ಈಜುಕೊಳದಲ್ಲಿ 3 ಯುವತಿಯರ ಸಾವು : ರೆಸಾರ್ಟ್ ಮಾಲೀಕ ಬಂಧನ

ಈಜುಕೊಳದಲ್ಲಿ 3 ಯುವತಿಯರ ಸಾವು : ರೆಸಾರ್ಟ್ ಮಾಲೀಕ ಬಂಧನ

ಮಂಗಳೂರು: ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮೇಶ್ವರದ ವಾಝ್ಕೋ ಬೀಚ್ ರೆಸಾರ್ಟ್ನ ಮಾಲೀಕ ಮತ್ತು ಮ್ಯಾನೇಜರ್ನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ರೆಸಾರ್ಟ್ ಮಾಲೀಕ ಮನೋಹರ್ ಮತ್ತು ಮ್ಯಾನೇಜರ್ ಭರತ್ ಬಂಧಿತರು.

ಮೈಸೂರು ಕುರುಬರ ಹಳ್ಳಿ 4ನೇ ಕ್ರಾಸ್ ನಿವಾಸಿ ನಿಶಿತಾ ಎಂ.ಡಿ.(21), ಮೈಸೂರು ರಾಮಾನುಜ ರಸ್ತೆಯ ಕೆ.ಆರ್.ಮೊಹಲ್ಲಾ ನಿವಾಸಿ ಪಾರ್ವತಿ ಎಸ್ (20), ಮೈಸೂರು ವಿಜಯನಗರ ದೇವರಾಜ ಮೊಹಲ್ಲಾ ನಿವಾಸಿ ಕೀರ್ತನಾ ಎನ್(21) ಶನಿವಾರ ಬೆಳಗ್ಗೆ ರೆಸಾರ್ಟ್ಗೆ ಬಂದು ತಂಗಿದ್ದರು.

ಭಾನುವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ರೆಸಾರ್ಟ್ ಮುಂಭಾಗದಲ್ಲಿದ್ದ ಈಜುಕೊಳಕ್ಕೆ ಇಳಿದಿದ್ದರು. ಈ ವೇಳೆ ಓರ್ವ ಯುವತಿ ಈಜುಕೊಳದ ಮಧ್ಯದ ಆಳವಿದ್ದ ಕಡೆ ಹೋಗಿ ಸಿಲುಕಿಕೊಂಡಿದ್ದಳು. ಆಕೆ ಒದ್ದಾಡುತ್ತಿರುವುದನ್ನು ಗಮನಿಸಿ ಮತ್ತಿಬ್ಬರು ರಕ್ಷಣೆಗೆ ಧಾವಿಸಿದ್ದರು. ಆದರೆ ಮೂವರಿಗೂ ಈಜು ಬಾರದ ಕಾರಣ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ರೆಸಾರ್ಟ್ ಸಿಬ್ಬಂದಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿತ್ತು. ಯುವತಿಯರು ಒದ್ದಾಡುತ್ತಿರುವ ಮನಕಲುಕುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಘಟನೆಯ ಹಿನ್ನೆಲೆಯಲ್ಲಿ ರಾತ್ರಿ ಮಂಗಳೂರಿಗೆ ಆಗಮಿಸಿದ ಯುವತಿಯ ಪೋಷಕರು ಉಳ್ಳಾಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ್ವಯ ಪೊಲೀಸರು, ವಾಝ್ಕೋ ಬೀಚ್ ರೆಸಾರ್ಟ್ನ ಮಾಲೀಕ ಮತ್ತು ಮ್ಯಾನೇಜರನನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *