ನೀವು ಪ್ರಾಮಾಣಿಕರಿದ್ದರೆ ನಿಮಗೆ ‘CBI ತನಿಖೆ’ ಮಾಡಿದರೆ ಭಯ ಏಕೆ?: ಸಿಟಿ ರವಿ ಪ್ರಶ್ನೆ

ನೀವು ಪ್ರಾಮಾಣಿಕರಿದ್ದರೆ ನಿಮಗೆ 'CBI ತನಿಖೆ' ಮಾಡಿದರೆ ಭಯ ಏಕೆ?: ಸಿಟಿ ರವಿ ಪ್ರಶ್ನೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಾರ್ವಜನಿಕ ಜೀವನ ಪರಿಶುದ್ಧವಲ್ಲ; ತನ್ನ ಭ್ರಷ್ಟಾಚಾರ ಗೊತ್ತಾಗಬಾರದೆಂದು, ಹೊರಗೆ ಬರಬಾರದು ಎಂಬ ಕಾರಣಕ್ಕಾಗಿಯೇ ಪೂರ್ವತಯಾರಿ ಮಾಡಿಕೊಂಡು ಭ್ರಷ್ಟಾಚಾರ ಮಾಡುವ ಅವರು ಒಬ್ಬ ಕ್ರಿಮಿನಲ್ ಕರಪ್ಟ್ ಪಾಲಿಟಿಶಿಯನ್ ಎಂದು ರಾಜ್ಯ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಆರೋಪಿಸಿದರು.

ವಿಧಾನಸೌಧದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ವಿರುದ್ಧ 65ಕ್ಕೂ ಪ್ರಕರಣಗಳ ದೂರು ಸಲ್ಲಿಕೆಯಾಗಿವೆ. ಆ ದೂರುಗಳ ಸತ್ಯಾಸತ್ಯತೆ ಹೊರಕ್ಕೆ ಬರಬಾರದು ಎಂದು ಲೋಕಾಯುಕ್ತವನ್ನು ದುರ್ಬಲಗೊಳಿಸಿ, ಎಸಿಬಿ ರಚನೆ ಮಾಡಿಕೊಂಡು 15ಕ್ಕೂ ಹೆಚ್ಚು ಪ್ರಕರಣಗಳಿಗೆ ತನ್ನ ಅಧೀನದ ಎಸಿಬಿಯಲ್ಲಿ ಕ್ಲೀನ್ ಚಿಟ್ ಪಡೆದಿದ್ದಾರೆ ಎಂದು ದೂರಿದರು. 50ಕ್ಕೂ ಹೆಚ್ಚು ಪ್ರಕರಣಗಳ ತನಿಖೆಯೇ ಆಗಿಲ್ಲ ಎಂದು ತಿಳಿಸಿದರು.

ತನಿಖೆಯೇ ಆಗದಂತೆ ಮುನ್ನೆಚ್ಚರಿಕೆ ವಹಿಸಿ ನಾನು ಪ್ರಾಮಾಣಿಕ ಎಂದು ಅವರಿಗೆ ಅವರೇ ಹೇಳಿಕೊಳ್ಳುತ್ತಿದ್ದಾರೆ. ಈಗ ಸಿಬಿಐಗೆ ಇದ್ದ ಮುಕ್ತ ತನಿಖೆಯ ಅಧಿಕಾರವನ್ನು ನಿನ್ನೆಯ ಸಂಪುಟ ಸಭೆ ಮೊಟಕು ಮಾಡಿದೆ. ನೀವು ಪ್ರಾಮಾಣಿಕರಿದ್ದರೆ ನಿಮಗೆ ಸಿಬಿಐ ತನಿಖೆ ಮಾಡಿದರೆ ಭಯ ಏಕೆ? ನೀವು ಮತ್ತು ನಿಮ್ಮ ಸರಕಾರ ಪರಮಭ್ರಷ್ಟ ಸರಕಾರ ಎಂಬುದನ್ನು ನಿಮ್ಮ ನಿಲುವೇ ತೋರಿಸುತ್ತದೆ ಎಂದು ಆರೋಪಿಸಿದರು.

ಭ್ರಷ್ಟಾಚಾರದ ಮುಖವಾಡ ಹೊರಬೀಳುವ ಭಯದಿಂದ ಸಿಬಿಐ ತನಿಖೆ ಹಿಂಪಡೆಯುವ ನಿರ್ಣಯ ಮಾಡಿದ್ದಾರೆ. ಇದು ಸಂವಿಧಾನವಿರೋಧಿ ಮತ್ತು ಭ್ರಷ್ಟರು ಮಾತ್ರ ಮಾಡುವ ಕೆಲಸ ಎಂದು ಆಕ್ಷೇಪಿಸಿದರು. ಮಾನ್ಯ ರಾಜ್ಯಪಾಲರ ಪತ್ರಕ್ಕೆ ಕೇವಲ ಸಂಪುಟದ ನಿರ್ಣಯದ ಮೂಲಕ ಮಾತ್ರ ಉತ್ತರಿಸಬೇಕೆಂಬ ತೀರ್ಮಾನ ಹಾಸ್ಯಾಸ್ಪದ ಎಂದು ಅವರು ವಿಶ್ಲೇಷಿಸಿದರು.

ಮೊಹಬ್ಬತ್ ಕೆ ದುಕಾನ್ ಎಂದು ಹೇಳುತ್ತಲೇ ಪಾದಯಾತ್ರೆ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಈಗ ಮೊಹಬ್ಬತ್ ಕೆ ದುಕಾನ್ ಇಲ್ಲ; ಭ್ರಷ್ಟಾಚಾರದ ಶಾಪಿಂಗ್ ಮಾಲ್ ತೆರೆದಿದ್ದಾರೆ ಎಂದು ಟೀಕಿಸಿದರು. ಭ್ರಷ್ಟಾಚಾರದ ಆರೋಪ ಬಂದಾಗ ತನಿಖೆಗೆ ಧೈರ್ಯ ತೋರಿಸುತ್ತಿಲ್ಲ ಎಂದು ಆಕ್ಷೇಪಿಸಿದರು.

Leave a Reply

Your email address will not be published. Required fields are marked *