ತುಮಕೂರಿನಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆ: 5 ಮಕ್ಕಳ ರಕ್ಷಣೆ, 7 ಮಂದಿ ಬಂಧನ

ತುಮಕೂರು: ಅವಿವಾಹಿತರು ಹಾಗೂ ಅಕ್ರಮ ಸಂಬಂಧದಿಂದ ಗರ್ಭ ಧರಿಸಿದ ಮಹಿಳೆಯರನ್ನು ಪತ್ತೆ ಹಚ್ಚಿ ಅವರು ಜನ್ಮ ನೀಡುವ ಮಕ್ಕಳನ್ನು ಪಡೆದು ಮಕ್ಕಳಿಲ್ಲದ ದಂಪತಿಗೆ ಹೆಚ್ಚಿನ ಹಣಕ್ಕಾಗಿ ಮಾರಾಟ ಮಾಡುತ್ತಿದ್ದ ಜಾಲವನ್ನು ಬೇಧಿಸಿರುವ ಗುಬ್ಬಿ ಪೊಲೀಸರು, 7 ಮಂದಿ ಆರೋಪಿಗಳನ್ನು ಬಂಧಿಸಿ 5 ಮಕ್ಕಳನ್ನು ರಕ್ಷಿಸಿದ್ದಾರೆ.

ಬಂಧಿತರನ್ನು ಮಹೇಶ್ ಯು ಡಿ, ಮೆಹಬೂಬ್ ಷರೀಫ್, ರಾಮಕೃಷ್ಣಪ್ಪ, ಹನುಮಂತರಾಜು, ಮುಬಾರಕ್ ಪಾಷಾ, ಪೂರ್ಣಿಮಾ ಮತ್ತು ಸೌಜನ್ಯ ಎಂದು ಗುರುತಿಸಲಾಗಿದೆ.

ಜೂನ್ 9ರ ರಾತ್ರಿ ಅಂತಾಪುರ ಸಮೀಪದ ದೇವಸ್ಥಾನದ ಬಳಿ ಮಲಗಿದ್ದಾಗ ಮಹಾದೇವಿ ಎಂಬುವವರ 11 ತಿಂಗಳ ಮಗುವನ್ನು ಅಪಹರಿಸಲಾಗಿತ್ತು. ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣದ ತನಿಖೆಗಾಗಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ ವಿ ವಿಶೇಷ ತಂಡವನ್ನು ರಚಿಸಿದ್ದರು. ಬಳಿಕ ಗುಬ್ಬಿ ತಾಲೂಕಿನ ಬಿಕ್ಕೆಗುಡ್ಡದ ರಾಮಕೃಷ್ಣ ಮತ್ತು ತುಮಕೂರಿನ ಭಾರತಿ ನಗರದ ಹನುಮಂತರಾಜು ಅವರನ್ನು ಬಂಧಿಸಲಾಗಿತ್ತು.

ವಿಚಾರಣೆ ವೇಳೆ ಈ ಇಬ್ಬರು ನೀಡಿದ ಮಾಹಿತಿ ಮೇರೆಗೆ ಈ ಹಿಂದೆ ಕುಣಿಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಅಶೋಕ ನಗರದ ನಿವಾಸಿ ಮಹೇಶ್ ಎಂಬಾತನನ್ನು ಬಂಧಿಸಲಾಗಿದೆ.

ಮಹೇಶನನ್ನು ವಿಚಾರಣೆಗೊಳಪಡಿಸಿದ ಆರೋಪಿಗಳು ಅಪಹರಿಸಿದ ಮಗುವನ್ನು ಬೆಳ್ಳೂರು ಕ್ರಾಸ್‌ನ ಮುಬಾರಕ್ ಎಂಬುವವರಿಗೆ 1,75,00 ರೂ.ಗೆ ಮಾರಾಟ ಮಾಡಿರುವುದಾಗಿ ತಿಳಿಸಿದರು. ನಂತರ ಪೊಲೀಸರು ಮುಬಾರಕ್‌ನನ್ನು ಬಂಧಿಸಿ ಮಗುವನ್ನು ರಕ್ಷಿಸಿದರು.

ಬಂಧಿತ ಆರೋಪಿಗಳು ವಿವಾಹವಾಗದೇ ಗರ್ಭ ಧರಿಸಿದ ಮಹಿಳೆಯರು ಹಾಗೂ ಅಕ್ರಮ ಸಂಭಂದದಿಂದ ಗರ್ಭ ಧರಿಸಿದ ಮಹಿಳೆಯರನ್ನು ಸಂಪರ್ಕಿಸಿ ಅವರಿಂದ ಮಕ್ಕಳನ್ನು ಪಡೆದು, ನಂತರ 2 ರಿಂದ 3 ಲಕ್ಷ ರೂ.ಗೆ ಮಕ್ಕಳಿಲ್ಲದ ದಂಪತಿಗಳಿಗೆ ಮಾರಾಟ ಮಾಡುತ್ತಿದ್ದರು.

ಹುಳಿಯಾರು ಪಟ್ಟಣದಲ್ಲಿ ಪತ್ನಿ ಹೆಸರಿನಲ್ಲಿ ಖಾಸಗಿ ಆಸ್ಪತ್ರೆ ನಡೆಸುತ್ತಿರುವ ಮೆಹಬೂಬ್ ಷರೀಫ್ ಕೂಡ ಈ ದಂಧೆಯಲ್ಲಿ ಭಾಗಿಯಾಗಿದ್ದಾನೆಂದು ತಿಳಿದುಬಂದಿದೆ. ಈತ ಗೂಬೆಹಳ್ಳಿ ಗ್ರಾಮದ ಪಿಎಚ್‌ಸಿಯಲ್ಲಿ ಫಾರ್ಮಸಿಸ್ಟ್ ಆಗಿಯೂ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಆರೋಪಿಗಳು ಮಾರಾಟ ಮಾಡಿದ್ದ ಒಂಬತ್ತು ಮಕ್ಕಳ ಪೈಕಿ ಐವರನ್ನು ಇದೀಗ ರಕ್ಷಿಸಲಾಗಿದೆ. ಈ ಪೈಕಿ ಒಂದು ಮಗು ಶವವಾಗಿ ಪತ್ತೆಯಾಗಿದೆ. ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಮೇರೆಗೆ ಒಂದು ಮಗುವನ್ನು ಪೋಷಕರಿಗೆ ನೀಡಲಾಗಿದ್ದು, ಉಳಿದ ನಾಲ್ವರನ್ನು ದತ್ತು ಕೇಂದ್ರದಲ್ಲಿ ಇರಿಸಲಾಗಿದೆ.

Leave a Reply

Your email address will not be published. Required fields are marked *