ದಾಬಸ್ಪೇಟೆ : ವಿದ್ಯುತ್ ಪ್ರಸರಣ ಟವರ್ ಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಟವರ್ ನ ಒಂದು ಭಾಗ ಸಂಪೂರ್ಣವಾಗಿ ಜಖಂಗೊಂಡಿರುವ ಘಟನೆ ತ್ಯಾಮಗೊಂಡ್ಲು ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಬೆಸ್ಕಾಂ ಕಚೇರಿ ಮುಂಭಾಗದಲ್ಲಿರುವ ವಿದ್ಯುತ್ ಪ್ರಸರಣ ಟವರ್ ಗೆ ಕೇರಳದಿಂದ ತ್ಯಾಮಗೊಂಡ್ಲು ಮತ್ತು ದಾಬಸ್ಪೇಟೆಗೆ ಪ್ರೈವುಡ್ ತುಂಬಿಕೊಂಡು ಬಂದಿದ್ದ ಲಾರಿ ಡೈವರ್ ಪಟ್ಟಣದ ಬೆಸ್ಕಾಂ ಮುಂಭಾಗದಲ್ಲಿನ ಗೋಡೌನ್ ಒಂದರಲ್ಲಿ ಪ್ರೈವುಡ್ ಇಳಿಸಿ ಉಳಿದಿದ್ದ ಪ್ರೈವುಡ್ಗಳನ್ನು ದಾಬಸ್ಪೇಟೆಗೆ ತೆಗೆದು ಕೊಂಡು ಹೋಗಬೇಕಿತ್ತು.
ಈ ಸಂದರ್ಭದಲ್ಲಿ ಲಾರಿಯನ್ನು ಸ್ಟಾರ್ಟ್ ಮಾಡಿ, ಲಾರಿಯಿಂದ ಇಳಿದು ವಿಳಾಸ ಕೇಳುತ್ತಿದ್ದ ಸಮಯದಲ್ಲಿ ಏಕಾಏಕಿ ಲಾರಿ ಮುಂದೆ ಚಲಿಸಿ, ಮುಂಭಾಗದಲ್ಲಿದ್ದ ವಿದ್ಯುತ್ ಪ್ರಸರಣ ಟವರ್ ಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ.
ಘಟನೆಗೆ ಸಂಬಂದಿಸಿದಂತೆ ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೆಪಿಟಿಸಿಎಲ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳದಲ್ಲಿಯೇ ಬೀಡುಬಿಟ್ಟಿದ್ದಾರೆ.
ವಿದ್ಯುತ್ ಕಡಿತ ಆತಂಕ: ವಿದ್ಯುತ್ ಪ್ರಸರಣದ ಟವರ್ ಮುರಿದು ಹೋಗಿರುವ ಪರಿಣಾಮ, ಎರಡು ದಿನಗಳ ಕಾಲ ವಿದ್ಯುತ್ ಕಡಿತವಾಗುವ ಸಂಭವವಿದೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಲಾರಿಯನ್ನು ಹಿಂಭಾಗಕ್ಕೆ ತೆಗೆದರೆ, ಟವರ್ನ ಕಂಬಿಗಳು ಮುರಿದು ನೆಲಕಚ್ಚುವ ಭೀತಿ ಎದುರಾಗಿದ್ದು, ತಾತ್ಕಾಲಿಕವಾಗಿ ಮತ್ತೊಂದು ಟವರ್ ನಿರ್ಮಿಸಿ ದುರಸ್ತಿ ಕಾರ್ಯ ಮಾಡಬೇಕಾದ ಸ್ಥಿತಿ ಎದುರಾಗಿದೆ.
ರೈಲ್ವೆಗೆ ಪವರ್ ಕಟ್ ಸಾಧ್ಯತೆ: ಟವರ್ ನಿರ್ಮಾಣದವರೆಗೂ ತಾತ್ಕಾಲಿಕವಾಗಿ ಟವರ್ ನಿರ್ಮಿಸದಿದ್ದರೆ, ದೊಡ್ಡಬೆಲೆ ರೈಲ್ವೆ ನಿಲ್ದಾಣದ ಸಮೀಪ ನಿರ್ಮಿಸಿರುವ ರೈಲ್ವೆ ವಿದ್ಯುತ್ ಘಟಕಕ್ಕೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿದ್ದು, ಇದ್ದರಿಂದ ರೈಲುಗಳ ಸಂಚಾರಕ್ಕೂ ಅಡ್ಡಿಯಾಗುವ ಸಾಧ್ಯತೆಗಳಿವೆ.