ಮೋದಿಯವರೇ ಗಾಜಿನ ಮನೆಯಲ್ಲಿ ಕೂತು ಕಲ್ಲು ಹೊಡೆಯಲು ಹೋಗಬೇಡಿ: ಸಿದ್ದರಾಮಯ್ಯ ತಿರುಗೇಟು

ಮೋದಿಯವರೇ ಗಾಜಿನ ಮನೆಯಲ್ಲಿ ಕೂತು ಕಲ್ಲು ಹೊಡೆಯಲು ಹೋಗಬೇಡಿ: ಸಿದ್ದರಾಮಯ್ಯ ತಿರುಗೇಟು

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮುಡಾ ಹಗರಣ ಸಂಚಲನ ಮೂಡಿಸಿದೆ. ಸಿಎಂ ವಿರುದ್ಧ ಲೋಕಾಯುಕ್ತ ತನಿಖೆಗೆ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದಾರೆ.

ಬುಧವಾರವಷ್ಟೇ ಹರಿಯಾಣ ಚುನಾವಣಾ ಪ್ರಚಾರದ ವೇಳೆ ಸಾರ್ವಜನಿಕ ಸಮಾವೇಶದಲ್ಲಿ ಪ್ರಧಾನಿ ಮೋದಿ ಮುಡಾ ಪ್ರಕರಣವನ್ನ ಪ್ರಸ್ತಾಪಿಸಿದರು. ಕಾಂಗ್ರೆಸ್ನಲ್ಲಿ ಒಳಜಗಳ ಶುರುವಾಗಿದೆ ಎಂದು ಕಿಡಿಕಾರಿದ್ದರು. ಇದಕ್ಕೆ ಸಿಎಂ ಸಿದ್ದರಾಮಯ್ಯ ಎಕ್ಸ್ ಖಾತೆಯ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ

ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಕಾಂಗ್ರೆಸ್ನಲ್ಲಿ ಆಂತರಿಕ ಕಲಹ ನಡೆಯುತ್ತಿದೆ ಎಂದು ಗಾಳಿಯಲ್ಲಿ ಗುಂಡು ಹೊಡೆದಿದ್ದಾರೆ. ಬಹುಶಃ ಪ್ರಧಾನಿಯವರು ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳಲ್ಲಿ ಉಲ್ಲೇಖವಾಗುತ್ತಿರುವ ಪಕ್ಷಗಳ ಹೆಸರಲ್ಲಿ ಗೊಂದಲ ಮಾಡಿಕೊಂಡು, ಬಿಜೆಪಿ ಬದಲಿಗೆ ಕಾಂಗ್ರೆಸ್ ಎಂದು ತಿಳಿದುಕೊಂಡು ಈ ಅಭಿಪ್ರಾಯ ವ್ಯಕ್ತಪಡಿಸಿರಬಹುದು. ಈ ಗೊಂದಲ ನಿವಾರಣೆಗಾಗಿ ಅವರು ತಕ್ಷಣ ಸ್ಪಷ್ಟೀಕರಣ ನೀಡಬೇಕೆಂದು ಮನವಿ ಮಾಡುತ್ತೇನೆ

ಬಿಜೆಪಿಯ ರಕ್ತದಲ್ಲಿ ಹೇಗೆ ಕೋಮುವಾದ ಸೇರಿಕೊಂಡಿದೆಯೋ, ಅದೇ ರೀತಿ ಆಂತರಿಕ ಕಲಹವೂ ಸೇರಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಬಿಜೆಪಿ ನಾಯಕರು ಪರಸ್ಪರ ಕೆಸರೆರಚಾಟ ಮಾಡಿಕೊಳ್ಳದ ದಿನವೇ ಸಿಗಲಾರದು. ಪ್ರತಿನಿತ್ಯ ಬಿಜೆಪಿ ನಾಯಕರು ಆರೋಪ – ಪ್ರತ್ಯಾರೋಪ, ಪರಸ್ಪರ ದೂಷಣೆ – ನಿಂದನೆಯ ಧಾರವಾಹಿ ಮೂಲಕ ಜನರನ್ನು ರಂಜಿಸುತ್ತಿದ್ದಾರೆ.

ಕರ್ನಾಟಕದ ಬಿಜೆಪಿಯಲ್ಲಿನ ಅಂತಃಕಲಹ ಹೊಸ ವಿದ್ಯಮಾನವೇನಲ್ಲ. ಇದಕ್ಕೊಂದು ಇತಿಹಾಸವಿದೆ. ಕರ್ನಾಟಕದ ಜನತೆ ಎಂದೂ ಬಿಜೆಪಿಗೆ ಪೂರ್ಣಬಹುಮತ ನೀಡಿ ಅಧಿಕಾರಕ್ಕೆ ತಂದಿಲ್ಲ. ಅಕ್ರಮ ಹಣ ಬಲದಿಂದ ಆಪರೇಷನ್ ಕಮಲ ನಡೆಸಿ ಅಧಿಕಾರಕ್ಕೆ ಬಂದರೂ ಯಾರೇ ಒಬ್ಬ ಮುಖ್ಯಮಂತ್ರಿ ಪೂರ್ಣಾವಧಿ ಆಳಿಲ್ಲ. 2008 ರಿಂದ 2013ರ ವರೆಗೆ ಮೂವರು ಮುಖ್ಯಮಂತ್ರಿಗಳು, 2019 ರಿಂದ 2023ರ ಅವಧಿಯಲ್ಲಿ ಇಬ್ಬರು ಮುಖ್ಯಮಂತ್ರಿಗಳು. ಕರ್ನಾಟಕದ ಬಿಜೆಪಿಯೊಳಗಿನ ಅಂತಃಕಲಹ ನಮ್ಮಲ್ಲಿ ಮನೆಮನೆಮಾತಾಗಿದೆ. ಇದರಲ್ಲಿ ನಮ್ಮ ಪಕ್ಷದ ಯಾವುದೇ ಪಾತ್ರ ಇಲ್ಲ. ಇವೆಲ್ಲ ಸ್ವಯಂಕೃತ ಅಪರಾಧದ ಹಳವಂಡಗಳು.

ಪ್ರಧಾನಿ ನರೇಂದ್ರ ಮೋದಿ ಅವರೇ, ಗಾಜಿನ ಮನೆಯಲ್ಲಿ ಕೂತು ಕಲ್ಲು ಹೊಡೆಯಲು ಹೋಗಬೇಡಿ. ನಮ್ಮ ಪಕ್ಷದ ಅಂತಃಕಲಹದ ಬಗ್ಗೆ ಚಿಂತೆ ಮಾಡಬೇಡಿ. ನಮ್ಮ ಪಕ್ಷ ಅಧಿಕಾರಕ್ಕೆ ಬಂದಾಗೆಲ್ಲ ಪೂರ್ಣಾವಧಿಯನ್ನು ಮುಗಿಸಿದ್ದೇವೆ. ದೇವರಾಜ ಅರಸು ನಂತರ ಪೂರ್ಣ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ನಾನು ಇದೀಗ 2ನೇ ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ನಮ್ಮೊಳಗೆ ಜಗಳ ಹುಟ್ಟುಹಾಕುವ ನಿಮ್ಮೆಲ್ಲರ ನಿರಂತರ ಪ್ರಯತ್ನದ ಹೊರತಾಗಿಯೂ ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎಂದು ತಿರುಗೇಟು ನೀಡಿದ್ದಾರೆ.

Leave a Reply

Your email address will not be published. Required fields are marked *