ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನ ಜನರಿಗೆ ರೈಲ್ವೆ ಇಲಾಖೆ ಸಿಹಿಸುದ್ದಿಯೊಂದನ್ನು ನೀಡಿದೆ. ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಗರಕ್ಕೆ 40 ನಿಮಿಷಗಳಲ್ಲಿ ರೈಲಿನಲ್ಲಿ ಕೆಲವೇ ದಿನಗಳಲ್ಲಿ ಸಂಚಾರವನ್ನು ನಡೆಸಬಹುದು.
ಏರ್ಪೋರ್ಟ್ನಿಂದ ನಗರಕ್ಕೆ ವೇಗವಾಗಿ ತಲುಪಲು ಪರಿಸರ ಸ್ನೇಹಿ ಮಾರ್ಗವನ್ನು ಅಭಿವೃದ್ಧಿಗೊಳಿಸಲಾಗುತ್ತದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.
ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ, ತುಮಕೂರು ಸಂಸದ ವಿ. ಸೋಮಣ್ಣ ಬೆಂಗಳೂರು ವಿಮಾನ ನಿಲ್ದಾಣದಿಂದ ನಗರದ ಕಂಟೋನ್ಮೆಂಟ್ ರೈಲು ನಿಲ್ದಾಣದ ತನಕ ರೈಲಿನಲ್ಲಿ ಪ್ರಯಾಣಿಸಿದರು. ನಿಲ್ದಾಣದ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಿದರು, ವಿವಿಧ ಯೋಜನೆ ಕುರಿತು ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದರು.
ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, “ಕೆಲವೇ ದಿನಗಳಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 35 ಅಥವ 40 ನಿಮಿಷಗಳಲ್ಲಿ ನಗರವನ್ನು ತಲುಪಬಹುದು. ಈಗ ನಡೆಯುತ್ತಿರುವ ಕಾಮಗಾರಿ ಕೆಲವೇ ತಿಂಗಳುಗಳಲ್ಲಿ ಪೂರ್ಣಗೊಳ್ಳಲಿದೆ” ಎಂದು ಹೇಳಿದರು.
“ಬೆಂಗಳೂರು ವಿಮಾನ ನಿಲ್ದಾಣದಿಂದ ಕಂಟೋನ್ಮೆಂಟ್ ನಿಲ್ದಾಣಕ್ಕೆ ಹತ್ತಿರದ ಮಾರ್ಗ ಎಂದರೆ 35 ಕಿ. ಮೀ., ಆದರೆ ನಗರದ ಸಂಚಾರ ದಟ್ಟಣೆ ಕಾರಣಕ್ಕೆ ತಡವಾಗುತ್ತಿದೆ. ಕೆಲವೇ ದಿನಗಳಲ್ಲಿ ಮಾರ್ಗವೊಂದು ಸಿದ್ಧವಾಗಲಿದ್ದು, ಆಗ ವಿಮಾನ ನಿಲ್ದಾಣದಿಂದ ಕಂಟೋನ್ಮೆಂಟ್ ತನಕದ ಸಂಚಾರದ ಅವಧಿ 35 ನಿಮಿಷ ಅಥವ ಅದಕ್ಕಿಂತ 5 ನಿಮಿಷ ಹೆಚ್ಚು” ಎಂದು ಸಚಿವರು ತಿಳಿಸಿದರು.
ಭಾರತೀಯ ರೈಲ್ವೆ ಕಳೆದ ವರ್ಷ ಏರ್ಪೋರ್ಟ್ ಮತ್ತು ಕಂಟೋನ್ಮೆಂಟ್ ರೈಲು ನಿಲ್ದಾಣ ಸಂಪರ್ಕಿಸುವ ರೈಲು ಮಾರ್ಗದ ಕಾಮಗಾರಿ ಕೈಗೊಂಡಿತ್ತು. ವಿ. ಸೋಮಣ್ಣ ಕೆಲವು ದಿನಗಳ ಹಿಂದೆ ಯೋಜನೆಯ ಪರಿಶೀಲನೆ ನಡೆಸಿದ್ದರು. ಯೋಜನೆ ಅನ್ವಯ ಕೆಲಸ ಸಾಗುತ್ತಿದೆ, ಕೆಲವೇ ತಿಂಗಳುಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಸಚಿವರು ಭರವಸೆ ನೀಡಿದರು.
ಕಂಟೋನ್ಮೆಂಟ್ ರೈಲು ನಿಲ್ದಾಣವನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಅಶ್ವಿನಿ ವೈಷ್ಣವ್ ಈ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು. ಈ ಕಾಮಗಾರಿಗಳು ಪೂರ್ಣಗೊಂಡ ಬಳಿಕ ನಿಲ್ದಾಣದಲ್ಲಿ ಹೆಚ್ಚುವರಿ ಸ್ಥಳಾವಕಾಶ ಸಿಗಲಿದೆ ಎಂದರು.
“ದೇಶಾದ್ಯಂತ 1,137 ನಿಲ್ದಾಣಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಇದರಲ್ಲಿ ಬೆಂಗಳೂರು ನಗರದ ಎರಡು ನಿಲ್ದಾಣಗಳು ಸೇರಿವೆ. ರೈಲ್ವೆ ಇಲಾಖೆಯಲ್ಲಿ ಹೀಗೆ ಪುನರ್ ಅಭಿವೃದ್ಧಿ ಕಾಮಗಾರಿಗಳನ್ನು ದಶಕಗಳ ಬಳಿಕ ಕೈಗೊಳ್ಳಲಾಗಿದೆ. 1050 ನಿಲ್ದಾಣಗಳ ಕಾರ್ಯಗಳು ಪೂರ್ಣಗೊಳ್ಳುತ್ತಾ ಬಂದಿದ್ದು, ಲೋಕಾರ್ಪಣೆಗೆ ಸಿದ್ಧವಾಗಿವೆ” ಎಂದು ಹೇಳಿದರು.
ರೈಲ್ವೆ ಇಲಾಖೆ ಮತ್ತು ಬಿಐಎಎಲ್ ಜಂಟಿಯಾಗಿ ವಿಮಾನ ನಿಲ್ದಾಣದ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಸುಮಾರು 3 ಕೋಟಿಗೂ ಅಧಿಕ ವೆಚ್ಚದಲ್ಲಿ ಏರ್ಪೋರ್ಟ್ ರೈಲ್ವೆ ಹಾಲ್ಟ್ ಸ್ಟೇಷನ್ ಅಭಿವೃದ್ಧಿಗೊಳಿಸಿದವು. ಆದರೆ ನಗರದಿಂದ ವಿಮಾನ ನಿಲ್ದಾಣಕ್ಕೆ ಕೇವಲ 15 ರೂ. ದರವಿದ್ದರೂ ಸಹ ಪ್ರಯಾಣಿಕರನ್ನು ಸೆಳೆಯಲು ರೈಲ್ವೆ ಇಲಾಖೆ ವಿಫಲವಾಗಿದೆ. ಇಂತಹ ಸಂದರ್ಭದಲ್ಲಿ ಬೆಂಗಳೂರು ವಿಮಾನ ನಿಲ್ದಾಣ-ಕಂಟೋನ್ಮೆಂಟ್ ನಿಲ್ದಾಣಕ್ಕೆ ಸಂಪರ್ಕಿಸಲು ಮತ್ತೊಂದು ಮಾರ್ಗವನ್ನು ಸಿದ್ಧಗೊಳಿಸಲಾಗುತ್ತಿದೆ.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ವಿ. ಸೋಮಣ್ಣ ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು. ಸಂಸದ ಪಿ. ಸಿ. ಮೋಹನ್, ರೈಲ್ವೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಕಾಮಗಾರಿಗಳ ಕುರಿತು ಸಚಿವರು ಅಧಿಕಾರಿಗಳಿಂದ ವಿವರಣೆಯನ್ನು ಪಡೆದರು, ಅಧಿಕಾರಿಗಳಿಗೆ ಸೂಚನೆಗಳನ್ನು ಕೊಟ್ಟರು.
ನಗರದ ಕಂಟೋನ್ಮೆಂಟ್ ರೈಲು ನಿಲ್ದಾಣ ಸುಮಾರು 150 ವರ್ಷಗಳಷ್ಟು ಹಳೆಯದು. ಬ್ರಿಟಿಷರ ಕಾಲದ ನಿಲ್ದಾಣವನ್ನು ಹೈಟೆಕ್ಗೊಳಿಸುವ ಕಾಮಗಾರಿಯನ್ನು ರೈಲ್ವೆ ಇಲಾಖೆ ಕೈಗೊಂಡಿದೆ. ಸುಮಾರು 525 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಮೊದಲ ಹಂತದಲ್ಲಿ ಯಾರ್ಡ್ ಅನ್ನು 45 ಕೋಟಿ ರೂ. ವೆಚ್ಚದಲ್ಲಿ ಮರು ವಿನ್ಯಾಸ ಮಾಡಲಾಗುತ್ತಿದೆ.
ನಾಲ್ಕು ಹೆಚ್ಚುವರಿ ಪ್ಲಾಟ್ ಫಾರ್ಮ್ ಮತ್ತು ಎರಡು ಹೆಚ್ಚುವರಿ ಹಳಿಗಳನ್ನು ಹಾಕಲಾಗುತ್ತಿದೆ. ಇದರಿಂದಾಗಿ ಹೆಚ್ಚು ರೈಲುಗಳು ಈ ನಿಲ್ದಾಣದಿಂದ ಕಾರ್ಯ ನಿರ್ವಹಣೆ ಮಾಡಬಹುದು. ಇದರಿಂದಾಗಿ ನಗರದ ಉಳಿದ ರೈಲು ನಿಲ್ದಾಣಗಳ ಮೇಲಿನ ಒತ್ತಡವೂ ಕಡಿಮೆಯಾಗಲಿದೆ. ಬೆಂಗಳೂರು ಸಬ್ ಅರ್ಬನ್ ರೈಲಿಗೆ ಈ ನಿಲ್ದಾಣ ಸಂಯೋಜನೆಗೊಳ್ಳುವುದಿರಿಂದ ಹೆಚ್ಚಿನ ಪ್ರಯಾಣಿಕರು ಮುಂದಿನ ದಿನಗಳಲ್ಲಿ ಇಲ್ಲಿಂದ ಸಂಚಾರವನ್ನು ನಡೆಸಲಿದ್ದಾರೆ. ಈ ಹಿನ್ನಲೆಯಲ್ಲಿ ವಿವಿಧ ಮೂಲ ಸೌಕರ್ಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ.