ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಡಿಯಾ ಒಕ್ಕೂಟ ಈ ಬಾರಿ ಸರ್ಕಾರ ರಚಿಸಲಿದೆ ಎಂದು ಕಾಂಗ್ರೆಸ್ ವಿಶ್ವಾಸ ವ್ಯಕ್ತಪಡಿಸಿದೆ. ಲೋಕಸಭಾ ಪ್ರತಿ ಪಕ್ಷ ನಾಯಕ ರಾಹುಲ್ ಗಾಂಧಿ ಅವರ ಉಪಸ್ಥಿತಿ, ಎರಡು ಹಳೆ ಪಕ್ಷಗಳ ಒಗ್ಗೂಡುವಿಕೆ ಹಾಗೂ ಒಗ್ಗಟ್ಟಿನ ಹೋರಾಟ ಈ ಜಯ ತಂದುಕೊಡಲಿದೆ ಎಂಬ ವಿಶ್ವಾಸವನ್ನು ಕಾಂಗ್ರೆಸ್ ಹೊಂದಿದೆ.
ಜಮ್ಮು ಮತ್ತು ಕಾಶ್ಮೀರದ 90 ವಿಧಾನಸಭಾ ಸ್ಥಾನಗಳಿಗೆ ಸೆಪ್ಟೆಂಬರ್ 18, 25 ಮತ್ತು ಅಕ್ಟೋಬರ್ 1 ರಂದು ಮತದಾನ ನಡೆದಿದ್ದು, ಈ ಬಾರಿ 75 ವರ್ಷಗಳಲ್ಲೇ ಅತ್ಯಧಿಕ ಅಂದರೆ ಶೇ 63ಕ್ಕೂ ಹೆಚ್ಚು ಪ್ರಮಾಣದ ಮತದಾನ ನಡೆದಿದೆ. ಮೂರು ಹಂತದ ಮತದಾನ ಪ್ರಕ್ರಿಯೆ ಮುಗಿದಿದ್ದು, ಅಕ್ಟೋಬರ್ 8 ರಂದು ಫಲಿತಾಂಶ ಹೊರ ಬೀಳಲಿದೆ. ಸರ್ಕಾರ ರಚನೆಗೆ 46 ಸ್ಥಾನಗಳ ಅಗತ್ಯವಿದೆ.
ಮೂರು-ಹಂತದ ಮತದಾನದ ನಂತರ, ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಡಿಯಾ ಒಕ್ಕೂಟ ಸರ್ಕಾರ ರಚನೆಗೆ ಸಿದ್ದವಾಗಿದೆ. ನಾನು ಈ ಹಂತದಲ್ಲಿ ಸಂಖ್ಯೆಗಳ ಬಗ್ಗೆ ಮಾತನಾಡಲು ಇಷ್ಟಪಡುವುದಿಲ್ಲ. ಆದರೆ, ಮೈತ್ರಿಕೂಟವು ಸುಲಭವಾಗಿ ಬಹುಮತ ಪಡೆಯುತ್ತದೆ ಎಂದು ಎಐಸಿಸಿ ಜಮ್ಮು ಮತ್ತು ಕಾಶ್ಮೀರದ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಯಾದವ್ ಈಟಿವಿ ಭಾರತ್ಗೆ ತಿಳಿಸಿದ್ದಾರೆ.
ಮೊದಲ ಮತ್ತು ಅಂತಿಮ ಹಂತದಲ್ಲಿ ನಾವು ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧಿಸಿದ್ದೇವೆ. ಮತದಾರರು ತೋರಿದ ಉತ್ಸಾಹದಿಂದ ನಾವು ಸಂತಸಗೊಂಡಿದ್ದೇವೆ. ಮೈತ್ರಿಯು ಸ್ಥಳೀಯ ಸಮಸ್ಯೆಗಳ ಮೇಲೆ ಈ ಬಾರಿ ಹೆಚ್ಚಿನ ಗಮನ ಹರಿಸಿದೆ. ಈ ಚುನಾವಣೆಯಲ್ಲಿ ಇಲ್ಲಿನ ಜನ ನಮ್ಮ ಕೈ ಹಿಡಿಯಲಿದ್ದಾರೆ ಎಂದು ಮನೋಜ್ ಯಾದವ್ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಮುಖವಾಗಿ ರಾಹುಲ್ ಗಾಂಧಿ ಅವರು ಕಣಿವೆ ರಾಜ್ಯದಲ್ಲಿ ಈ ಬಾರಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಇಲ್ಲಿನ ಜನರ ದನಿಯಾಗಿ ಅವರು ಮಾತನಾಡಿದ್ದಾರೆ. ಜನರ ಹಕ್ಕುಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಅವರ ಉತ್ಸಾಹ ಚುನಾವಣೆಯ ಸಮಯದಲ್ಲಿ ಸಕಾರಾತ್ಮಕ ಫಲಿತಾಂಶ ನೀಡಲಿದೆ ಎಂದು ಯಾದವ್ ಹೇಳಿದರು. ಇನ್ನು ಯಾವುದೇ ಪರಿಸ್ಥಿತಿ ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಯಾದವ್ ಹೇಳಿದ್ದಾರೆ.