ಸಂಪಾದಕೀಯ || ಸರ್ಕಾರಿ ಸಿಬ್ಬಂದಿಗೆ ವರ್ಗಾವಣೆ ಶಿಕ್ಷೆ ಅಲ್ಲ , ಕರ್ತವ್ಯದ ಭಾಗ

ಸಂಪಾದಕೀಯ || ಸರ್ಕಾರಿ ಸಿಬ್ಬಂದಿಗೆ ವರ್ಗಾವಣೆ ಶಿಕ್ಷೆ ಅಲ್ಲ , ಕರ್ತವ್ಯದ ಭಾಗ

ಸರ್ಕಾರದ ಯಾವುದೇ ಇಲಾಖೆಯಲ್ಲಿ ಕೆಲಸಕ್ಕೆ ಸೇರುವವರಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ರೂಪಿಸಿದ ನಿಯಮಗಳು ಅನ್ವಯವಾಗುತ್ತಿದ್ದು ಅದಕ್ಕೆ ವ್ಯತಿರಿಕ್ತವಾಗಿ ವ್ಯವಹರಿಸುವುದಕ್ಕೆ ಅವಕಾಶ ಇರಬಾರದು. ಆದರೆ ನಿಯಮಗಳಿಗಿಂತ ಅಪವಾದಗಳೇ ನಿಯಮಗಳಾಗಿ ಪಾಲನೆಯಾಗುತ್ತಿರುವುದು ದಶಕಗಳಿಂದಲೂ ನಡೆದು ಬಂದಿರುವ ವಿದ್ಯಮಾನವಾಗಿದೆ. ಬ್ರಿಟಿಷರ ಆಡಳಿತ ವ್ಯವಸ್ಥೆಯನ್ನು ಅನುಸರಿಸುತ್ತಾ ಬಂದಿದ್ದರೂ ಅವಶ್ಯಕತೆಗೆ ತಕ್ಕಂತೆ ವ್ಯವಸ್ಥೆಯಲ್ಲಿ ಬದಲಾವಣೆ, ಸುಧಾರಣೆ, ಹೊಂದಾಣಿಕೆಯ ಹೆಸರಿನಲ್ಲಿ ಅನುಕೂಲಕರ ಮಾದರಿಗಳು ಚಲಾವಣೆಗೆ ಬರುತ್ತಿರುವುದನ್ನು ಗಮನಿಸಬಹುದಾಗಿದೆ.

ರಾಜ್ಯದ ಮೂವತ್ತಕ್ಕೂ ಹೆಚ್ಚಿನ ಸಚಿವ ಖಾತೆಗಳ ವ್ಯಾಪ್ತಿಯಲ್ಲಿ ಬರುವ ನೂರಾರು ಇಲಾಖೆಗಳ ಕಾರ್ಯವನ್ನು ನಿರ್ವಹಿಸುವುದಕ್ಕೆ ನಿಯೋಜಿತರಾಗಿರುವವರು ಅಧಿಕಾರಿಗಳು ಮತ್ತು ಸಹಾಯಕ ಸಿಬ್ಬಂದಿಗಳು. ಇವರೆಲ್ಲರಿಗೆ ನಿರ್ದಿಷ್ಟ ಕರ್ತವ್ಯಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ನಿಗದಿಪಡಿಸಿದ್ದು ಅದರಂತೆ ನಡೆಯುತ್ತಿರುವುದರಿಂದ ಸರ್ಕಾರದ ಅಸ್ತಿತ್ವ ಅನುಭವಕ್ಕೆ ಬರುತ್ತಿದೆ. ಅಧಿಕಾರಿಗಳು ಮತ್ತು ಸಹಾಯಕ ಸಿಬ್ಬಂದಿಗಳ ನೇಮಕಕ್ಕೆ ಪ್ರತ್ಯೇಕ ವಿಧಾನಗಳಿದ್ದು ಬಹುತೇಕ ನೇಮಕಗಳು ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ನಡೆಯುತ್ತವೆ. ಇಲಾಖೆಗಳ ಸ್ವರೂಪಗಳಿಗೆ ತಕ್ಕಂತೆ ಸಹಾಯಕ ಸಿಬ್ಬಂದಿಯ ನಿಯೋಜನೆಯೂ ನಡೆಯುತ್ತದೆ. ಪ್ರತಿ ಇಲಾಖೆಯ ಸ್ವರೂಪಕ್ಕೆ ಅನುಗುಣವಾಗಿ ಆರಂಭಿಕ ತರಬೇತಿಯನ್ನು ಪಡೆಯುವ ಅಧಿಕಾರಿಗಳು ಮತ್ತು ಸಹಾಯಕ ಸಿಬ್ಬಂದಿ ತಮ್ಮ ಅಧಿಕಾರ ಸ್ಥಾನಕ್ಕೆ ಅನುಗುಣವಾಗಿ ರ್ಕಾಯನಿರ್ವಹಣೆಗೆ ಸನ್ನದ್ಧರಾಗಬೇಕಾಗುತ್ತದೆ.

ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಮಾರ್ಗಸೂಚಿ ಮತ್ತು ಸರ್ಕಾರದ ಅವಶ್ಯಕತೆಗೆ ತಕ್ಕಂತೆ ಅಧಿಕಾರಿಗಳು ಮತ್ತು ಸಹಾಯಕ ಸಿಬ್ಬಂದಿಯ ಸೇವಾ ನಿಯಮಗಳು ಮತ್ತು ಒಂದು ಸ್ಥಳದಲ್ಲಿ ಎಷ್ಟು ವರ್ಷ ಇರಬೇಕು ಎಂಬ ಬಗ್ಗೆ ಸ್ಥೂಲವಾಗಿ ನಿಯಮಗಳನ್ನು ರೂಪಿಸಲಾಗಿದ್ದು ಇವುಗಳನ್ನು ನಿಯಂತ್ರಿಸುವ ಅವಕಾಶ ಇಲಾಖೆಯ ವರಿಷ್ಠಾಧಿಕಾರಿಗೆ ಇರಬೇಕಾಗುತ್ತದೆ. ಆದರೆ ಜನಪ್ರತಿನಿಧಿಗಳಿಂದ ಚಲಾವಣೆಯಾಗುತ್ತಿರುವ ರಾಜಕೀಯ ಅಧಿಕಾರ ಆಡಳಿತ ವ್ಯವಸ್ಥೆಯಲ್ಲಿ ನಿರ್ಣಾಯಕವಾಗಿರುವ ಪರಿಸ್ಥಿತಿ ರೂಪುಗೊಂಡಿರುವುದರಿಂದ ಅಧಿಕಾರಿಗಳು ಮತ್ತು ಸಹಾಯಕ ಸಿಬ್ಬಂದಿಯ ನಿಯೋಜನೆ, ನಿರ್ದಿಷ್ಟ ಸ್ಥಳದಲ್ಲಿ ಎಷ್ಟು ವರ್ಷ ಇರಬೇಕು ಎಂಬುದು ರಾಜಕೀಯ ಹಿತಾಸಕ್ತಿಗೆ ಅನುಗುಣವಾಗಿ ನಿರ್ಧಾರವಾಗುವ ಪರಿಸ್ಥಿತಿ ಒಪ್ಪಿತ ನಿಯಮವಾಗಿ ಜಾರಿಯಲ್ಲಿದೆ.

