ಕಲಬುರಗಿ: ಇಲ್ಲಿನ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸ್ಮಾರ್ಟ್ ಕಾರ್ಡ್ಗಳ ಕೊರತೆಯಿಂದಾಗಿ ಚಾಲನಾ ಪರವಾನಗಿ (ಡಿಎಲ್), ವಾಹನ ನೋಂದಣಿ (ಆರ್.ಸಿ) ಹಾಗೂ ವಾಹನ ನವೀಕರಣಕ್ಕಾಗಿ ಅರ್ಜಿ ಹಾಕಿದವರು ಪರದಾಡುತ್ತಿದ್ದಾರೆ. ಸಂಚಾರ ಪೊಲೀಸರ ದಂಡದಿಂದ ತಪ್ಪಿಸಿಕೊಳ್ಳಲು ಆರ್ಟಿಒ ಅಧಿಕಾರಿಗಳೊಂದಿಗೆ ವಾಗ್ವಾದಕ್ಕೂ ಇಳಿಯುತ್ತಿದ್ದಾರೆ.
ಸ್ಮಾರ್ಟ್ ಕಾರ್ಡ್ ವಿತರಣೆಯ ಗುತ್ತಿಗೆ ಪಡೆದಿರುವ ರೋಸ್ಮೆರ್ಟಾ ಟೆಕ್ನಾಲಜಿಸ್ ಕಂಪನಿಯ ಟೆಂಡರ್ ಅವಧಿಯು ವಾರದ ಹಿಂದೆಯೇ ಮುಗಿದಿದೆ. ಗುತ್ತಿಗೆ ಅವಧಿ ಮುಂದೂಡಿಕೆಯ ಪ್ರಸ್ತಾಪಕ್ಕೂ ಸಹಿಯಾಗಿಲ್ಲ. ಆರ್ಟಿಒ ಕಚೇರಿಯಲ್ಲಿನ ಕಂಪನಿಯ ತಾಂತ್ರಿಕ ಸಿಬ್ಬಂದಿಗೆ ಅರ್ಜಿದಾರರ ದತ್ತಾಂಶವೂ ವರ್ಗವಾಗುತ್ತಿಲ್ಲ. ಹೀಗಾಗಿ, ಸ್ಮಾರ್ಡ್ ಕಾರ್ಡ್ಗಳ ಮುದ್ರಣಕ್ಕೆ ತೀವ್ರ ಹಿನ್ನಡೆಯಾಗುತ್ತಿದೆ.
‘ಡಿಎಲ್, ಆರ್ಸಿ ಮತ್ತು ವಾಹನ ನವೀಕರಣಕ್ಕೆ ನಿತ್ಯ ಸುಮಾರು 400 ಅರ್ಜಿಗಳು ಬರುತ್ತವೆ. ಅಷ್ಟೇ ಪ್ರಮಾಣದ ಸ್ಮಾರ್ಟ್ ಕಾರ್ಡ್ಗಳು ಮುದ್ರಣವಾಗಿ ಅರ್ಜಿದಾರರ ಕೈಸೇರುತ್ತವೆ. ಗುತ್ತಿಗೆ ಒಪ್ಪಂದ ಮುಗಿದಿದ್ದರಿಂದ ಸ್ಮಾರ್ಟ್ ಕಾರ್ಡ್ ಕೊಡಲು ವಿಳಂಬ ಆಗುತ್ತಿದೆ. ಅರ್ಜಿದಾರರು ಕಚೇರಿಗೆ ಬಂದು ಕಣ್ಣೀರು ಹಾಕುತ್ತಿದ್ದಾರೆ. ಸಂಚಾರ ಪೊಲೀಸರು ಹಿಡಿದು ದಂಡ ಹಾಕುತ್ತಿದ್ದಾರೆ. ಏನಾದರು ಮಾಡಿ ಕಾರ್ಡ್ಗಳು ಕೊಡುವಂತೆ ಗೋಗರೆಯುತ್ತಿದ್ದಾರೆ. ಕೆಲವರು ವಾಗ್ವಾದಕ್ಕೂ ಇಳಿಯುತ್ತಿದ್ದಾರೆ’ ಎಂದು ಆರ್ಟಿಒ ಅಧಿಕಾರಿಯೊಬ್ಬರು ಹೇಳಿದರು.
‘ಹೊಸ ವಾಹನಗಳಿಗೆ ಎರಡು ತಿಂಗಳ ಒಳಗೆ ಹಾಗೂ ವಾಹನಗಳ ನವೀಕರಣಕ್ಕೆ 30 ದಿನಗಳ ಒಳಗೆ ಸ್ಮಾರ್ಟ್ ಕಾರ್ಡ್ಗಳನ್ನು ನೀಡಬೇಕು. ಸ್ಮಾರ್ಟ್ ಕಾರ್ಡ್ಗಳು ಇಲ್ಲ, ನಂಬರ್ ಕೊಡುವುದಾದರೂ ಹೇಗೆ? ಅರ್ಜಿದಾರರ ಸಂಕಷ್ಟ ನೋಡಲು ಆಗುತ್ತಿಲ್ಲ. ವಯಸ್ಕರು, ಗ್ರಾಮೀಣ ಭಾಗದವರು ಕಚೇರಿಗೆ ಬಂದು ಬರಿಗೈಲಿ ಹಿಂದಿರುಗುತ್ತಿದ್ದಾರೆ’ ಎಂದರು.
ಕಚೇರಿಯ ಅಧಿಕಾರಿಗಳು ಹಾಗೂ ರೋಸ್ಮೆರ್ಟಾ ಕಂಪನಿಯ ತಾಂತ್ರಿಕ ಸಿಬ್ಬಂದಿ ಪ್ರಕಾರ, ಜಿಲ್ಲೆಯಲ್ಲಿ 3,500 ಅರ್ಜಿದಾರರ ಕಾರ್ಡ್ಗಳು ಮುದ್ರಣಕ್ಕಾಗಿ ಕಾಯುತ್ತಿವೆ. ಅವುಗಳಲ್ಲಿ 2,500 ಆರ್ಸಿ ಹಾಗೂ 1,500 ಡಿಎಲ್ ಕಾರ್ಡ್ಗಳ ಅರ್ಜಿಗಳಿವೆ.
ವಿಳಂಬಕ್ಕೆ ಕಾರಣವೇನು?: ‘ಒಂದು ಕಡೆ ಗುತ್ತಿಗೆ ಅವಧಿ ಮುಗಿದಿದೆ. ಟೆಂಡರ್ ಸಂಬಂಧಿತ ವ್ಯಾಜ್ಯ ಹೈಕೋರ್ಟ್ನಲ್ಲಿದ್ದು, ಅಕ್ಟೋಬರ್ 29ಕ್ಕೆ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಮತ್ತೊಂದು ಕಡೆ ಕೇಂದ್ರ ಸರ್ಕಾರವು ‘ಒಂದು ದೇಶ ಒಂದು ಕಾರ್ಡ್’ ಅಡಿ ಹೊಸ ಕಾರ್ಡ್ಗಳನ್ನು ವಿತರಣೆ ಮಾಡುವಂತೆ ಸೂಚಿಸಿದೆ. ಆದರೆ, ರಾಜ್ಯ ಸರ್ಕಾರವು ‘ಒಂದು ದೇಶ ಒಂದು ಕಾರ್ಡ್’ಗೆ ಅನುಮತಿಯೇ ಕೊಟ್ಟಿಲ್ಲ. ಈ ಎಲ್ಲ ಸಮಸ್ಯೆಗಳು ಏಕಕಾಲದಲ್ಲಿ ಎದುರಾಗಿದ್ದು, ಸ್ಮಾರ್ಟ್ ಕಾರ್ಡ್ಗಳ ವಿತರಣೆಯಲ್ಲಿ ತೊಡಕಾಗುತ್ತಿದೆ’ ಎಂದು ರೋಸ್ಮೆರ್ಟಾ ಟೆಕ್ನಾಲಜಿಸ್ ಕಂಪನಿಯ ತಾಂತ್ರಿಕ ಸಹಾಯಕ ಮಂಜುನಾಥ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.
‘ಟೆಂಡರ್ ಮುಂದುವರಿಸುವ ಒಪ್ಪಂದಕ್ಕೆ ಸಹಿ ಹಾಕುವವರೆಗೂ ಕೇಂದ್ರ ಕಚೇರಿಯಿಂದ ದತ್ತಾಂಶ ಬರುವುದಿಲ್ಲ. ಅಧಿಕೃತ ಒಪ್ಪಿಗೆ ಇಲ್ಲದೆ ಕಾರ್ಡ್ಗಳನ್ನು ಮುದ್ರಿಸುವಂತೆಯೂ ಇಲ್ಲ. ಕಚೇರಿಯ ಅಧಿಕಾರಿಗಳು ಒತ್ತಡ ಹಾಕಿದರೆ ಅಲ್ಲಿಂದ ಹೊರಬನ್ನಿ ಎಂದು ಕಂಪನಿಯ ಮೇಲಧಿಕಾರಿಗಳು ತಾಕೀತು ಮಾಡಿದ್ದಾರೆ. ಹೀಗಾಗಿ, ನಾವು ಏನೂ ಮಾಡುತ್ತಿಲ್ಲ. ಇದು ಹೀಗೆಯೇ ಮುಂದುವರಿದರೆ ಕಾಗದದಲ್ಲಿ ಡಿಎಲ್ ಮತ್ತು ಆರ್ಸಿ ಕೊಡುವ ಪದ್ಧತಿಯನ್ನು ಮರು ಜಾರಿಗೆ ತರಬೇಕಾಗುತ್ತದೆ’ ಎಂದರು.
ಮಂಜುನಾಥ ಪಾಟೀಲ ಪ್ರಾದೇಶಿಕ ಸಾರಿಗೆ ಕಚೇರಿಯ ಸೂಪರಿಂಟೆಂಡೆಂಟ್ ಸ್ಮಾರ್ಟ್ ಕಾರ್ಡ್ ವಿತರಣೆಯ ಗುತ್ತಿಗೆ ಅವಧಿ ಮುಗಿದಿದ್ದರಿಂದ ವಿಳಂಬವಾಗುತ್ತಿದೆ. ಹೊಸ ಟೆಂಡರ್ ಬಗ್ಗೆ ಕೇಂದ್ರ ಕಚೇರಿಯವರೇ ನಿರ್ಧಾರ ತೆಗೆದುಕೊಳ್ಳುತ್ತಾರೆ. ಸದ್ಯ ವಾಹನ ಹಿಸ್ಟರಿಯ ದಾಖಲೆ ಕೊಡುತ್ತಿದ್ದೇವೆ