ಹೊಸ ಜಾಹೀರಾತು ನೀತಿ, ಒಂದು ವಾರದೊಳಗೆ ಸಾರ್ವಜನಿಕ ಚರ್ಚೆಗೆ ಅವಕಾಶ : ಡಿಸಿಎಂ

ಕರಿಯಾ ಎಂದಿದ್ದಕ್ಕೆ ವರ್ಣಭೇದ ಅಂತ ದೂರು ಕೊಡಲು ಹೇಳಿ || ಜಮೀರ್ ಹೇಳಿಕೆಗೆ ಡಿಸಿಎಂ ಗರಂ

ಬೆಂಗಳೂರು: ಮುಂದಿನ ಒಂದು ವಾರದೊಳಗೆ ಜಾಹೀರಾತು ನೀತಿಯ ಕರಡು ಪ್ರತಿಯನ್ನು ಸಾರ್ವಜನಿಕ ಚರ್ಚೆಗೆ ಬಿಡುಗಡೆ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ನಡೆದ ಅಧಿಕಾರಿಗಳ ಸಭೆ ಬಳಿಕ ಮಾಧ್ಯಮ ಗೋಷ್ಠಿ ನಡೆಸಿ ಮಾತನಾಡಿದ ಅವರು, ಕರಡು ಪ್ರತಿಯ ಕುರಿತು ಆಕ್ಷೇಪಣೆಗಳನ್ನು ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗುವುದು. ಅನೇಕ ವರ್ಷಗಳಿಂದ ನ್ಯಾಯಾಲಯದಲ್ಲಿ ಪ್ರಕರಣಗಳು ಇದ್ದ ಕಾರಣಕ್ಕೆ ಕಳೆದ ಒಂದು ವರ್ಷದಿಂದ ಜಾಹೀರಾತು ನೀತಿ ಬಾಕಿ ಉಳಿದಿತ್ತು. ಪ್ರಸ್ತುತ ಸಂಘ, ಸಂಸ್ಥೆಗಳ ಜೊತೆ ಚರ್ಚೆ ನಡೆಸಲಾಗಿದೆ ಎಂದು ಹೇಳಿದರು.

60 ಅಡಿಗಿಂತ ಹೆಚ್ಚು ಅಗಲ ಇರುವ ರಸ್ತೆಗಳಲ್ಲಿ ಗ್ರೂಪ್ ಪ್ಯಾಕೇಜ್ ತಯಾರಿಸಿ ಅವಕಾಶ ನೀಡಲಾಗುವುದು. ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳ ಮೇಲೆ ಜಾಹೀರಾತು ನೀಡಲು ಅವಕಾಶ ನೀಡಲಾಗುವುದು. ಬಿಬಿಎಂಪಿಗೆ ತೆರಿಗೆ ನೀಡಿ ಖಾಸಗಿ ಕಟ್ಟಡಗಳು ಬಾಡಿಗೆ ನೀಡಬಹುದು. ಕಟ್ಟಡಗಳ ವಿಸ್ತೀರ್ಣ, ಎತ್ತರಕ್ಕೆ ತಕ್ಕಂತೆ ಯೂನಿಫಾರ್ಮಿಟಿ ತರಲಾಗುವುದು. ಮನಬಂದಂತೆ ಹಾಕಲು ಅವಕಾಶವಿಲ್ಲ. ಫಲಕಗಳನ್ನು ಮಾಡಲು ಯಾವ ಗುಣಮಟ್ಟದ ವಸ್ತು ಬಳಸಬೇಕು ಎಂದು ನಂತರ ತಿಳಿಸಲಾಗುವುದು. ಸರ್ಕಾರದಲ್ಲಿ ಇರುವ ಮೀಸಲಾತಿಗೆ ಅನುಗುಣವಾಗಿ ನೀಡಲಾಗುವುದು. ಪಿಪಿಪಿ ಮಾದರಿಯಲ್ಲಿ ಹಿಂದಿನ ಸರ್ಕಾರ ಒಂದಷ್ಟು ಅವಕಾಶ ನೀಡಿದ್ದು ಕಾನೂನು ಪ್ರಕಾರವಾಗಿ ಇದ್ದರೆ ರಕ್ಷಣೆ ಮಾಡಲಾಗುವುದು. ಏನೂ ಮಾಡದೇ ಇದ್ದವರನ್ನು ಕಾನೂನಿನ ಪ್ರಕಾರ ವಜಾ ಮಾಡಲಾಗುವುದು ಎಂದು ಹೇಳಿದರು.

60 ಅಡಿಗಿಂತ ರಸ್ತೆ ಕಡಿಮೆ ಇದ್ದು, ಕಮರ್ಷಿಯಲ್ ವಲಯ ಎಂದು ಗುರುತಿಸಿದ್ದರೆ ಅಲ್ಲಿ ಜಾಹೀರಾತು ಅಳವಡಿಕೆಗೆ ಅವಕಾಶ ನೀಡಲಾಗುವುದು. ಜನಸಾಂದ್ರತೆ ಹಾಗೂ ವಹಿವಾಟು ಹೆಚ್ಚಿರುವ ಕಡೆ ಅವಕಾಶ ನೀಡಲಾಗುವುದು. ಸರ್ಕಾರಕ್ಕೆ ಹಣ ಬಾಕಿ ಉಳಿಸಿಕೊಂಡಿರುವ, ದಾವೆ ಹೂಡಿರುವವರಿಗೆ ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡುವುದಿಲ್ಲ. ನಾವು ಹೇಗೆ ಚುನಾವಣೆಗೆ ನಿಲ್ಲುವಾಗ ಯಾವುದೇ ಬಾಕಿಗಳನ್ನು ಉಳಿಸಿಕೊಳ್ಳದೇ ಇರುತ್ತೇವೆ, ಅದೇ ರೀತಿ ಇಲ್ಲಿ ಭಾಗವಹಿಸುವವರು ಎಲ್ಲಾ ಬಾಕಿಗಳನ್ನು ಕಟ್ಟಬೇಕು ಎಂದರು.

Leave a Reply

Your email address will not be published. Required fields are marked *