ಈಚೆಗೆ ತುಮಕೂರು ಜಿಲ್ಲೆಯ ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳ ಪ್ರಗತಿಯನ್ನು ಪರಿಶೀಲಿಸುವ ಸಂದರ್ಭದಲ್ಲಿ ಜನಪ್ರತಿನಿಧಿಗಳು ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು, ಇಲ್ಲವಾದಲ್ಲಿ ಅಂತಹವರನ್ನು ವರ್ಗಾವಣೆ ಮಾಡಿಸುವುದಾಗಿ ಎಚ್ಚರಿಕೆ ನೀಡಿದರೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ಸರ್ಕಾರಿ ಸೇವೆಗೆ ಬಂದವರಿಗೆ ಕರ್ತವ್ಯ ನಿರ್ವಹಣೆಯಲ್ಲಿ ವಹಿಸಬೇಕಾದ ಎಚ್ಚರಿಕೆಯ ಅರಿವು ಮೂಡಿಸುವ ಸೂಚನೆಯಾದರೂ ಅದು ಸಂಬಂಧಪಟ್ಟ ಅಧಿಕಾರಿ ಇಲ್ಲವೇ ಸಹಾಯಕ ಸಿಬ್ಬಂದಿಗೆ ವರ್ಗಾವಣೆ ಶಿಕ್ಷೆ ಎಂಬಂತೆ ಆತಂಕ ಸೃಷ್ಟಿಸುವ ಸಂಗತಿಯಂತೆ ಕಾಣುತ್ತದೆ.

ಸರ್ಕಾರಿ ಕೆಲಸಕ್ಕೆ ಸೇರುವ ವ್ಯಕ್ತಿ ಸಾರ್ವಜನಿಕರ ಸೇವೆಗೆ ಎಂಬ ಉದ್ದೇಶದಿಂದ ಮತ್ತು ಅದಕ್ಕೆ ಬದ್ಧನಾಗಿರುವುದು ಅವಶ್ಯಕ. ಆಡಳಿತದ ಅಗತ್ಯಕ್ಕೆ ತಕ್ಕಂತೆ ಸ್ಥೂಲವಾಗಿ ಅಧಿಕಾರಿ ದರ್ಜೆಯ ಅಧಿಕಾರಿಗಳಿಗೆ ಒಂದು ಸ್ಥಳದಲ್ಲಿ ಕನಿಷ್ಠ ಎರಡು ವರ್ಷ ಇರುವುದಕ್ಕೆ ನಿಯಮಗಳಲ್ಲಿ ಆಸ್ಪದ ಕಲ್ಪಿಸಲಾಗಿದೆ. ಇತರೆ ಎಲ್ಲಾ ಸಹಾಯಕ ಹುದ್ದೆಗಳಿಗೆ ಕನಿಷ್ಠ ಮೂರರಿಂದ ಗರಿಷ್ಠ ಐದು ವರ್ಷಗಳ ವರೆಗೆ ಅವಕಾಶ ಇದೆ. ಆಡಳಿತದ ಎಲ್ಲ ಹಂತಗಳಲ್ಲಿಯೂ ತಮ್ಮ ಅಭಿಪ್ರಾಯಕ್ಕೆ ಮನ್ನಣೆಯನ್ನು ಬಯಸುವ ರಾಜಕೀಯ ಕ್ಷೇತ್ರ ಸರ್ಕಾರಿ ಅಧಿಕಾರಿ ಸಿಬ್ಬಂದಿಗಳ ನಿಯೋಜನೆಯಲ್ಲಿಯೂ ಮೇಲುಗೈ ಸಾಧಿಸಿರುವುದು ಆಡಳಿತ ವ್ಯವಸ್ಥೆಯಲ್ಲಿ ಅಂಗೀಕಾರವಾಗಿರುವ ಸಂಗತಿಯಾಗಿದೆ.

ಇಲಾಖೆಗಳ ನಿರ್ವಹಣೆಗೆ ಅಖಿಲ ಭಾರತಸೇವೆಯ ಅಧಿಕಾರಿಗಳಿದ್ದರೂ ಕೆಳಹಂತದ ಸಹಾಯಕ ಸಿಬ್ಬಂದಿಯ ನಿಯೋಜನೆಯ ಅಧಿಕಾರವನ್ನು ಜನಪ್ರತಿನಿಧಿಗಳಾದ ಶಾಸಕರು, ಸಚಿವರು ಮತ್ತು ಮುಖ್ಯಮಂತ್ರಿ ಹುದ್ದೆಗಳಿಂದ ನಿರ್ಣಯವಾಗುವ ಪರಿಸ್ಥಿತಿ ಉಳಿದಿದೆ. ಅದೇ ನಿಯಮವಾಗಿ ಬೆಳೆದುಬಂದಿದೆ. ಆದ್ದರಿಂದಲೇ ಉನ್ನತ ಹಂತದ ಅಧಿಕಾರಿ ಹುದ್ದೆಗಳಿಗೆ ವರ್ಷದ ಯಾವುದೇ ತಿಂಗಳಲ್ಲಿ, ಕೆಲವೊಮ್ಮೆ ಯಾವುದೇ ಕ್ಷಣದಲ್ಲಿ ವರ್ಗಾವಣೆ ಜಾರಿಯಾಗುವ ಅನಿಶ್ಚಿತ ಸ್ಥಿತಿಯನ್ನು ಒಪ್ಪಿಕೊಳ್ಳಲಾಗಿದೆ.

