ತುಮಕೂರು: ಪಟಾಕಿ ಅಂಗಡಿಯಲ್ಲಿ ಬೆಂಕಿ ಅನಾಹುತ

ತುಮಕೂರು: ಪಟಾಕಿ ಗೋದಾಮಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಪ್ರಮಾಣದ ಸಾಮಗ್ರಿ ಸುಟ್ಟು ಭಸ್ಮವಾಗಿರುವ ಘಟನೆ ನಗರದ ಹೃದಯ ಭಾಗ ಮಂಡಿ ಪೇಟೆಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಪಕ್ಕದ ಪ್ಲಾಸ್ಟಿಕ್ ಅಂಗಡಿ, ಗ್ರಂಥಿಗೆ ಅಂಗಡಿಯ ಗೋದಾಮಿಗೂ ಬೆಂಕಿ ವ್ಯಾಪಿಸಿತು.

ಮೆಟ್ರೋ ಮುಂಭಾಗದಲ್ಲಿರುವ ನೇತಾಜಿ ಸ್ಟೋರ್ ಗೋದಾಮಿನಲ್ಲಿ ಪಟಾಕಿ, ಗ್ರಂಥಿಗೆ, ಸ್ಟೇಷನರಿ ಪ್ಲಾಸ್ಟಿಕ್ ವಸ್ತುಗಳ ಮಳಿಗೆಗಳಿವೆ. ರಾಮಕೃಷ್ಣ ಎಂಬವರಿಗೆ ಸೇರಿದ ಮಳಿಗೆಗಳು ಇವಾಗಿವೆ.

ಅಕ್ರಮವಾಗಿ ಪಟಾಕಿ ಶೇಖರಿಸಿಟ್ಟಿದ್ದರಿಂದ ಅನಾಹುತ ಸಂಭವಿಸಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ನಿರಂತರವಾಗಿ ಪಟಾಕಿಗಳು ಸ್ಫೋಟಗೊಂಡಿದ್ದು ಜನರಲ್ಲಿ ಕೆಲಕಾಲ ಆತಂಕ ಉಂಟುಮಾಡಿತ್ತು. ಗೋದಾಮಿಗೆ ಹೊಂದಿಕೊಂಡಂತೆ ಮನೆಗಳಿವೆ. ಸ್ಫೋಟದ ಸದ್ದಿಗೆ ಸ್ಥಳೀಯ ನಿವಾಸಿಗಳು ಭಯಭೀತರಾಗಿದ್ದರು. ಸುತ್ತಮುತ್ತಲ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿತ್ತು.

ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಮಂಡಿಪೇಟೆ ರಸ್ತೆಯಲ್ಲಿ ಎರಡು ಕಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *