ. ಬಳಿಕ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಸುಮಾರು 500ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳಿಗೆ ಸ್ವಚ್ಛತಾ ಅಭಿಯಾನದ ಕುರಿತು ಪಾಠ ಮಾಡಲಾಗುವುದು.
ಟೌನ್ ಹಾಲ್ನಲ್ಲಿ ಪ್ರತಿಜ್ಞಾ ವಿಧಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಪಕ್ಷದ ಎಲ್ಲಾ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು. ಶಿಕ್ಷಣ ಇಲಾಖೆ, ಸಂಸ್ಕೃತಿ ಇಲಾಖೆ ಮತ್ತು ಬಿಬಿಎಂಪಿ ಒಟ್ಟಾಗಿ ಕಾರ್ಯಕ್ರಮ ಮಾಡುತ್ತೇವೆ. ಇದೇ ಕಾರ್ಯಕ್ರಮ ರಾಜ್ಯಾದ್ಯಂತ ನಡೆಯಲಿದೆ ಎಂದು ತಿಳಿಸಿದರು
ಕಾರ್ಯಕ್ರಮಕ್ಕೆ ಪ್ರತಿಯೊಬ್ಬರು ಬಿಳಿ ಟೋಪಿ, ಬಿಳಿ ಬಟ್ಟೆ ಧರಿಸಿಕೊಂಡು ಬರಬೇಕು. ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜವನ್ನು ಮಾತ್ರ ಬಳಸಬೇಕು. ಕನ್ನಡ ಧ್ವಜ, ಪಕ್ಷದ ಬಾವುಟ ಯಾವುದನ್ನೂ ಬಳಸಬಾರದು ಎಂದು ಸೂಚನೆ ನೀಡಿದರು.