ಬೆಂಗಳೂರು: ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯು ಈ ವರ್ಷದ ಜನವರಿಯಿಂದ ಜುಲೈವರೆಗೆ ರಾಜ್ಯಾದ್ಯಂತ 5.18 ಲಕ್ಷ ಪಾಸ್‌ಪೋರ್ಟ್ ವಿತರಿಸಿದ್ದು, ಇದು ಈವರೆಗಿನ ಗರಿಷ್ಠವಾಗಿದೆ.
2023ರಲ್ಲಿ ಇದೇ ಅವಧಿಯಲ್ಲಿ 3.87 ಲಕ್ಷ ಮತ್ತು 2022ರಲ್ಲಿ 3.12 ಲಕ್ಷ ಪಾಸ್‌ಪೋರ್ಟ್‌ಗಳನ್ನು ವಿತರಿಸಲಾಗಿತ್ತು. ಈ ಬಾರಿ 5.18 ಲಕ್ಷ ಪಾಸ್‌ಪೋರ್ಟ್‌ಗಳನ್ನು ನೀಡಲಾಗಿದ್ದು, ಈ ಪೈಕಿ 14 ಪಾಸ್‌ಪೋರ್ಟ್‌ಗಳನ್ನು ಟ್ರಾನ್ಸ್‌ಜೆಂಡರ್‌ಗಳಿಗೆ ನೀಡಲಾಗಿದೆ. ಅಲ್ಲದೆ, 18,428 ಜನರಿಗೆ ವಿವಿಧ ಪ್ರಮಾಣಪತ್ರಗಳನ್ನು ವಿತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ (RPO) ಕೆ ಕೃಷ್ಣ ಅವರು ಮಾತನಾಡಿ, ವಿದೇಶಕ್ಕೆ ಹೋಗುವವರ ಸಂಖ್ಯೆ ಅದರಲ್ಲೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಈ ವರ್ಷಾಂತ್ಯದ ವೇಳೆಗೆ ಪಾಸ್‌ಪೋರ್ಟ್‌ಗಳನ್ನು ನೀಡುವಲ್ಲಿ ಸಾರ್ವಕಾಲಿಕ ದಾಖಲೆಯನ್ನು ಮುಟ್ಟುತ್ತೇವೆಂದು ಹೇಳಿದ್ದಾರೆ.
ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯು 2023 ರಲ್ಲಿ 8,49,646 ಪಾಸ್‌ಪೋರ್ಟ್‌ಗಳನ್ನು ವಿತರಿಸಿತ್ತು. ಈ ವರ್ಷ ಈ ಅಂಕಿಅಂಶವನ್ನು ದಾಟುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಇದಲ್ಲದೆ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯು ಒಂದೇ ದಿನದಲ್ಲಿ ಮಹಿಳೆಗೆ ಪಾಸ್‌ಪೋರ್ಟ್ ನೀಡಿದ್ದು, ಜರ್ಮನಿಗೆ ಹೋಗಲು ಸಹಾಯ ಮಾಡಿತ್ತು. ಮೈಸೂರಿನ ಎಸ್ ಮಂಜುಳಾ ಅವರಿಗೆ ಮಂಗಳವಾರ ಪಾಸ್ ಪೋರ್ಟ್ ನೀಡಲಾಗಿದೆ. ಬರ್ಲಿನ್‌ನಲ್ಲಿ ಓದುತ್ತಿರುವ ಅವರ ಮಗ ಮೋಹನ್ ಮಂಜುನಾಥ್ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಹೇಳಿದ್ದಾರೆ.