ಹಸಿರು ಹೊದಿಕೆಗೆ ₹100 ಕೋಟಿ ಪ್ರಸ್ತಾಪ; ಅರಣ್ಯ ಸಚಿವ ಈಶ್ವರ ಖಂಡ್ರೆ

ಹಸಿರು ಹೊದಿಕೆಗೆ ₹100 ಕೋಟಿ ಪ್ರಸ್ತಾಪ; ಅರಣ್ಯ ಸಚಿವ ಈಶ್ವರ ಖಂಡ್ರೆ

ಹುಬ್ಬಳ್ಳಿ ; ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಬೆಳಗಾವಿ, ಧಾರವಾಡ ಮತ್ತು ಕೆನರಾ ವೃತ್ತದ ಅರಣ್ಯ ವಿಭಾಗದ ಪ್ರಗತಿ ಪರಿಶೀಲನಾ ಸಭೆಯನ್ನ ಅರಣ್ಯ ಸಚಿವ ಈಶ್ವರ ಖಂಡ್ರೆ ನಡೆಸಿದರು.

ಈ ಸಂದರ್ಭದಲ್ಲಿ ಅವರು ‘ಹಸಿರು ಹೊದಿಕೆ ಕಡಿಮೆ ಇರುವ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಪ್ರದೇಶಗಳಲ್ಲಿ ಹೆಚ್ಚಾಗಿ ಸಸಿಗಳನ್ನು ನೆಡಬೇಕಾಗಿದೆ. ವಿಜಯಪುರ, ಬಾಗಲಕೋಟೆ, ಗೋಕಾಕ, ಬೀದರ್ ಸೇರಿದಂತೆ ಶೇ 10ರಷ್ಟು ಕಡಿಮೆ ಹಸಿರು ಹೊದಿಕೆ ಪ್ರದೇಶವನ್ನು ಗುರುತಿಸಬೇಕು. ರಸ್ತೆ ಬದಿ, ಸರ್ಕಾರಿ ಜಮೀನು, ಉದ್ಯಾನಗಳಲ್ಲಿ ಸಸಿಗಳನ್ನು ನೆಟ್ಟು, ಹಸಿರು ಹೊದಿಕೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

‘ಅರಣ್ಯ ಸಂರಕ್ಷಣೆ ಅಗತ್ಯವಾಗಿದ್ದು, ಇಲ್ಲಿಯ ಅರಣ್ಯ ವೃತ್ತಗಳಲ್ಲಿ ಲಕ್ಷಾಂತರ ಸಸಿಗಳನ್ನು ನೆಡಲಾಗಿದೆ. ಅವುಗಳ ಸಂರಕ್ಷಣೆ, ಪಾಲನೆ ಪೋಷಣೆ, ತಪಾಸಣೆ ನಡೆಸಿ ನಿಖರ ವರದಿ ಸಲ್ಲಿಸಬೇಕು. ಅರಣ್ಯ ಭೂ ಕಾಯ್ದೆಯಡಿ ಅರ್ಜಿ ಸಲ್ಲಿಸಿ, ಪ್ರಕರಣ ಇತ್ಯರ್ಥವಾಗದಿದ್ದರೆ ಅವುಗಳನ್ನು ತೆರವುಗೊಳಿಸಬಾರದು’ ಎಂದು ಹೇಳಿದರು.

‘ಅರಣ್ಯ ಒತ್ತುವರಿ ಪ್ರಕರಣಗಳು ಹೆಚ್ಚಾಗಿದ್ದು, ಸರ್ಕಾರದ ಸೂಚನೆಯಂತೆ ಮೂರು ಎಕರೆಗಿಂತ ಕಡಿಮೆ ಅರಣ್ಯ ಪ್ರದೇಶ ಒತ್ತುವರಿ ಮಾಡಿದವರಿಗೆ ಪುನರ್ ವಸತಿ ಕಲ್ಪಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ. ಆದರೆ, ಶ್ರೀಮಂತ ವರ್ಗದವರಿಂದ ಒತ್ತುವರಿ ನಡೆದರೆ  ಕ್ರಮ ಕೈಗೊಳ್ಳಬೇಕು’ ಎಂದರು.

‘ಮಂಗಳಗಟ್ಟಿ ತರಬೇತಿ ಕೇಂದ್ರದಲ್ಲಿ ಅರಣ್ಯ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ಈ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿ ಆಧುನಿಕ ರೀತಿಯಲ್ಲಿ ತರಬೇತಿ ನೀಡುವ ಕೇಂದ್ರವನ್ನಾಗಿ ಮಾಡಲು ಯೋಜನೆ ರೂಪಿಸಬೇಕು. ಅರಣ್ಯದಂಚಿನ ನಿವಾಸಿಗಳಿಗೆ ತೊಂದರೆಯಾಗದಂತೆ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕು’ ಎಂದು ಕಿವಿಮಾತು ಹೇಳಿದರು.

‘ತೇಗ ಮರ ಕಡಿಯುವ ಪ್ರಕ್ರಿಯೆ ಕ್ಲಿಷ್ಟಕರವಾಗಿದ್ದು, ಸರಳೀಕರಣ ಮಾಡುವ ನಿಟ್ಟಿನಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಜೊತೆ 15 ದಿನಗಳಲ್ಲಿ ಸಭೆ ಕರೆಯಬೇಕು. ಅರಣ್ಯ ಕಾಯ್ದೆಗಳು ಬಹಳಷ್ಟು ಕಠಿಣವಾಗಿದ್ದು, ಅವುಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಬಾಕಿ ಇರುವ ಹಲವಾರು ಪ್ರಕರಣಗಳನ್ನು ಇತ್ಯರ್ಥ ಪಡಿಸಿ ಮೀಸಲು ಅರಣ್ಯ ಪ್ರದೇಶ ಎಂದು ಘೋಷಿಸಲು ತುರ್ತು ಕ್ರಮ ಕೈಗೊಳ್ಳಬೇಕು‘ ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

Leave a Reply

Your email address will not be published. Required fields are marked *