ಬೆಂಗಳೂರು: ಸಿದ್ದರಾಮಯ್ಯನವರು ಸಂವಿಧಾನ, ಪ್ರಜಾಪ್ರಭುತ್ವ ಮತ್ತು ನ್ಯಾಯಾಂಗಕ್ಕೆ ಗೌರವ ಕೊಟ್ಟು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಒತ್ತಾಯಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದ ಬಳಿ ಇಂದು ಏರ್ಪಡಿಸಿದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಪಾರ್ವತಿ ಮೇಡಂ ಅವರು ನಿಮ್ಮ ಪತ್ನಿ. ನಿಮ್ಮ ಕುಟುಂಬದವರೇ ಆಗಿದ್ದಾರೆ ಎಂದು ಮುಖ್ಯಮಂತ್ರಿಗಳಿಗೆ ನೆನಪಿಸಿದರು. ಮಾನ್ಯ ರಾಜ್ಯಪಾಲರ ಕ್ರಮವನ್ನು ಕೋರ್ಟ್ ಎತ್ತಿಹಿಡಿದಿದೆ ಎಂದು ಗಮನ ಸೆಳೆದರು.
ಸಿದ್ದರಾಮಯ್ಯನವರು ರಾಜೀನಾಮೆ ಕೊಡದಿದ್ದರೆ ಅದು ಪ್ರಜಾಪ್ರಭುತ್ವ, ನ್ಯಾಯಾಂಗ ಮತ್ತು ಸಂವಿಧಾನಕ್ಕೆ ಮಾಡುವ ಅವಮಾನ ಎಂದು ಅವರು ತಿಳಿಸಿದರು. ಈ ತೀರ್ಪು ನೀಡಿದ ಹೈಕೋರ್ಟ್ ನ್ಯಾಯಮೂರ್ತಿಗಳನ್ನು ಅವರು ಅಭಿನಂದಿಸಿದರು.
ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಮಾತನಾಡಿ, ಕುರ್ಚಿ ಉಳಿಸಿಕೊಳ್ಳಲು ಭಂಡತನದಿಂದ ಪ್ರಯತ್ನ ಮಾಡಿದವರ ಇತಿಹಾಸ ಏನಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಕರ್ನಾಟಕ ರಾಜ್ಯದ ಗೌರವ ಉಳಿಸುವ ದೃಷ್ಟಿಯಿಂದ ನೈತಿಕ ಹೊಣೆ ಹೊತ್ತು ಕೂಡಲೇ ರಾಜೀನಾಮೆ ಕೊಡಿ ಎಂದು ಸಿದ್ದರಾಮಯ್ಯನವರನ್ನು ಒತ್ತಾಯಿಸಿದರು.
ಸಿದ್ದರಾಮಯ್ಯನವರು ಹಿಂದೆ ಯಡಿಯೂರಪ್ಪ ಅವರ ರಾಜೀನಾಮೆಗೆ ಆಗ್ರಹಿಸಿದ್ದನ್ನು ನೆನಪಿಸಿದರಲ್ಲದೆ, ನಿಮ್ಮ ಹಿಂದಿನ ಮಾತಿನಂತೆ ರಾಜೀನಾಮೆ ಕೊಡಿ ಎಂದು ಆಗ್ರಹಿಸಿದರು. ನಾವೇನೂ ನಿಮ್ಮ ಕುರ್ಚಿ ಮೇಲೆ ಟವೆಲ್ ಹಾಕಿಲ್ಲ. ಸಿಎಂ ಸ್ಥಾನಕ್ಕಾಗಿ ನಾವೇನೂ ಬ್ರೇಕ್ಫಾಸ್ಟ್, ಡಿನ್ನರ್ ಮೀಟಿಂಗ್ ಮಾಡಿಲ್ಲ. ತನಿಖೆಯಲ್ಲಿ ನೀವು ನಿರ್ದೋಷಿ ಎಂದು ಸಾಬೀತಾದರೆ ಮತ್ತೆ ಮುಖ್ಯಮಂತ್ರಿ ಆಗಬಹುದಲ್ಲವೇ ಎಂದು ಪ್ರಶ್ನಿಸಿದರು.
ನೀವು ರಾಜೀನಾಮೆ ಕೊಡದಿದ್ದರೆ ಪ್ರಾಮಾಣಿಕರಲ್ಲ ಎಂದು ಗೊತ್ತಾಗಲಿದೆ. ಕಾಂಗ್ರೆಸ್ ಪಕ್ಷ ನಿಮ್ಮ ರಾಜೀನಾಮೆ ಕೇಳದಿದ್ದರೆ ಅದು ಭ್ರಷ್ಟಾಚಾರದ ರಕ್ಷಣೆ ಮಾಡುವುದು ಸ್ಪಷ್ಟ ಎಂದು ಗೊತ್ತಾಗಲಿದೆ ಎಂಬುದಾಗಿ ಎಚ್ಚರಿಸಿದರು. ನೀವು ಭ್ರಷ್ಟಾಚಾರದ ಸಮರ್ಥನೆಗೆ ಇದ್ದೀರಾ ಅಥವಾ ವಿರುದ್ಧ ಇದ್ದೀರಾ ಎಂಬ ಬಗ್ಗೆ ಆಗ ರಾಹುಲ್ ಗಾಂಧಿಯವರು ಉತ್ತರ ಕೊಡಬೇಕಾಗುತ್ತದೆ ಎಂದು ತಿಳಿಸಿದರು.
ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಸಿ.ಕೆ. ರಾಮಮೂರ್ತಿ, ಎಸ್ಟಿ ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು, ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ರಾಜ್ಯ ಪದಾಧಿಕಾರಿಗಳು ಮತ್ತು ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.