ಬೆಂಗಳೂರು: ಬೆಂಗಳೂರು ನಗರದ ಭವಿಷ್ಯದ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಕಾವೇರಿ 6ನೇ ಹಂತದ ಯೋಜನೆಯನ್ನು ಶೀಘ್ರದಲ್ಲೇ ಜಾರಿಗೊಳಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಹೇಳಿದ್ದಾರೆ.
ಇಂದು ಮಳವಳ್ಳಿ ತಾಲೂಕಿನ ತೊರೆಕಡ್ನಹಳ್ಳಿ(ಟಿ.ಕೆ.ಹಳ್ಳಿ) ಯಲ್ಲಿ ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ನೀರು ಪೂರೈಸುವ ಕಾವೇರಿ 5ನೇ ಹಂತದ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಸಿಎಂ, ಒಟ್ಟು 7,200 ಕೋಟಿ ರೂಪಾಯಿ ವೆಚ್ಚದ ಕಾವೇರಿ 6ನೇ ಹಂತದ ಯೋಜನೆಯನ್ನು ಶೀಘ್ರ ಅನುಷ್ಠಾನಗೊಳಿಸುವುದಾಗಿ ಘೋಷಿಸಿದರು.
ಈಗಾಗಲೇ ಬೆಂಗಳೂರು ನಗರಕ್ಕೆ ವಿವಿಧ ಹಂತಗಳಲ್ಲಿ 2,225 ಎಂಎಲ್‌ಡಿ ನೀರು ಸರಬರಾಜು ಮಾಡಲಾಗುತ್ತಿದೆ. 6ನೇ ಹಂತದ ಯೋಜನೆಯು ಭವಿಷ್ಯದಲ್ಲಿ ಬೆಂಗಳೂರಿನ ಎಲ್ಲಾ ನಾಗರಿಕರಿಗೆ ಸಾಕಷ್ಟು ನೀರು ಒದಗಿಸಲಿದೆ. ಈ ಯೋಜನೆಯು 9 ಕೊಳಚೆನೀರು ಸಂಸ್ಕರಣಾ ಘಟಕಗಳನ್ನು(ಎಸ್‌ಟಿಪಿ) ಹೊಂದಲಿದೆ ಎಂದು ಸಿಎಂ ತಿಳಿಸಿದರು.
ಕುಡಿಯುವ ನೀರು ಪೂರೈಕೆಯ ವೆಚ್ಚ ಸುಮಾರು 5,200 ಕೋಟಿ ರೂಪಾಯಿ ಆಗಲಿದ್ದು, 9 ಎಸ್‌ಟಿಪಿಗಳ ನಿರ್ಮಾಣದ ವೆಚ್ಚ ಸುಮಾರು 2000 ಕೋಟಿ ರೂಪಾಯಿ ಆಗಲಿದೆ. ಎಲ್ಲವನ್ನೂ ಒಟ್ಟುಗೂಡಿಸಿ ಇದು 7200 ಕೋಟಿ ರೂಪಾಯಿಗಳ ಯೋಜನೆಯಾಗಿದೆ ಎಂದು ಹೇಳಿದರು.
“ನಗರದ ಮೂಲೆ ಮೂಲೆಗೂ ಸಮರ್ಪಕ ನೀರು ಪೂರೈಸುವ ಮೂಲಕ ಬೆಂಗಳೂರು ನಗರಕ್ಕೆ ನೀರಿನ ಕೊರತೆಯಾಗದಂತೆ ನೋಡಿಕೊಳ್ಳುವುದು ನಮ್ಮ ಗುರಿಯಾಗಿದೆ. ಇದಕ್ಕಾಗಿ ನಾವು 52 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದೇವೆ ಎಂದರು.