ಮೈಸೂರು : ನಾನು, ಸಿದ್ದರಾಮಯ್ಯ ಕಾಲೇಜು ದಿನಗಳಲ್ಲಿ ಒಟ್ಟಿಗೆ ಇದ್ದವರು. ಸಿದ್ದರಾಮಯ್ಯ ಈ ದುಃಸ್ಥಿತಿ ನೋಡಿ ನನಗೆ ಬೇಸರವಾಗಿದೆ, ಮನಸ್ಸಿಗೆ ನೋವಾಗಿದೆ. ಪ್ರಜಾಪ್ರಭುತ್ವದಲ್ಲಿ ಸಿಎಂ ಸ್ಥಾನ ದೊಡ್ಡ ಅವಕಾಶ ಇಂತಹ ಸಂದರ್ಭದಲ್ಲಿ ಸಿದ್ದರಾಮಯ್ಯಗೆ ಈ ಸ್ಥಿತಿ ಬರಬಾರದಿತ್ತು ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಬೇಸರ ವ್ಯಕ್ತಪಡಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಪೊನ್ನಣ್ಣ, ಮರಿಗೌಡ ಎಲ್ಲರೂ ಸೇರಿ ನಿಮ್ಮ ದಿಕ್ಕು ತಪ್ಪಿಸಿದ್ದಾರೆ. ಇವರೆಲ್ಲಾ ಸೇರಿ ನಿಮ್ಮ ಕುಟುಂಬವನ್ನು ಕಷ್ಟಕ್ಕೆ ತಳ್ಳಿದ್ದಾರೆ. ನೀವು ಈ ಪ್ರಕರಣದಲ್ಲಿ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಲೋಕಾಯುಕ್ತವನ್ನೇ ತೆಗೆದು ಎಸಿಬಿ ತಂದ ನೀವು ಯಾವ ಸೀಮೆ ಸತ್ಯವಂತರು. ಕೆಂಪಣ್ಣ ವರದಿ ಹೊರಗೆ ತರಬೇಕು. ಒಬ್ಬ ಜನ ನಾಯಕನಿಗಿರುವ ಗುಣ ನಿಮ್ಮಲ್ಲಿ ಇಲ್ಲ ಎಂದು ವಾಗ್ದಾಳಿ ನಡೆಸಿದರು.
14 ಸೈಟ್ಗಳನ್ನು ವಾಪಸ್ ಕೊಟ್ಟು ಮುಡಾದ ಎಲ್ಲ ಪ್ರಕರಣಗಳನ್ನು ತನಿಖೆ ಮಾಡಿಸಿ ಎಂದು ನಾನು ಹಿಂದೆಯೇ ಹೇಳಿದ್ದೆ. ಆದರೆ ಇಂದು ಈ ಪ್ರಕರಣ ಲೋಕಾಯುಕ್ತಕ್ಕೆ ಬಂದಿದೆ. ಲೋಕಾಯುಕ್ತದಲ್ಲಿ ಈ ತನಿಖೆ ಸರಿಯಾಗಿ ನಡೆಯುತ್ತದೆ ಎಂಬ ನಂಬಿಕೆ ಇಲ್ಲ. ಆದ್ದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.