ಬಳ್ಳಾರಿ : ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಬಳ್ಳಾರಿ-ಹೊಸಪೇಟೆ ಭಾಗದಲ್ಲಿ ವಿವಿಧ ರೈಲ್ವೆ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಇದಕ್ಕಾಗಿ 6,200 ಕೋಟಿ ರೂ. ವ್ಯಯಿಸಲಾಗುತ್ತಿದೆ. ಈಗಾಗಲೇ ವಿವಿಧ ಯೋಜನೆಗಳ ಸರ್ವೇ ಕಾರ್ಯ ಪೂರ್ಣಗೊಳಿಸಲಾಗಿದ್ದು, ಅವುಗಳ ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಅವರು ಹೇಳಿದರು .
ಬಳ್ಳಾರಿ ಜಿಲ್ಲೆಯ ವಿವಿಧ ರೈಲ್ವೆ ಯೋಜನೆಗಳಿಗೆ ಸಂಬಂಧಿಸಿದಂತೆ ನೂತನ ಜಿಲ್ಲಾಡಳಿತ ಭವನದ ಕಚೇರಿ ಸಭಾಂಗಣದಲ್ಲಿ ರೈಲ್ವೆ ಇಲಾಖೆ ಅಧಿಕಾರಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬಳ್ಳಾರಿ-ಚಿಕ್ಕಜಾಜೂರು ಮಾರ್ಗದ 185 ಕಿ.ಮೀ ಉದ್ದದ ರೈಲ್ವೆ ಹಳಿ ಡಬ್ಲಿಂಗ್ ಕಾರ್ಯಕ್ಕೆ 3,080 ಕೋಟಿ ರೂ. ಖರ್ಚು ಮಾಡಲಾಗುತ್ತಿದ್ದು, ಪ್ರಸ್ತಕ ವರ್ಷದಲ್ಲಿ ಸರ್ವೇ ಕಾರ್ಯ ಪೂರ್ಣಗೊಂಡಿದ್ದು, ಇನ್ನೆರಡು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ಅದೇರೀತಿಯಾಗಿ ಸ್ವಾಮಿಹಳ್ಳಿ-ರಾಯದುರ್ಗ ಮಾರ್ಗದ 52 ಕಿ.ಮೀ ಉದ್ದದ ರೈಲ್ವೆ ಹಳಿ ಡಬ್ಲಿಂಗ್ ಕಾರ್ಯಕ್ಕೆ ತಾಂತ್ರಿಕ ಪರಿಶೀಲನೆ ನಡೆಸಲಾಗಿದೆ. ನಂತರ ಡಿಪಿಆರ್ ಸಿದ್ದಪಡಿಸಲಾಗುವುದು ಎಂದು ತಿಳಿಸಿದರು.
ಬಳ್ಳಾರಿ-ಹೊಸಪೇಟೆ ಮಾರ್ಗದಲ್ಲಿ ನಾಲ್ಕು ಟ್ರಾö್ಯಕ್ ಹಳಿಯ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಈಗಾಗಲೇ ಸರ್ವೇ ಕಾರ್ಯ ಪೂರ್ಣಗೊಂಡಿದ್ದು, ಡಿಪಿಆರ್ ಸಿದ್ದಗೊಳ್ಳುತ್ತಿದೆ. ಈ ಭಾಗದ ವಿವಿಧ ಕಾರ್ಖಾನೆಗಳಿಗೆ ರೈಲ್ವೆ ಅಭಿವೃದ್ಧಿಗೆ ಸುಮಾರು 3 ಸಾವಿರ ಕೋಟಿ ರೂ. ವ್ಯಯಿಸಲಾಗುತ್ತದೆ. ವ್ಯಾಸನಕೆರೆ-ಅಮರಾವತಿ ಕಾಲೋನಿ ಮಾರ್ಗದ 20 ಕಿ.ಮೀ ಉದ್ದದ ರೈಲ್ವೆ ಹಳಿ ಡಬ್ಲಿಂಗ್ ಕಾರ್ಯ, ತೋರಣಗಲ್ಲು-ರಣಜಿತ್ಪುರ ಮಾರ್ಗದ 29 ಕಿ.ಮೀ ಉದ್ದದ ರೈಲ್ವೆ ಹಳಿ ಡಬ್ಲಿಂಗ್ ಕಾರ್ಯ ನಡೆಯುತ್ತಿದೆ ಎಂದು ಸಚಿವರು ತಿಳಿಸಿದರು.