ಸರ್ಕಾರದಲ್ಲಿ ಯಾವುದೇ ದರ್ಜೆಯ ಅಧಿಕಾರಕ್ಕೆ ನೇಮಕವಾದ ಸಿಬ್ಬಂದಿಗೆ ತಮ್ಮ ಸೇವೆಯ ಕಾಲಾವಧಿ ನಿಗದಿಯಾದಂತೆ ಪಾಲನೆಯಾಗುತ್ತಿದ್ದರೆ ಅದಕ್ಕೆ ತಕ್ಕಂತೆ ತಮ್ಮ ಕುಟುಂಬ ವ್ಯವಸ್ಥೆಯನ್ನು ರೂಪಿಸಿಕೊಳ್ಳುವುದಕ್ಕೆ ಅವಕಾಶವಿರುತ್ತದೆ. ಅದರ ಬದಲಾಗಿ ರಾಜಕೀಯ ಶಕ್ತಿಗಳ ಮರ್ಜಿಗೆ ಅನುಗುಣವಾಗಿ ಸೇವೆಯ ಅವಧಿ ನಿರ್ಣಯವಾಗುವಂತಿದ್ದರೆ ಸರ್ಕಾರಿ ಸೇವೆಯ ಚೌಕಟ್ಟಿಗೆ ಹೊರತಾದ ಪಕ್ಷನಿಷ್ಠೆ, ವ್ಯಕ್ತಿ ನಿಷ್ಠೆಯನ್ನು ಅನುಸರಿಸುತ್ತಾ ರಾಜಕೀಯ ಪಕ್ಷಗಳ ರ್ಕಾಯಕರ್ತರಂತೆ ಅಲ್ಲದಿದ್ದರೂ ಅನುಯಾಯಿಗಳಂತೆ ಇರುವುದಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ಇದರಿಂದ ಮಾಡಬೇಕಿರುವ ಕೆಲಸದಲ್ಲಿ ಕಾಯ್ದೆಗೆ ಅನುಗುಣವಾಗಿ ನಡೆದುಕೊಳ್ಳುವುದಕ್ಕಿಂತ ಜನಪ್ರತಿನಿಧಿಗಳಿಗೆ ಒಪ್ಪುವಂತೆ ವರ್ತಿಸುವ ಪರಿಸ್ಥಿತಿ ಎದುರಾಗುತ್ತದೆ. ಸಾರ್ವಜನಿಕರ ಅವಶ್ಯಕತೆಗೆ ಸ್ಪಂದಿಸುವ ಕರ್ತವ್ಯ ಹಿನ್ನೆಲೆಗೆ ಸರಿಯುತ್ತದೆ.

ಎಲ್ಲವೂ ನಿಯಮ ಪ್ರಕಾರ ನಡೆಯುವ ಪರಿಸ್ಥಿತಿ ಇದ್ದರೆ ಯಾವ ವರ್ಗಾವಣೆಯೂ ಶಿಕ್ಷೆಯಾಗುವುದಿಲ್ಲ. ಅದು ಕರ್ತವ್ಯದ ಭಾಗ ಎಂಬುದನ್ನು ಮನವರಿಕೆ ಆಗುವಂತೆ ಸರ್ಕಾರ ನೋಡಿಕೊಳ್ಳಬೇಕಿದೆ

Leave a Reply

Your email address will not be published. Required fields are marked *