ಬಾಂಗ್ಲಾದೇಶ ಬಿಕ್ಕಟ್ಟು: ಗಡಿಭಾಗದಲ್ಲಿ ಭದ್ರತೆ ಹೆಚ್ಚಿಸಿದ ಈಶಾನ್ಯದ 4 ರಾಜ್ಯಗಳು

ಗುವಾಹಟಿ/ಪಾಟ್ನಾ: ಬಾಂಗ್ಲಾದೇಶದಲ್ಲಿ ನಾಗರಿಕ ಅನಿಶ್ಚಿತತೆ, ಹಿಂಸಾಚಾರ ಮುಂದುವರಿದಿದ್ದು, ಇದರಿಂದ ಭಾರತದ ಈಶಾನ್ಯ ರಾಜ್ಯಗಳಾದ ಅಸ್ಸಾಂ, ತ್ರಿಪುರಾ, ಮಿಜೋರಾಂ ಮತ್ತು ಮೇಘಾಲಯ ಅಂತಾರಾಷ್ಟ್ರೀಯ ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಬಾಂಗ್ಲಾದೇಶ ಗಡಿಗೆ ಸಮೀಪವಿರುವ ಬಿಹಾರ ರಾಜ್ಯದಲ್ಲಿ ಕೂಡ ಕಟ್ಟೆಚ್ಚರ ವಹಿಸಲಾಗಿದೆ.

ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಹಾ ಅವರು, ನಾನು ಮುಖ್ಯ ಕಾರ್ಯದರ್ಶಿ, ಡಿಜಿಪಿ ಮತ್ತು ಬಿಎಸ್‌ಎಫ್, ಅಸ್ಸಾಂ ರೈಫಲ್ಸ್ ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಗಡಿಯಲ್ಲಿ ನಿಕಟ ನಿಗಾ ಇರಿಸಲು ಕೇಳಿಕೊಂಡಿದ್ದೇನೆ. ಕೇಂದ್ರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದ್ದರು.

ಬಾಂಗ್ಲಾದೇಶದಲ್ಲಿ ಹಿಂದೂಗಳ ಮನೆಗಳ ಮೇಲೆ ನಡೆದ ದಾಳಿಗಳ ಬಗ್ಗೆ ವರದಿಯಾದ ಘಟನೆಗಳ ಬಗ್ಗೆ ಕೇಳಲಾದ ಪ್ರಶ್ನೆಗೆ, ಅಲ್ಲಿನ ಬಹುಸಂಖ್ಯಾತ ಸಮುದಾಯದ ಜನರು ಈ ಘಟನೆಗಳನ್ನು ತಡೆದು ರಕ್ಷಣೆ ನೀಡುತ್ತಿದ್ದಾರೆ ಎಂದು ಸೋಷಿಯಲ್ ಮೀಡಿಯಾ ಮೂಲಕ ತಿಳಿಯುತ್ತಿದ್ದೇನೆ ಎಂದರು.

ಮೇಘಾಲಯ ಬಾಂಗ್ಲಾದೇಶದ ಗಡಿಯಲ್ಲಿ ರಾತ್ರಿ ಕರ್ಫ್ಯೂ ವಿಧಿಸಿದೆ. ಉಪ ಮುಖ್ಯಮಂತ್ರಿ ಪ್ರೆಸ್ಟೋನ್ ಟೈನ್ಸಾಂಗ್, ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ಸುಧಾರಿಸುವವರೆಗೆ ಸಂಜೆ 6 ರಿಂದ ಬೆಳಿಗ್ಗೆ 6 ರವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಹೇಳಿದ್ದಾರೆ. ಅಸ್ಸಾಂ ಸರ್ಕಾರ ನಾಲ್ಕು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಿದೆ. ಸಂಭಾವ್ಯ ಭದ್ರತಾ ಬೆದರಿಕೆಗಳನ್ನು ಪರಿಹರಿಸಲು ಗಡಿ ಭದ್ರತಾ ಪಡೆಯ ಗುವಾಹಟಿ ಗಡಿನಾಡು ಕೂಡ ಹೆಚ್ಚಿನ ಎಚ್ಚರಿಕೆಯನ್ನು ನೀಡಿದೆ.

Leave a Reply

Your email address will not be published. Required fields are marked *