ರಾಜ್ಯದಲ್ಲಿ ಹಿಂಗಾರು ಮಳೆ ಅನಾಹುತಕ್ಕೆ 25 ಮಂದಿ ಸಾವು

ಮಳೆಗೆ ಬೆಳೆ ಹಾನಿ

ಮಳೆಗೆ ಬೆಳೆ ಹಾನಿ

ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಹಿಂಗಾರು ಮಳೆ ಅನಾಹುತಕ್ಕೆ 25 ಜನರು ಸಾವಿಗೀಡಾಗಿದ್ದಾರೆ. ಹಿಂಗಾರು ಮಳೆ ವಾಡಿಕೆಗಿಂತ 58% ಹೆಚ್ಚು ಸುರಿದಿದೆ. ಹೀಗಾಗಿ, ದೊಡ್ಡ ಪ್ರಮಾಣದಲ್ಲಿ ಜೀವ ಹಾನಿ ಸಂಭವಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಪ್ರಸಕ್ತ ಸಾಲಿನ ಹಿಂಗಾರು ಅವಧಿಯಲ್ಲಿ ಉಂಟಾದ ಮಳೆಹಾನಿ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಬಳಿಕ ಮಾಧ್ಯಮಗೋಷ್ಟಿ ಉದ್ದೇಶಿಸಿ ಅವರು ಮಾತನಾಡಿದರು.

ಹಿಂಗಾರು ಅವಧಿಯಲ್ಲಿ ಅತಿವೃಷ್ಟಿಯಿಂದಾಗಿ ಒಟ್ಟು 25 ಸಾವು ಸಂಭವಿಸಿದ್ದು, ತುರ್ತು ಪರಿಹಾರ ಪಾವತಿಸಲಾಗಿದೆ. ಮಳೆಯಿಂದಾಗಿ 84 ಮನೆಗಳು ಸಂಪೂರ್ಣ ಹಾನಿಗೀಡಾಗಿದ್ದು, 2,077ಮನೆಗಳು ಭಾಗಶಃ ಹಾನಿಗೀಡಾಗಿವೆ. ಪೂರ್ತಿ ಮನೆಗೆ 1.20ಲಕ್ಷ ರೂ. ಪರಿಹಾರ ಹಾಗೂ ಮನೆ ನಿರ್ಮಿಸಿ ಕೊಡಲು ಈಗಾಗಲೇ ಆದೇಶಿಸಲಾಗಿದೆ. ಭಾಗಶಃ ಹಾನಿಗೀಡಾದ ಮನೆಗಳಿಗೆ ಮುಂಗಾರು ಹಂಗಾಮಿನಲ್ಲಿ ಸೂಚಿಸಿರುವಂತೆ ರೂ.50 ಸಾವಿರದವರೆಗೆ ಪರಿಹಾರ ಒದಗಿಸಲು ಆದೇಶಿಸಲಾಗಿದೆ ಎಂದು ತಿಳಿಸಿದರು.

ಈ ಬಾರಿ ಹಿಂಗಾರು ಹಂಗಾಮಿನಲ್ಲಿ ಅಕ್ಟೋಬರ್‌ 1ರಿಂದ 25ರ ವರೆಗೆ ರಾಜ್ಯದಲ್ಲಿ ಸರಾಸರಿ 181 ಮಿ.ಮೀ ಮಳೆಯಾಗಿದೆ. ಈ ಅವಧಿಯ ವಾಸ್ತವಿಕ ಸರಾಸರಿ ಮಳೆ ಪ್ರಮಾಣ 114 ಮಿ.ಮೀ ಆಗಿದ್ದು, ಶೇ.58 ರಷ್ಟು ಹೆಚ್ಚುವರಿ ಮಳೆ ದಾಖಲಾಗಿದೆ. ಮುಂಗಾರು ಅವಧಿಯಲ್ಲಿ ಅಂದರೆ ಜೂನ್‌ 1ರಿಂದ ಸೆಪ್ಟಂಬರ್‌ 30ರ ಅವಧಿಯಲ್ಲಿ ರಾಜ್ಯದಲ್ಲಿ ವಾಡಿಕೆ ಮಳೆ 852 ಮಿ.ಮೀ ಆಗಿದ್ದು, ಈ ಬಾರಿ 978 ಮಿ.ಮೀ ಮಳೆ ದಾಖಲಾಗಿದೆ ಎಂದರು.

Leave a Reply

Your email address will not be published. Required fields are marked *