ಅಮೃತ್ ಭಾರತ್ ರೈಲ್ವೆ ನಿಲ್ದಾಣ ಯೋಜನೆಯಡಿ ಬಳ್ಳಾರಿ ರೈಲ್ವೆ ನಿಲ್ದಾಣಕ್ಕೆ 16.66 ಕೋಟಿ ರೂ. ಮತ್ತು ಹೊಸಪೇಟೆ ರೈಲ್ವೆ ನಿಲ್ದಾಣಕ್ಕೆ 15.17 ಕೋಟಿ ರೂ. ಅನುದಾನದಲ್ಲಿ ನಿಲ್ದಾಣಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಒಟ್ಟು 21 ರೈಲ್ವೆ ಯೋಜನೆಗಳು ನಡೆಯುತ್ತಿದ್ದು, ಇದಕ್ಕಾಗಿ 43 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತದೆ. ಈ ಎಲ್ಲಾ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ ರಾಜ್ಯವನ್ನು ರೈಲ್ವೆ ಸೌಕರ್ಯ ಹೊಂದಿದ ರಾಜ್ಯವನ್ನಾಗಿ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ದೇಶದ 24 ರಾಜ್ಯಗಳ 303 ಜಿಲ್ಲೆಗಳಲ್ಲಿ 103 ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ. ರಾಜ್ಯದಲ್ಲಿ 10 ವಂದೇ ಭಾರತ್ ಕಾರ್ಯಾಚರಣೆ ನಡೆಸುತ್ತಿವೆ. ವಂದೇ ಭಾರತ್ ರೈಲು ಬಡುವರು, ಮಧ್ಯಮ ವರ್ಗದವರಿಗೆ ತುರ್ತು ಪ್ರಯಾಣಕ್ಕಾಗಿ ಕೈಗೆಟಕುವ ದರದಲ್ಲಿ ಟಿಕೆಟ್ ಇದ್ದು, ನೀಡಲಾಗಿರುವ ಸೌಲಭ್ಯಗಳ ಬಗ್ಗೆ ಅರಿಯಲು ಪ್ರಯಾಣಿಸಬೇಕು ಎಂದು ತಿಳಿಸಿದ ಸಚಿವರು, ಕಳೆದ 10 ವರ್ಷಗಳಲ್ಲಿ ದೇಶಾದ್ಯಂತ 49 ಸಾವಿರ ಕಿ.ಮೀ ಉದ್ದದ ರೈಲ್ವೆ ಹಳಿ ಡಬ್ಲಿಂಗ್ ಕಾರ್ಯ ಮಾಡಲಾಗಿದೆ. ಶೇ.27 ರಷ್ಟು ಇದ್ದ ರೈಲ್ವೆ ಮಾರ್ಗಗಳ ವಿದ್ಯುದೀಕರಣವನ್ನು ಶೇ.98 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು.
ದೇಶದ ಎಲ್ಲ ಜಿಲ್ಲಾ ಕೇಂದ್ರಗಳ ರೈಲ್ವೆ ನಿಲ್ದಾಣಗಳನ್ನು ಏರ್ಪೋರ್ಟ್ಗಳ ಮಾದರಿಯಲ್ಲಿ ನವೀಕರಣಗೊಳಿಸಲಾಗುತ್ತಿದೆ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕೇರಳ, ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟç ರಾಜ್ಯಗಳಲ್ಲಿ ಹಾದುಹೋಗಿರುವ 741 ಕಿ.ಮೀ ಉದ್ದದ ಕೊಂಕಣ ರೈಲ್ವೆಯನ್ನು ರೈಲ್ವೆ ಇಲಾಖೆಯ ನೇರ ಆಡಳಿತಕ್ಕೆ ಒಳಪಡಿಸಲು ಮೂರು ರಾಜ್ಯಗಳು ತಾತ್ವಿಕ ಒಪ್ಪಿಗೆ ನೀಡಿದ್ದು, ಹಳಿಗಳ ಡಬ್ಲಿಂಗ್ ಮಾಡುವ ಕಾರ್ಯಕ್ಕೆ ರೈಲ್ವೆ ಖಾತೆ ಸಚಿವ ಅಶ್ವಿನ್ ವೈಷ್ಣವ್ ಅವರ ಜೊತೆ ಚರ್ಚಿಸಲಾಗಿದೆ ಎಂದರು.
ಅತೀ ಕಡಿಮೆ ಪ್ರಯಾಣದರದಲ್ಲಿ ಬಡವರು, ಸಣ್ಣ ಪುಟ್ಟ ವ್ಯಾಪಾರಿಗಳ ಅನುಕೂಲಕ್ಕಾಗಿ ಪ್ರಮುಖ ನಗರಗಳಿಗೆ ರೈಲು ಸಂಪರ್ಕ ಕಲ್ಪಿಸುವ ದೃಷ್ಠಿಯಿಂದ ಡೆಮೋ ರೈಲುಗಳನ್ನು ಓಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸುವಂತೆ ಕ್ರಮ ವಹಿಸಲಾಗುವುದು ಎಂದರು.
ಕನ್ನಡದಲ್ಲೇ ರೈಲ್ವೆ ಪರೀಕ್ಷೆ
ರೈಲ್ವೆ ಇಲಾಖೆಯಲ್ಲಿ ಒಟ್ಟು 12 ಲಕ್ಷ ಹುದ್ದೆಗಳಿದ್ದು, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಈ ಪರೀಕ್ಷೆಯನ್ನು ಕನ್ನಡದಲ್ಲಿಯೇ ಬರೆಯಲು ಆದೇಶ ನೀಡಲಾಗಿದ್ದು, ನಮ್ಮ ರಾಜ್ಯದ ಯುವಕರು ಇದರ ಉಪಯೋಗ ಪಡೆದುಕೊಳ್ಳಬೇಕು, ಮುಂದಿನ ದಿನಗಳಲ್ಲಿಯೂ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಲಾಗುತ್ತದೆ ಎಂದರು.
ಬಳ್ಳಾರಿ ಸಂಸದ ಈ.ತುಕಾರಾಂ ಅವರು ಸಭೆಯಲ್ಲಿ ಮಾತನಾಡಿ, ಬಳ್ಳಾರಿ ನಗರದ ಎಸ್.ಎನ್.ಪೇಟೆ ರೈಲ್ವೆ ಕೆಳಸೇತುವೆ ಮಳೆ ನೀರು ಸಂಗ್ರಹಗೊಂಡು ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿದ್ದು, ರೈಲ್ವೆ ಕೆಳ ಸೇತುವೆಗಳ ಸಮಸ್ಯೆ ಪರಿಹರಿಸುವಂತೆ ಸಚಿವರ ಗಮನಕ್ಕೆ ತಂದರು. ಅದೇರೀತಿಯಾಗಿ ನಗರದ ಮೋತಿ ವೃತ್ತದ ಬಳಿಯ ರೈಲ್ವೆ ಮೇಲ್ಸೇತುವೆ ವಿಸ್ತರಣಾ ಕಾಮಗಾರಿ ಕೈಗೊಳ್ಳಬೇಕು. ಹೊಸಪೇಟೆಯ ಅನಂತಶಯನಗುಡಿ ಬಳಿಯ ಆರ್ಓಬಿ, ಸಿದ್ದಮ್ಮನಹಳ್ಳಿ ಬಳಿಯ ಆರ್ಓಬಿಗಳ ಸ್ಥಗಿತಗೊಂಡಿರುವ ಕಾಮಗಾರಿಗಳನ್ನು ಪುನಃ ಆರಂಭಿಸಬೇಕು ಎಂದು ಸಭೆಗೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಅವರು, ರೈಲ್ವೆ ಅಧಿಕಾರಿಗಳು ಜಿಲ್ಲೆಯಲ್ಲಿ ಹಲವು ದಿನಗಳಿಂದ ನೆನೆಗುದಿಗೆ ಬಿದ್ದ ಆರ್ಓಬಿ ಕಾಮಗಾರಿಗಳನ್ನು ಸಂಬಂಧಿಸಿದ ಇಂಜಿನಿಯರ್ ಮೂಲಕ ಗುತ್ತಿಗೆದಾರರಿಗೆ ತಿಳಿಸಿ, ಕೂಡಲೇ ಪ್ರಾರಂಭಿಸಲು ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.