ಉಷ್ಣವಲಯದ ಪ್ರದೇಶದಲ್ಲಿರುವ ಕರ್ನಾಟಕದಲ್ಲಿ ಮಳೆಗಾಲದ ದಿನಗಳನ್ನು ಹೊರತು ಪಡಿಸಿದರೆ ಸೂರ್ಯ ರಶ್ಮಿಗೆ ಕೊರತೆ ಇಲ್ಲ. ಸೌರಶಕ್ತಿಯಿಂದ ವಿದ್ಯುತ್ತನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುವ ಕೆಲಸ ಈಗಾಗಲೇ ರಾಜ್ಯದ ಕೆಲವು ಕಡೆ ಯಶಸ್ವಿಯಾಗಿ ನಡೆದಿದೆ. ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿ ಸ್ಥಾಪಿಸಿರುವ ಸೌರವಿದ್ಯುತ್ ಪಾರ್ಕ್ ದೇಶದಲ್ಲಿಯೇ ದೊಡ್ಡ ಸೌರವಿದ್ಯುತ್ ಘಟಕವಾಗಿ ವಿದ್ಯುತ್ ಉತ್ಪಾದನೆಯಲ್ಲಿ ರಾಜ್ಯಕ್ಕೆ ನೆರವಾಗುತ್ತಿದೆ.
ರಾಜ್ಯದಲ್ಲಿ ವರ್ಷಕ್ಕೆ ಸರಾಸರಿ 240 ರಿಂದ 300 ದಿನಗಳಲ್ಲಿ ಬಿಸಿಲು ಬೀಳುತ್ತಿರುವ ಕಾರಣ ಸೌರವಿದ್ಯುತ್ಉತ್ಪಾದನೆಗೆ ವಿಫುಲ ಅವಕಾಶ ನಿಸರ್ಗದತ್ತವಾಗಿ ಸಿಕ್ಕಿದೆ. ವರ್ಷಕ್ಕೆ 25 ಗಿಗಾವ್ಯಾಟ್ (ಜಿಡಬ್ಲ್ಯು) ವಿದ್ಯುತ್ಉತ್ಪಾದಿಸಬಲ್ಲ ಸಾಮರ್ಥ್ಯ ರಾಜ್ಯದಲ್ಲಿದೆ.ಪಾವಗಡ ಮತ್ತಿತರಕಡೆ ಕಲ್ಪಿಸಿರುವ ವ್ಯವಸ್ಥೆಯಿಂದ ಸದ್ಯಕ್ಕೆ 9.3 ಗಿಗಾವ್ಯಾಟ್ ವಿದ್ಯುತ್ಉತ್ಪಾದನೆಯಾಗುತ್ತಿದೆ.
ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿಯೂ ದೊಡ್ಡ ಸೌರ ವಿದ್ಯುತ್ ಪಾರ್ಕ್ ನಿರ್ಮಿಸುವ ಯೋಜನೆಯನ್ನು ಸರ್ಕಾರ ಪ್ರಕಟಿಸಿದ್ದು ರಾಜ್ಯದ ವಿದ್ಯುತ್ ಉತ್ಪಾದನೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ.ಸಾರ್ವಜನಿಕರು ತಮ್ಮ ಮನೆಗಳ ಮೇಲು ಚಾವಣಿಯಲ್ಲಿ ಸೌರಫಲಕಗಳನ್ನು ಅಳವಡಿಸಿ ತಮ್ಮ ಅವಶ್ಯಕತೆಗೆ ತಕ್ಕ ವಿದ್ಯುತ್ತನ್ನು ಉತ್ಪಾದಿಸಿಕೊಳ್ಳುವ ಯೋಜನೆಯನ್ನು ಉತ್ತೇಜಿಸುವುದಕ್ಕೆ ಸಹಾಯ ಧನವನ್ನೂ ರಾಜ್ಯ ಸರ್ಕಾರ ನೀಡುತ್ತಿದೆ. ದೇಶದಲ್ಲಿಯೇ ಸೌರ ವಿದ್ಯುತ್ ಉತ್ಪಾದನೆಯನ್ನು ಒಂದು ಜನಾಂದೋಲನದ ರೀತಿಯಲ್ಲಿ ಕೈಗೊಳ್ಳುವ ಚಿಂತನೆ ನಡೆಸಿರುವ ಕೇಂದ್ರ ಸರ್ಕಾರ ವರ್ಷಕ್ಕೆ ಒಂದು ಕೋಟಿ ಮನೆಗಳು ಸೌರವಿದ್ಯುತ್ ಫಲಕಗಳನ್ನು ಅಳವಡಿಸಿಕೊಳ್ಳುವ ಗುರಿ ಇರುವ ಯೋಜನೆಯನ್ನು ಪ್ರಕಟಿಸಿದೆ.ಸಹಾಯ ಧನವೂ ಇರುವ ಸರ್ಕಾರದ ಈ ಯೋಜನೆಗಳಿಗೆ ಸರಿಯಾದ ಪ್ರಚಾರ ಸಿಕ್ಕಿ ಯೋಜನೆ ಕುರಿತಾಗಿ ಜನತೆಯಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯಬೇಕಿದೆ. ಸಹಾ ಐದನ ಪಡೆಯುವ ಪ್ರಕ್ರಿಯೆ ಸರಳವಾಗುವುದು ಅವಶ್ಯಕವಾಗಿದ್ದು ಸೌರಫಲಕಗಳ ಗುಣಮಟ್ಟವೂ ಅಂತರ ರಾಷ್ಟ್ರೀಯ ತಾಂತ್ರಿಕತೆಗೆ ಅನುಗುಣ ವಾಗಿರುವಂತೆ ಸರ್ಕಾರ ನೋಡಿಕೊಳ್ಳಬೇಕಿದೆ.
ಕಟ್ಟಡಗಳ ಚಾವಣಿಯ ಮೇಲೆ ಸೌರವಿದ್ಯುತ್ ಫಲಕಗಳನ್ನು ಅಳವಡಿಸಿ ಅದರಿಂದ ಪಡೆಯುವ ವಿದ್ಯುತ್ತಿನಿಂದ ಕಚೇರಿಯ ಅಗತ್ಯವನ್ನು ಪೂರೈಸಿಕೊಳ್ಳುವ ಯೋಜನೆಯನ್ನು ಕರ್ನಾಟಕ ಸಾರಿಗೆ ಇಲಾಖೆ ಪ್ರಕಟಿಸಿರುವುದು ಅತ್ಯಂತ ಪುರೋಗಾಮಿ ಚಿಂತನೆ. ಸದ್ಯಕ್ಕೆ ಬೆಂಗಳೂರು ನಗರದ ಸುತ್ತಲಿನ ಇಪ್ಪತ್ತು ಪ್ರಾದೇಶಿಕ ಸಾರಿಗೆಕಚೇರಿ (ಆರ್ಟಿಒ) ಕಟ್ಟಡಗಳ ಮೇಲೆ ಸೌರವಿದ್ಯುತ್ ಫಲಕಗಳನ್ನು ಅಳವಡಿಸಿ ಕಚೇರಿಯ ಅಗತ್ಯಕ್ಕೆತಕ್ಕ ವಿದ್ಯುತ್ತನ್ನು ಪಡೆಯುವುದಕ್ಕೆ ಇಲಾಖೆ ಮುಂದಾಗಿದೆ. ಇಲ್ಲಿ ಪ್ರಾಯೋಗಿಕವಾಗಿ ವ್ಯವಸ್ಥೆ ಮಾಡಿಅದರ ಯಶಸ್ಸಿನ ಆಧರಿಸಿ ರಾಜ್ಯದ ಇತರ ಕಡೆಗಳಲ್ಲಿನ ಆರ್ಟಿಒ ಕಚೇರಿಗಳಲ್ಲಿಯೂ ಅಳವಡಿಸಲು ಯೋಜಿಸಲಾಗಿದೆ.
ಕಲ್ಲಿದ್ದಲು ಬಳಸಿ ವಿದ್ಯುತ್ಉತ್ಪಾದಿಸುವ ಇಲ್ಲವೇ ಜಲ ವಿದ್ಯುತ್ತಿಗೆ ಮಾಡುವ ವೆಚ್ಚಕ್ಕಿಂತಲೂಕಡಿಮೆ ವೆಚ್ಚವಾಗುವ ಸೌರವಿದ್ಯುತ್ ಸರ್ಕಾರದ ಇಂಧನದ ಹೊರೆಯನ್ನು ಗಣನೀಯವಾಗಿ ತಗ್ಗಿಸಬಲ್ಲದು. ಸಾರಿಗೆ ಇಲಾಖೆಯ ಸ್ವಂತ ಆರ್ಟಿಒ ಕಚೇರಿ ಕಟ್ಟಡಗಳ ಮೇಲು ಛಾವಣಿಯ ವಿಸ್ತೀರ್ಣವನ್ನು ಅನುಸರಿಸಿ ಸೌರವಿದ್ಯುತ್ ಫಲಕಗಳನ್ನು ಅಳವಡಿಸಬೇಕಾಗುತ್ತದೆ. ಹೆಚ್ಚಿನ ವಿಸ್ತೀರ್ಣದಲ್ಲಿ ಸೌರಫಲಕಗಳನ್ನು ಅಳವಡಿಸಿದರೆ ಕಚೇರಿಯ ಅವಶ್ಯಕತೆ ಗಿಂತಲೂ ಹೆಚ್ಚಿನ ವಿದ್ಯುತ್ ಉತ್ಪಾದನೆಯಾಗಲಿದ್ದು ಅದನ್ನು ವಿದ್ಯುತ್ ಪ್ರಸರಣ ನಿಗಮಕ್ಕೆ ಮಾರುವ ಅವಕಾಶವೂ ಇರುತ್ತದೆ. ಸ್ವಂತವಾಗಿ ವಿದ್ಯತ್ ಉತ್ಪಾದಿಸಿ ಕಚೇರಿ ಕೆಲಸಗಳನ್ನು ನಿರ್ವಹಿಸಲು ಮುಂದಾಗಿರುವ ಸಾರಿಗೆ ಇಲಾಖೆ ಯೋಜನೆ ಸರ್ಕಾರದ ಇತರೆ ಇಲಾಖೆಗಳಿಗೂ ಮಾದರಿಆಗುವಂತಿದೆ. ಸ್ವಂತ ಕಟ್ಟಡಗಳಿರುವ ಸರ್ಕಾರದ ಎಲ್ಲ ಇಲಾಖೆಗಳ ಕಟ್ಟಡಗಳ ಮೇಲೆ ಸೌರವಿದ್ಯುತ್ಉತ್ಪಾದನೆಯ ಫಲಕಗಳನ್ನು ಅಳವಡಿಸಿಕೊಂಡರೆ ಆಯಾ ಕಚೇರಿಗಳು ವಿದ್ಯುತ್ಅವಶ್ಯಕತೆಯನ್ನು ಸ್ವಂತವಾಗಿ ಪೂರೈಸಿಕೊಳ್ಳುವ ಸಾಧ್ಯತೆಯನ್ನು ಸರ್ಕಾರ ಪರಿಶೀಲಿಸಬೇಕಿದೆ.
ರಾಜ್ಯದಲ್ಲಿ ಸೌರವಿದ್ಯುತ್ ಮತ್ತು ಗಾಳಿಯಿಂದ ಪಡೆಯುವ ವಿದ್ಯುತ್ತಿನ ಉತ್ಪಾದನೆ ಬಳಕೆದಾರರ ಅಗತ್ಯದ ಶೇ 49ರಷ್ಟನ್ನು ಪೂರೈಸುತ್ತಿರುವುದು ಗಮನಾರ್ಹ ಸಂಗತಿ. ವಿದ್ಯುತ್ ಉತ್ಪಾದನೆಯಲ್ಲಿ ಹೆಚ್ಚಿನ ಪ್ರಗತಿಯಾದರೆ ರೈತರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಸಾಧ್ಯವಾಗಲಿದೆ. ಈಗಿನಂತೆ ರಾತ್ರಿ ವೇಳೆ ಕೆಲವೇ ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡುತ್ತಿರುವ ಪರಿಸ್ಥಿತಿ ನಿವಾರಣೆಯಾಗಿ ಅವರಿಗೆ ಕೆಲಸದ ಸಮಯದಲ್ಲಿ ಗುಣಮಟ್ಟದ ವಿದ್ಯುತ್ ಸಿಗುವಂತಾದರೆ ರೈತರ ಕೃಷಿ ಚಟುವಟಿಕೆಗಳಿಗೂ ಬೆಂಬಲ ಸಿಗುತ್ತದೆ. ಕೃಷಿ ಉತ್ಪನ್ನಗಳಲ್ಲಿಯೂ ಹೆಚ್ಚಳವಾಗುತ್ತದೆ.ಆರ್ಥಿಕ ಚಟುವಟಿಕೆಗಳು ಚುರುಕಾಗಿ ರಾಜ್ಯದ ಒಟ್ಟು ಉತ್ಪಾದನೆಯಲ್ಲಿಯೂ ಹೆಚ್ಚಳವಾಗುತ್ತದೆ. ಸೌರವಿದ್ಯುತ್ ಘಟಕಗಳ ಸ್ಥಾಪನೆಯ ವೆಚ್ಚ ಎಲ್ಲರಿಗೂ ಭರಿಸುವಷ್ಟು ಕಡಿಮೆಯಾಗುವಂತೆ ಹೆಚ್ಚಿನ ಸಂಶೋಧನೆಯೂ ಅಗತ್ಯವಾಗಿದೆ. ಫಲಕಗಳ ಗುಣಮಟ್ಟ, ಬಾಳಿಕೆಯ ಅವಧಿಯ ಹೆಚ್ಚಳದ ಬಗ್ಗೆ ಸಂಶೋಧನೆಗೆ ಉತ್ತೇಜನ ನೀಡುವ ಯೋಜನೆಗಳನ್ನು ರೂಪಿಸಬೇಕಿದೆ. ಮಾಲಿನ್ಯ ರಹಿತವಾಗಿ ಪಡೆಯುವ ಸೌರ ವಿದ್ಯುತ್ರಾಜ್ಯದ ಪ್ರಗತಿಯ ಚಿತ್ರಣವನ್ನೇ ಬದಲಿಸಬಲ್ಲುದಾಗಿದೆ.