ಶಿಕ್ಷಕರಿಗೆ ಗುಡ್ ನ್ಯೂಸ್ ಕೊಟ್ಟ ಡಿಸಿಎಂ ಡಿ ಕೆ ಶಿವಕುಮಾರ್

ಶಿಕ್ಷಕರಿಗೆ ಗುಡ್ ನ್ಯೂಸ್ ಕೊಟ್ಟ ಡಿಸಿಎಂ ಡಿ ಕೆ ಶಿವಕುಮಾರ್

ರಾಮನಗರ : ಪಟ್ಟಣದ ಸುತ್ತಮುತ್ತದಲ್ಲಿ ಜಾಗ ಖರೀದಿ ಮಾಡಿ ಶಿಕ್ಷಕರಿಗೆ ಪ್ರತ್ಯೇಕ ಲೇಔಟ್ ನಿರ್ಮಾಣಕ್ಕೆ ಅಗತ್ಯ ಕ್ರಮ ಹಾಗೂ ಭವ್ಯವಾದ ಗುರುಭವನವನ್ನು ಮಂಜೂರು ಮಾಡಲಾಗುವುದು ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಭರವಸೆ ನೀಡಿದರು.

ಚನ್ನಪಟ್ಟಣದ ಕೆಂಗಲ್ ನಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಇಲ್ಲಿ ಅನೇಕ ಶಿಕ್ಷಕರಿಗೆ ನಿವೇಶನ ಇಲ್ಲ ಎಂದು ಸಮಸ್ಯೆ ಹೇಳಿಕೊಂಡಿದ್ದೀರಿ.

ನಿಮಗೂ ನಿವೇಶನ ನೀಡುವ ಬಗ್ಗೆ ಚರ್ಚೆ ಮಾಡುತ್ತೇನೆ. ನೀವೇ ಗುರುಭವನ ಸ್ಥಾಪನೆಗೆ ಜಾಗ ಗುರುತಿಸಿ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿಗಳು, ಉನ್ನತ ಹುದ್ದೆಯಲ್ಲಿದ್ದವರ ಕ್ಷೇತ್ರದಲ್ಲಿ ಗುರು ಭವನ ಇಲ್ಲವೇ? ಈಗಾಗಲೇ ತಾಲೂಕಿಗೆ ನೂರಾರು ಕೋಟಿ ವಿಶೇಷ ಅನುದಾನ ತಂದಿದ್ದೇನೆ. ನಾನು ಯಾರನ್ನೂ ದೂಷಿಸುವುದಿಲ್ಲ. ಕುಮಾರಸ್ವಾಮಿ ಆಗಲಿ, ಯೋಗೇಶ್ವರ್ ಅವರನ್ನಾಗಲಿ ದೂಷಣೆ ಮಾಡಿವುದಿಲ್ಲ. ಯಾರೇ ಆಗಲಿ ರಾಜಕೀಯದಲ್ಲಿ ಎಲ್ಲರಿಗೂ ಬದ್ಧತೆ ಇರಬೇಕು.

ಚುನಾವಣೆ ದೃಷ್ಟಿಯಿಂದ ನಾನು ಇಲ್ಲಿಗೆ ಬರುತ್ತಿಲ್ಲ. ನಾಲ್ಕು ಬಾರಿ ಈ ಭಾಗದ ಜನ ನನ್ನನ್ನು ಆಯ್ಕೆ ಮಾಡಿದ್ದೀರಿ. ನಾನು ಈ ಜಿಲ್ಲೆಯವನು. ನಾನು ಬೇರೆ ಎಲ್ಲೂ ಹೋಗಲು ಆಗುವುದಿಲ್ಲ. ನಾನು ಇಲ್ಲೇ ಹುಟ್ಟಿದ್ದೇನೆ, ಇಲ್ಲೇ ಸಾಯುತ್ತೇನೆ. ನಿಮ್ಮನ್ನು ಟೂರಿಂಗ್ ಟಾಕೀಸ್ ತರ ಬಳಸಲು ಆಗುವುದಿಲ್ಲ. ನೀವು ಹೃದಯವಂತಿಕೆಯಿಂದ ನಮಗೆ ಶಕ್ತಿ ನೀಡಬೇಕು. ಸಮಾಜದಲ್ಲಿ ಕೃಷಿಕ, ಸೈನಿಕ, ಕಾರ್ಮಿಕ, ಶಿಕ್ಷಕ ನಾಲ್ಕು ಆಧಾರ ಸ್ತಂಭಗಳು. ಹೀಗಾಗಿ ನಿಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಶಿಕ್ಷಕರು ಹಾಗೂ ಸರ್ಕಾರದ ಸಂಬಂಧ ಭಕ್ತ ಹಾಗೂ ಭಗವಂತ ನಡುವಣ ಸಂಬಂಧ ಎಂದು ತಿಳಿಸಿದರು.

ನಮ್ಮ ರಾಜ್ಯದಲ್ಲಿ ಪ್ರತಿ ವರ್ಷ 10 ಸಾವಿರ ಕೋಟಿ ಸಿಎಸ್ಆರ್ ನಿಧಿ ಸಂಗ್ರಹವಾಗುತ್ತದೆ. ಮುಂದಿನ ದಿನಗಳಲ್ಲಿ ಇದನ್ನು ಶಿಕ್ಷಣ ಕ್ಷೇತ್ರಕ್ಕೆ ಬಳಸಲು ತೀರ್ಮಾನಿಸಿದ್ದೇವೆ. ಪ್ರತಿ ಮೂರ್ನಾಲ್ಕು ಪಂಚಾಯ್ತಿ ಮಟ್ಟದಲ್ಲಿ ಪಬ್ಲಿಕ್ ಶಾಲೆ ನಿರ್ಮಿಸಲು ತೀರ್ಮಾನಿಸಿದ್ದೇವೆ. ಈ ಶಾಲೆಗಳನ್ನು ಖಾಸಗಿಯವರು ನಿಭಾಯಿಸುತ್ತಾರೆ. ರಾಜ್ಯದಲ್ಲಿ 50 ಸಾವಿರ ಶಿಕ್ಷಕರ ಕೊರತೆ ಇದ್ದು, ಈ ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ಈ ಖಾಸಗಿ ಶಾಲೆಯವರು ತುಂಬಲಿದ್ದಾರೆ.

ಈ ಜಿಲ್ಲೆಯಲ್ಲಿ ಟೊಯೋಟಾ ಸೇರಿದಂತೆ ಬೇರೆ ಕಂಪನಿಗಳು ಎಲ್ಲಾ ತಾಲೂಕುಗಳಲ್ಲಿ ಮೂರ್ನಾಲ್ಕು ಶಾಲೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಮುಂದೆ ಶಿಕ್ಷಣಕ್ಕಾಗಿ ಯಾರೂ ನಗರಕ್ಕೆ ವಲಸೆ ಬರಬಾರದು ಎಂಬುದು ನಮ್ಮ ಆಲೋಚನೆ. ಮುಂದಿನ 3 ವರ್ಷಗಲ್ಲಿ ಸುಮಾರು 2 ಸಾವಿರ ಶಾಲೆ ನಿರ್ಮಿಸಲು ತೀರ್ಮಾನಿಸಿದ್ದೇವೆ. ಈ ಜಿಲ್ಲೆಯಲ್ಲಿರುವ ಎಲ್ಲಾ ಕಂಪನಿಗಳು ತಮ್ಮ ಸಿಎಸ್ ಆರ್ ನಿಧಿಯನ್ನು ಇದಕ್ಕೆ ಬಳಸಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ.

ಕನಕಪುರದಲಿ ನಾನು ನನ್ನ ಸ್ವಂತ 20 ಎಕರೆ ಭೂಮಿಯನ್ನು ಸರ್ಕಾರಿ ಶಾಲೆಗೆ ದಾನ ಮಾಡಿದ್ದೇನೆ. ನಾನು ತಿಹಾರ್ ಜೈಲಿನಿಂದ ಬಂದಾಗ ನಾನು ಒಂದು ಮಾತು ಹೇಳಿದ್ದೆ, ನಾನು ಹುಟ್ಟುತ್ತಾ ಕೃಷಿಕ, ವೃತ್ತಿಯಲ್ಲಿ ಉದ್ಯಮಿ, ಆಯ್ಕೆಯಲ್ಲಿ ಶಿಕ್ಷಣತಜ್ಞ, ಆಸಕ್ತಿಯಲ್ಲಿ ರಾಜಕಾರಣಿ. ನಾನು ಸಚಿವನಾಗಿದ್ದಕ್ಕಿಂತ ಪದವಿ ಪಡೆದಾಗ ಹೆಚ್ಚು ಸಂತೋಷವಾಗಿತ್ತು. ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದೇ ದೊಡ್ಡ ಸೇವೆ. ನಾವು ನೀವು ಸೇರಿ ಅಕ್ಷರವಂತ, ಪ್ರಜ್ಞಾವಂತ ಕರ್ನಾಟಕ ನಿರ್ಮಾಣ ಮಾಡಬೇಕು.

ಶಿಕ್ಷಕರ ವೃತ್ತಿ ಬಹಳ ದೊಡ್ಡ ಜವಾಬ್ದಾರಿಯುತವಾಗಿದೆ. ನಿಮಗೆ ಬಡ್ತಿ, ಲಂಚ ಇಲ್ಲ. ಆದರೂ ಸಮಾಜ ಸೇವೆಗಾಗಿ ಈ ವೃತ್ತಿ ಆಯ್ಕೆ ಮಾಡಿಕೊಂಡಿದ್ದೀರಿ. ಇದಕ್ಕಾಗಿ ನಿಮಗೆ ಅಭಿನಂದಿಸುತ್ತೇನೆ. ಮಕ್ಕಳಲ್ಲಿ ನೀವು ನಾಯಕತ್ವ ಗುಣ ಬೆಳೆಸಬೇಕು. ಪ್ರತಿ ಪೋಷಕರು ತಮ್ಮ ಮಕ್ಕಳು ತಮಗಿಂತ ಎತ್ತರಕ್ಕೆ ಬೆಳೆಯಬೇಕು ಎಂದು ಆಸೆ ಪಡೆಯುವಂತೆ, ಶಿಕ್ಷಕರು ಕೂಡ ತಮಗಿಂತ ದೊಡ್ಡ ಮಟ್ಟದಲ್ಲಿ ತಮ್ಮ ಶಿಷ್ಯರು ಬೆಳೆಯಬೇಕು ಎಂದು ಆಸೆ ಹೊಂದಿರುತ್ತಾರೆ.

ತ್ರೇತಾಯುಗದಲ್ಲಿ ಗುರುಗಳು ಶಿಷ್ಯರನ್ನು ಜಂಗಿಸಿ ವಿದ್ಯೆ ಕಲಿಸಿದರೆ, ದ್ವಾಪರ ಯುಗದಲ್ಲಿ ಗುರುಗಳು ದಂಡಿಸಿ ವಿದ್ಯೆ ಹೇಳಿಕೊಡುತ್ತಿದ್ದರು. ಆದರೆ ಕಲಿ ಯುಗದಲ್ಲಿ ಗುರುಗಳು ಶಿಷ್ಯರಿಗೆ ವಂದಿಸಿ ವಿದ್ಯೆ ಹೇಳಿಕೊಡಬೇಕಾಗಿದೆ. ಈಗಿನ ಡಿಜಿಟಲ್ ಯುಗದಲ್ಲಿ ಪ್ರಪಂಚದ ಎಲ್ಲಾ ಮಾಹಿತಿ ಕೈ ಬೆರಳ ತುದಿಯಲ್ಲಿ ಸಿಗುತ್ತದೆ. ಹೀಗಾಗಿ ಈ ಕಾಲದ ಮಕ್ಕಳು ಬಹಳ ಅದೃಷ್ಟವಂತರು. ನೀವು ತಪ್ಪು ಹೇಳಿದರೆ ಅದನ್ನೇ ಮಕ್ಕಳು ತಿದ್ದುವ ಸಾಮರ್ಥ್ಯ ಹೊಂದಿದ್ದಾರೆ.

ನಮ್ಮ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡಬೇಕು. ದೇಶದಲ್ಲೇ ಅತಿ ಉತ್ತಮವಾದ ಶಿಕ್ಷಣ ನಮ್ಮ ರಾಜ್ಯದಲ್ಲಿ ಸಿಗುತ್ತದೆ. ಪ್ರತಿ ವರ್ಷ 2 ಲಕ್ಷ ಇಂಜಿನಿಯರ್, 17 ಸಾವಿರ ವೈದ್ಯರನ್ನು ಸೃಷ್ಟಿ ಮಾಡುತ್ತಿದ್ದೇವೆ. ಈ ಬಾರಿ 10ನೇ ತರಗತಿ ಪರೀಕ್ಷೆಯಲ್ಲಿ ಬಾಗಲಕೋಟೆ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಮೊದಲ ಸ್ಥಾನ ಪಡೆದಿದ್ದಾರೆ. ನಿಮ್ಮಿಂದ ಎಲ್ಲವೂ ಸಾಧ್ಯ. ನೀವು ಪರಿಶ್ರಮ ಪಡಬೇಕು. ಸಮಾಜ ಗುರುತಿಸುವಂತಹ 20 ಜನ ವಿದ್ಯಾರ್ಥಿಗಳನ್ನು ತಯಾರು ಮಾಡಿದಾಗ ನಿಮ್ಮ ವೃತ್ತಿ ಜೀವನ ಸಾರ್ಥಕವಾಗುತ್ತದೆ ಎಂದರು.

Leave a Reply

Your email address will not be published. Required fields are marked *