ಬೆಂಗಳೂರು: ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣವನ್ನು ಅಪಾರ ಸಂಖ್ಯೆಯ ಜನರು ನೆಚ್ಚಿಕೊಂಡಿದ್ದಾರೆ. ನಮ್ಮ ಮೆಟ್ರೋ ದೈನಂದಿನ ಸಾರಿಗೆ ಭಾಗವೇ ಆಗಿದೆ. ಅಷ್ಟರ ಮಟ್ಟಿಗೆ ವೇಗ ಮತ್ತು ಸುರಕ್ಷಿತ ಸೇವೆ ನೀಡುತ್ತಿರುವ ಬೆಂಗಳೂರು ಮೆಟ್ರೋ ಹಸಿರು ಮಾರ್ಗದಲ್ಲಿ ದಿಢೀರ್ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ಮಹಾಲಕ್ಷ್ಮಿ ನಿಲ್ದಾಣದಲ್ಲಿ ಎಲ್ಲ ಪ್ರಯಾಣಿಕರನ್ನು ಇಳಿಸಲಾಯಿತು. ಅರ್ಧಗಂಟೆಗೂ ಹೆಚ್ಚು ಸಮಯ ಸಂಚಾರ ಅಸ್ತವ್ಯಸ್ತವಾಯಿತು.

ಮಂಗಳವಾರ ಹಸಿರು ಮಾರ್ಗದ ಮಹಾಲಕ್ಷ್ಮಿ ನಿಲ್ದಾಣದ ಬಳಿ ಹಳಿಯಲ್ಲಿ ಲೋಪದೋಷ ಉಂಟಾಗಿದ್ದು ಕಂಡು ಬಂದಿದೆ. ಉಂಟಾದ ದೋಷ ವನ್ನು ಗಮನಿಸಿ ಪ್ರಯಾಣಿಕರ ಗರಿಷ್ಠ ಸುರಕ್ಷತೆಗಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ತುರ್ತು ದುರಸ್ತಿ ಕಾರ್ಯವನ್ನು ಕೈಗೊಂಡರು. ಇದರಿಂದಾಗಿ ಮಧ್ಯಾಹ್ನ ಕಚೇರಿಗೆ, ಬೇರೆ ಬೇರೆ ಕಡೆಗಳಲ್ಲಿ ತೆರಳಲು ಮೆಟ್ರೋ ಏರಿದ್ದ ನೂರಾರು ಪ್ರಯಾಣಿಕರು ಸರಿಯಾದ ಸಮಯಕ್ಕೆ ಹೋಗಲಾರದೇ ಪರದಾಡಿದರು.
ಹಳಿ ಸಮಸ್ಯೆ ಕಾರಣ ಹಸಿರು ಮಾರ್ಗದ ಮೆಟ್ರೋ ರೈಲಿನ ಸಂಚಾರದಲ್ಲಿ ನೆನ್ನೆ ಮಧ್ಯಾಹ್ನ 3:28 ಗಂಟೆಯಿಂದ ಸಂಜೆ 4:05 ರವರೆಗೆ ಅಡಚಣೆ ಉಂಟಾಯಿತು. ಮೆಟ್ರೋ ಸಂಚಾರ ಸಮಯದಲ್ಲಿ ವ್ಯತ್ಯಯವಾಯಿತು. ಸಂಜೆ 4:05 ರ ಹೊತ್ತಿಗೆ ಹಳಿ ಲೋಪದೋಷ ಸರಿಪಡಿಸಿದ ಮೆಟ್ರೋ ಅಧಿಕಾರಿಗಳು ಎಂದಿನಂತೆ ಮೆಟ್ರೋ ಸೇವೆ ಅನುವು ಮಾಡಿಕೊಟ್ಟರು. ಸಂಜೆ 4:05 ಗಂಟೆ ನಂತರ ದೈನಂದಿನಂತೆ ಮೆಟ್ರೋ ಪ್ರಯಾಣ ಸೇವೆಗಳು ಪ್ರಾಂಭಿಸಲಾಯಿತು. ಆದ ತೊಂದರೆ ಅಡಚಣೆಯಿಂದಾಗಿ ಪ್ರಯಾಣಿಕರಿಗೆ ಅನಾನುಕೂಲತೆ ಉಂಟಾಗಿದೆ. ತೊಂದರೆ ಎದುರಾಗಿದ್ದು, ಬಿಎಂಆರ್ಸಿಎಲ್ ವಿಷಾಧಿಸುತ್ತದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಯಾವುದೇ ಮುನ್ಸೂಚನೆ ನೀಡದೇ ಹೀಗೆ ದಿಢೀರ್ ಆಗಿ ಮೆಟ್ರೋ ನಿಲ್ಲಿಸಿ, ನಮ್ಮನ್ನು ಹೊರ ಕಳುಹಿಸಿದರೆ ಹೇಗೆ?. ಇದರಿಂದ ಪ್ರಯಾಣಿಕರಿಗೆ ತೊಂದರೆ ಆಗುತ್ತದೆ ಎಂದು ಕೆಲವರು ಆಕ್ರೋಶ, ಅಸಮಾಧಾನ ಹೊರ ಹಾಕಿದರು..
ಅಧಿಕಾರಿಗಳ ನಿರ್ವಹಣೆ ಮಧ್ಯೆ ದಿಢೀರ್ ಸಮಸ್ಯೆ ಬೆಂಗಳೂರು ನಮ್ಮ ಮೆಟ್ರೋ 2011 ರಿಂದ ಆರಂಭವಾಗಿದೆ. ಅಲ್ಲಿಂದ ಈವರೆಗೆ ಹಳಿ, ರೈಲುಗಳ ಬಗ್ಗೆ ಗಮನ ವಹಿಸುತ್ತಲೇ ಬರುತ್ತಿದೆ. ಆದರೆ ಕೆಲವೊಮ್ಮೆ ದಿಢೀರ್ ಸಮಸ್ಯೆ ಎದುರಾದಾಗ ಅನಿವಾರ್ಯವಾಗಿ ಪ್ರಯಾಣಿಕರು ಸಂಚಾರ ಅಡಚಣೆ ಎದುರಿಸಬೇಕಾಗುತ್ತದೆ. ನಮ್ಮ ಮೆಟ್ರೋ ತನ್ನ ಸೇವೆ, ವಿಸ್ತರಣೆಯಿಂದ ಖ್ಯಾತಿ ಪಡೆದಿದೆ. ಇತ್ತೀಚೆಗೆ ಹೆಚ್ಚಾದ ಮೆಟ್ರೋ ಪ್ರಯಾಣ ದರದಿಂದ ಮೆಟ್ರೋ ರೈಲು ಏರುವವರ ಸಂಖ್ಯೆ ಕೊಂಚ ಕಡಿಮೆ ಆಗಿತ್ತು. ಇದೀಗ ಮತ್ತೆ ಎಲ್ಲವು ಸಹಜ ಸ್ಥಿತಿಗೆ ಬರುತ್ತಿದೆ. ಜನರು ಮತ್ತೆ ಮೆಟ್ರೋದತ್ತ ಮುಖ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ..