ವಾಯು ಗುಣಮಟ್ಟ ಕುಸಿತ–ಆರೋಗ್ಯ ಆತಂಕ ಹೆಚ್ಚಳ.
ತುಮಕೂರು: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ವಾಯುಮಾಲಿನ್ಯ ವಿಪರೀತವಾಗುತ್ತಿದೆ. ಗಾಳಿಯ ಗುಣಮಟ್ಟದಲ್ಲೂ ದಿನೇದಿನೇ ಕುಸಿತ ಉಂಟಾಗುತ್ತಿದೆ. ಇದೆಲ್ಲರದ ಜೊತೆಗೆ ನಗರದಲ್ಲೀಗ ಕಲುಷಿತ ಗಾಳಿಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಆತಂಕ ಹೆಚ್ಚಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕಳೆದ ಐದು ವರ್ಷದಲ್ಲಿ ವಾಯು ಮಾಲಿನ್ಯಕ್ಕೆ ಕಾರಣವಾದ 11 ಕೈಗಾರಿಕೆಗಳಿಗೆ ಅಧಿಕಾರಿಗಳು ಬೀಗ ಹಾಕಿದ್ದು, ನೂರಾರು ಕಾರ್ಖಾನೆಗಳಿಗೆ ನೋಟಿಸ್ ನೀಡಿದ್ದಾರೆ.
11 ಕೈಗಾರಿಕೆಗಳು ಬಂದ್
ಕೈಗಾರಿಕಾ ಹಬ್ ಆಗಿ ಬೆಳೆಯುತ್ತಿರುವ ತುಮಕೂರಿಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿ ಶಾಕ್ ಉಂಟುಮಾಡಿದೆ. ಜಿಲ್ಲೆಯ ವಾತಾವರಣ ದಿನದಿಂದ ದಿನಕ್ಕೆ ಹದಗೆಡುತ್ತಿರುವ ಆತಂಕಕಾರಿ ಅಂಶ ಹೊರಬಿದ್ದಿದೆ. ಅನಿಯಂತ್ರಿತವಾಗಿ ಹೊರ ಸೂಸುವ ಕೆಟ್ಟ ಹೊಗೆ ಹಾಗೂ ಮಾಲಿನ್ಯ ನಿಯಂತ್ರಣ ನಿಯಮ ಉಲ್ಲಂಘನೆ ಆಧಾರದ ಮೇರೆಗೆ ಸುಮಾರು 11 ಕೈಗಾರಿಕೆಗಳಿಗೆ ಬೀಗ ಹಾಕಲಾಗಿದೆ.
ಮಾಲಿನ್ಯ ನಿಯಂತ್ರಣ ಮಂಡಳಿಯಿಂದ 2020-21ನೇ ಸಾಲಿನಿಂದ 2024-25ರವರೆಗೆ ಈ ಕ್ರಮ ಕೈಗೊಳ್ಳಲಾಗಿದ್ದು, ಇದರ ಹೊರತಾಗಿ ಸುಮಾರು 640 ಕೈಗಾರಿಕೆಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಜೊತೆಗೆ ಕೆಲ ನಿಯಮ ಉಲ್ಲಂಘನೆ ಬಗ್ಗೆ ಆರೋಪ ಕೇಳಿ ಬಂದ ಬೆನ್ನಲ್ಲೇ ಸುಮಾರು 56 ಕೈಗಾರಿಕೆಗಳನ್ನು ಯಾಕೆ ಮುಚ್ಚುಬಾರದೆಂದು ಅಂತಿಮ ನೋಟಿಸ್ ಕೊಡಲಾಗಿದ್ದು, ಕೈಗಾರಿಕೆಗಳ ಉತ್ತರಕ್ಕಾಗಿ ಅಧಿಕಾರಿಗಳು ಕಾಯುತಿದ್ದಾರೆ.
ತುಮಕೂರು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಶಿಕ್ಷಣ, ಕೃಷಿ ಜೊತೆಗೆ ಕೈಗಾರಿಕಾ ವಲಯವೂ ದೊಡ್ಡ ದೊಡ್ಡ ಕಾರ್ಖಾನೆಗಳಿಗೆ ಕೈ ಬೀಸಿ ಕರೆಯುತ್ತಿದೆ. ಅದರಂತೆ ತುಮಕೂರು ನಗರದ ಹೊರವಲಯದ ಕೈಗಾರಿಕಾ ಪ್ರದೇಶಗಳತ್ತ ನೂರಾರು ಉದ್ದಿಮೆಗಳು, ಕಾರ್ಖಾನೆಗಳು ತಲೆ ಎತ್ತುತ್ತಿವೆ. ಈ ಕಾರ್ಖಾನೆಗಳು ಹೊರ ಸೂಸುವ ಹೊಗೆ, ತ್ಯಾಜ್ಯದಿಂದ ಗಾಳಿ ಕಲುಷಿತವಾಗುತ್ತಿದೆ. ವಾಯು ಮಾಲಿನ್ಯ ನಿಯಂತ್ರಣಕ್ಕೆ ಪೂರಕವಾದ ಕಾರ್ಯ ನಡೆಯುತ್ತಿಲ್ಲ. ಮಂಡಳಿಯಿಂದ ನೋಟಿಸ್ ಜಾರಿ ಮಾಡಲಾಗುತ್ತಿದೆ ಹೊರತು ಕೈಗಾರಿಕೆ ಮಾಲೀಕರ ವಿರುದ್ಧ ಯಾವುದೇ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತಿಲ್ಲ.
For More Updates Join our WhatsApp Group :




