ನವದೆಹಲಿ: ಜಾರಿಗೆ ಬಂದಿರುವ ಹೊಸ ಕಾನೂನಿನಲ್ಲಿ ಕೆಲ ಅಪರಾಧಗಳಿಗೆ ಶಿಕ್ಷೆಯ ಪ್ರಮಾಣವನ್ನು ಹೆಚ್ಚಳ ಮಾಡಿದ್ದು, ಸರ್ಕಾರ ಮತ್ತು ಸಂಬಂಧಿತ ಕ್ಷೇತ್ರದ ಮಧ್ಯೆ ತಿಕ್ಕಾಟಕ್ಕೆ ಕಾರಣವಾಗಿದೆ. ಭಾರತೀಯ ವೈದ್ಯಕೀಯ ಸಂಘವು (ಐಎಂಎ) ವೈದ್ಯರ ನಿರ್ಲಕ್ಷ್ಯದ ಸಾವಿಗೆ ವಿಧಿಸಲಾಗಿರುವ ಶಿಕ್ಷೆಯನ್ನು ಕಡಿಮೆ ಮಾಡಬೇಕು, ಇಲ್ಲವೇ ಕಾನೂನನ್ನೇ ಕೈಬಿಡಬೇಕು ಎಂದು ಆಗ್ರಹಿಸಿದೆ. ಈ ಮನವಿಯನ್ನು ಕೇಂದ್ರ ಸರ್ಕಾರ ನಿರಾಕರಿಸಿದೆ.
ಶಿಕ್ಷೆಯ ಪ್ರಮಾಣದ ವಿರುದ್ಧ ಭಾರತೀಯ ವೈದ್ಯಕೀಯ ಸಂಘವು ‘ಜಸ್ಟೀಸ್ ಫಾರ್ ಡಾಕ್ಟರ್ಸ್’ ಎಂಬ ಅಭಿಯಾನ ಆರಂಭಿಸಲು ಮುಂದಾಗಿದೆ. ಜುಲೈ- ಆಗಸ್ಟ್ನಲ್ಲಿ ಈ ಅಭಿಯಾನ ನಡೆಸಲು ಕರೆ ನೀಡಿದೆ. ಆದರೆ, ನಿರ್ಲಕ್ಷ್ಯದಿಂದ ಆಗುವ ಸಾವಿಗೆ ಹೊಸ ಕ್ರಿಮಿನಲ್ ಕಾನೂನಿನಡಿ ಆಗುವ ಶಿಕ್ಷೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೇಂದ್ರವು ಮಂಗಳವಾರ ಪುನರುಚ್ಚರಿಸಿದೆ.
ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಕಾನೂನಿನಲ್ಲಿ ವೈದ್ಯಕೀಯ ಕೆಲಸದ ವೇಳೆ ನೋಂದಾಯಿತ ವೈದ್ಯರಿಂದ ಉಂಟಾದ ನಿರ್ಲಕ್ಷ್ಯದ ಸಾವಿಗೆ ಗರಿಷ್ಠ ಶಿಕ್ಷೆಯನ್ನು ವಿಧಿಸಲಾಗಿದೆ. ಅಂದರೆ, ಅಪರಾಧಿ ವೈದ್ಯರಿಗೆ 5 ವರ್ಷ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಲು ಸೂಚಿಸಲಾಗಿದೆ. ಹಿಂದಿನ ಐಪಿಸಿ ಕಾನೂನಿನ ಪ್ರಕಾರ ಈ ಅಪರಾಧಕ್ಕೆ 2 ವರ್ಷ ಜೈಲು ಶಿಕ್ಷೆ ಇತ್ತು. ಶಿಕ್ಷೆಯ ಪ್ರಮಾಣ ಹೆಚ್ಚಿಸಿದ್ದಕ್ಕೆ ವೈದ್ಯರ ಸಂಘವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.