ರೇಷ್ಮೆ ಕೃಷಿಯಲ್ಲಿ ವರ್ಷಕ್ಕೆ 3 ಲಕ್ಷ ಆದಾಯ

ಹಿಪ್ಪು ನೇರಳೆ ಕೃಷಿಗೆ ನರೇಗಾ ಯೋಜನೆಯಡಿ ಸಿಗುತ್ತೆ ಸಹಾಯಧನ

ʼರೈತ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲʼ ಎಂಬ ಮಾತಿನಂತೆ ಜಗತ್ತು ಊಟ ಮಾಡುತ್ತಿರುವುದು ರೈತ ಬೆಳೆದ ಬೆಳೆಯಿಂದ. ಈ ಹಿಂದೆ ರೈತರು ತಮ್ಮ ಮನೆಗೆ, ತಮ್ಮ ಪರಿವಾರಕ್ಕೆ ಮಾತ್ರ ಬೆಳೆಯುತ್ತಿದ್ದರು. ದಿನ ಕಳೆದಂತೆ ಜಾಗತೀಕ ಮಾರುಕಟ್ಟೆಗಳು ವಿಸ್ತಾರವಾದಂತೆ ರೈತರು ವಾಣಿಜ್ಯ ಬೆಳೆಗಳ ಕಡೆ ವಾಲಿ ಹಣ ಸಂಪಾದಿಸಲು ಮುಂದಾಗಿರುವುದು ಸಂತಸದ ವಿಚಾರವೇ ಸರಿ. ಹೌದು ಇದಕ್ಕೆ ಸಾಕ್ಷಿಯೆಂಬAತೆ ರೇಷ್ಮೆ ಕೃಷಿ ಮಾಡಿ ವರ್ಷಕ್ಕೆ 2.5 – 3 ಲಕ್ಷ ಹಣ ಗಳಿಸುತ್ತಿದ್ದಾರೆ ರೇಣುಕಾರಾದ್ಯ.

ಹೌದು ತುರುವೇಕೆರೆ ತಾಲ್ಲೂಕು ಮಾದಿಹಳ್ಳಿ ಗ್ರಾಮ ಪಂಚಾಯತಿ ಕಳ್ಳನ ಕೆರೆ ಗ್ರಾಮದ ವಾಸಿಯಾಗಿರುವ ರೇಣುಕಾರಾದ್ಯರಿಗೆ ಒಂದೂವರೆ ಎಕೆರೆ ಜಮೀನಿದೆ. ಈ ಜಮೀನಿನಲ್ಲಿ ಕಳೆದ ೧೫ ವರ್ಷಗಳಿಂದಲೂ ರೇಷ್ಮೆ ಕೃಷಿ ಮಾಡುತ್ತ ಉತ್ತಮ ಆದಾಯ ಗಳಿಸುತ್ತಿದ್ದಾರೆ.

ರೇಷ್ಮೆ ಬೆಳೆಯುವುದು ಈಗ ತುಂಬಾ ಸುಲಭ

ರೇಷ್ಮೆ ಬೆಳೆಯ ಬಗ್ಗೆ ಮಾತನಾಡಿದ ರೇಣುಕಾರಾದ್ಯ, ಪ್ರಸ್ತುತ ರೇಷ್ಮೆ ಬೆಳೆಯುವುದು ತುಂಬಾ ಸುಲಭದ ಕೆಲಸವಾಗಿದೆ. ನಾವು ರೇಷ್ಮೆ ಹುಳು ಸಾಕಣೆ ಮಾಡಲು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಜಮೀನಿನಿಂದ ಸೊಪ್ಪು ತಂದು ದಿನಕ್ಕೆ ಆರರಿಂದ ಎಂಟು ಬಾರಿ ಸೊಪ್ಪು ಹಾಕುತ್ತಿದ್ದೆವು. ಆದರೀಗ ಕಾಲ ಬದಲಾದಂತೆ ಸುಧಾರಿತ ತಳಿ ಪದ್ಧತಿಯಿಂದ ದಿನಕ್ಕೆ ಎರಡು ಬಾರಿ ಬರೀ ರೆಂಬೆಗಳನ್ನೇ ಕತ್ತರಿಸಿ ತಂದು ನೇರವಾಗಿಯೇ ಹಾಕಿ ಹುಳು ಸಾಕಣೆ ಮಾಡಬಹುದು. ಅಲ್ಲದೆ ಕೇವಲ 15 ದಿನದಲ್ಲಿ ರೇಷ್ಮೆಗೂಡು ಉತ್ಪಾದನೆ ಮಾಡಬಹುದು. ಅಂದರೆ ೧೦ ನೇ ದಿನ ಎರಡನೇ ಜ್ವರದವರೆಗೆ ಚಾಕಿ ಸಾಕಣೆ ಕೇಂದ್ರದಲ್ಲಿ ಸಾಕಿದ ಮರಿಯನ್ನು ತಂದರೆ ಸಾಕು ನಮ್ಮಲ್ಲಿ ಬೇಗನೆ ಬೆಳೆಯಬಹುದು.

ಒಂದೇ ಬೆಳೆಯಲ್ಲಿ 60 ಸಾವಿರ ಆದಾಯ

ರೇಣುಕಾರಾದ್ಯರು ಸುಮಾರು 15 ವರ್ಷಗಳಿಂದ ರೇಷ್ಮೆ ಬೆಳೆಯುತ್ತಿದ್ದು, ಅಂದು ಇಂದು ಎಂದೆAದಿಗೂ ಇದು ಲಾಭದಾಯಕ ಬೆಳೆ ಎನ್ನುತ್ತಾರೆ. ಹೈಬ್ರಿಡ್ ತಳಿಯ ಪ್ರತಿ 100 ಮೊಟ್ಟೆಗೆ 100 ಕೆಜಿಯಷ್ಟು ಗೂಡು ಬೆಳೆಯುತ್ತಿದ್ದು, ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 550 ರಿಂದ 600 ರೂ ಗೆ ಮಾರಾಟವಾಗುತ್ತಿದೆ. ಒಂದು ಬೆಳೆಗೆ 55 ರಿಂದ 60,000 ಸಾವಿರದವರೆಗೆ ಹಣಗಳಿಸಬಹುದು ಎನ್ನುತ್ತಾರೆ ರೇಣುಕಾರಾದ್ಯ. ವರ್ಷಕ್ಕೆ ಎಲ್ಲಾ ಖರ್ಚುವೆಚ್ಚ ಕಳೆದರೂ ಎರಡೂವರೆ ಲಕ್ಷದಿಂದ ಮೂರು ಲಕ್ಷದವರೆಗೂ ಲಾಭಗಳಿಸಬಹುದು. ಇದೇ ವೇಳೆ ಮತ್ತೊಂದು ಮಾಹಿತಿ ತಿಳಿಸಿದ ಇವರು, ನನ್ನ ಇಬ್ಬರು ಹೆಣ್ಣು ಮಕ್ಕಳ ಮದುವೆಯನ್ನು ಅದ್ಧೂರಿಯಾಗಿ ಮಾಡಿದೆ. ಅಲ್ಲದೆ 25 ಲಕ್ಷ ಖರ್ಚು ಮಾಡಿ ಒಂದೊಳ್ಳೆ ಮನೆ ನಿರ್ಮಿಸಿಕೊಂಡಿದ್ದೇನೆ ಎಂದರು.

ನರೇಗಾ ಯೋಜನೆಯಡಿ ಸಹಾಯ ಧನ

ರಾಗಿಯನ್ನೇ ಬೆಳೆಯುತ್ತಿದ್ದ ನನಗೆ ರೇಷ್ಮೆಇಲಾಖೆಯವರಿಂದ ಹಿಪ್ಪು ನೇರಳೆ ಕೃಷಿ ಮಾಡಲು ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಸಹಾಯಧನ ಸಿಗುತ್ತದೆ ಎಂಬ ಮಾಹಿತಿ ಸಿಕ್ಕಿತು. ನಾಟಿ ಮಾಡಿದಾಗ 169 ಮಾನವ ದಿನಗಳಂತೆ ಒಟ್ಟು 47808 ರೂಪಾಯಿ ಕೂಲಿ ಸಹಾಯಧನವಾಗಿ ಪಡೆದೆವು. ರೇಷ್ಮೆ ಹುಳುಗಳನ್ನು ಸಾಕಲು ಹೆಚ್ಚು ಕೂಲಿ ಆಳುಗಳ ಅವಶ್ಯಕತೆ ಇರುವುದಿಲ್ಲ. ಆದ್ದರಿಂದ ನರೇಗಾ ಯೋಜನೆಯಡಿ ಒಂದು ಮಾನವ ದಿನಕ್ಕೆ ೩೧೬ ರೂ ಕೂಲಿ ಹಣ ನಮ್ಮ ಕೈಸೇರಿತು ಎನ್ನುತ್ತಾರೆ ರೇಣುಕಾರಾದ್ಯ.

ಇಲಾಖೆಯಿಂದ ಸಿಗುವ ಸೌಲಭ್ಯಗಳು

ರೇಷ್ಮೆ ಕೃಷಿ ಚಟುವಟಿಕೆಗಳಾದ ಹಿಪ್ಪುನೇರಳೆ ಬೇಸಾಯ, ರೇಷ್ಮೆ ಹುಳು ಸಾಕಾಣೆ, ಮತ್ತು ನೂಲು ಬಿಚ್ಚಾಣಿಕೆ ಬಗ್ಗೆ ತಾಂತ್ರಿಕ ಮಾರ್ಗದರ್ಶನ ಮತ್ತು ತರಬೇತಿ ನೀಡುವುದು. ಸಂಶೋಧನಾ ಸಂಸ್ಥೆಗಳಿAದ ಹೊರತಂದ ಅಧಿಕ ಇಳುವರಿ ನೀಡುವ ಹಿಪ್ಪು ನೇರಳೆ ಮತ್ತು ರೇಷ್ಮೆ ಹುಳುವಿನ ತಳಿಗಳನ್ನು ಪ್ರಚಾರಗೊಳಿಸಿ ರೇಷ್ಮೆ ಕೃಷಿಕರಿಗೆ ಒದಗಿಸುವುದು. ಹಿಪ್ಪು ನೇರಳೆ ಹಾಗೂ ರೇಷ್ಮೆ ಹುಳುವಿನ ಮೂಲ ಬಿತ್ತನೆ ನಿರ್ವಹಣೆ ಮತ್ತು ರೋಗರಹಿತ ರೇಷ್ಮೆ ಮೊಟ್ಟೆಗಳನ್ನು ಉತ್ಪಾದಿಸಿ ರೈತರಿಗೆ ಒದಗಿಸುವುದು. ಸರ್ಕಾರದಿಂದ ರೇಷ್ಮೆ ಕೃಷಿ ವಿಸ್ತರಣೆ ನೀಡುವ ಸಹಾಯಧನ ಪಡೆಯಲು ಸಹಾಯ. ರೇಷ್ಮೆ ಚಟುವಟಿಕೆಗಳಿಗೆ ಬೇಕಾದ ಸಾಲ ಸೌಲಭ್ಯ ಪಡೆಯಲು ಸಹಾಯ. ರೇಷ್ಮೆ ಕೃಷಿ ಅಭಿವೃದ್ಧಿಗೆ ಆತ್ಮ ಯೋಜನೆ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಗಳನ್ನು ಪೂರಕವಾಗಿ ಬಳಕೆ ಮಾಡಲು ರೈತರಿಗೆ ಉತ್ತೇಜನ ನೀಡುವುದು.

ಒಟ್ಟಾರೆಯಾಗಿ ಹೇಳುವುದಾದರೆ ಕಡಿಮೆ ಜಮೀನು ಹೊಂದಿರುವ ರೈತರು ರೇಷ್ಮೆ ಹುಳು ಸಾಕಾಣಿಕೆ ಮಾಡಿ ಉತ್ತಮ ಆದಾಯ ಗಳಿಸಬಹುದು. ಅಲ್ಲದೆ ಹೊಸದಾಗಿ ಬರುವ ಮಾದರಿ ಕೃಷಿಯ ಪದ್ದತಿಯನ್ನು ಅಳವಡಿಸಿಕೊಂಡು ಉಳಿದ ರೈತರಿಗೆ ಮಾದರಿಯಾಗಿದ್ದಾರೆ ರೈತ ರೇಣುಕಾರಾದ್ಯ.

ಗಿರೀಶ ಗಂಗನಹಳ್ಳಿ
ಐಇಸಿ ಸಂಯೋಜಕರು
ಜಿಲ್ಲಾ ಪಂಚಾಯತ್ ತುಮಕೂರು
7683994177

Pragati TV Social Connect for more latest u

One thought on “ರೇಷ್ಮೆ ಕೃಷಿಯಲ್ಲಿ ವರ್ಷಕ್ಕೆ 3 ಲಕ್ಷ ಆದಾಯ

Leave a Reply

Your email address will not be published. Required fields are marked *