ಜಾತಿ ಗಣತಿ ವರದಿ ಬಗ್ಗೆ ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಆರ್. ಅಶೋಕ್ ಲಾಜಿಕ್ ಪ್ರಕಾರ ಸಿ.ಟಿ. ರವಿ ಭಯೋತ್ಪಾದಕರಾ? ಸೋಮಣ್ಣ ಟೆರರಿಸ್ಟಾ? ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು

ಬೆಂಗಳೂರು: ಜಾತಿ ಗಣತಿ ವಿಚಾರವಾಗಿ ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ವರದಿಯಲ್ಲಿ ಏನಿದೆ ಅಂತಾ ಯಾರೂ ನೋಡಿಲ್ಲ. ಸುಮ್ಮನೆ ಊಹಾಪೋಹ ಸರಿಯಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಹಸ್ಯ ಸಭೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಮುಂಚೆಯಿಂದಲೂ ನಾವೆಲ್ಲಾ ಭೇಟಿ ಆಗ್ತಾ ಇದ್ದೆವು. ಈಗ ಮಾಧ್ಯಮದವರು ವಿಷಯ ತಗೋತಿದ್ದೀರಿ. ನಾನು ಹೋಗಿ ಖರ್ಗೆ ಅವರನ್ನು ಭೇಟಿ ಮಾಡಿದ್ರೆ ಅದಕ್ಕೊಂದು ಹೇಳ್ತೀರಿ. ವರಿಷ್ಠರನ್ನು ಭೇಟಿ ಮಾಡಿದ್ರೆ ತಪ್ಪೇನಿದೆ ಎಂದರು.

ವಾರಕ್ಕೆ ಒಂದು ಸಲ ನಾನು ಗೃಹ ಸಚಿವ ಪರಮೇಶ್ವರ್ ಅವರ ಮನೇಲಿ ಇರುತ್ತೇನೆ. ನಮ್ಮ ಮನೆ ಹಿಂದೆಯೇ ಅವರ ಮನೆ ಇದೆ. ಸಹಜವಾಗಿ ಭೇಟಿ ಮಾಡ್ತೀವಿ ಅಂತಾ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ದಿನೇಶ್ ಗುಂಡೂರಾವ್ ಅವರನ್ನು ನಾನು ಭೇಟಿ ಮಾಡ್ತೀನಿ. ಈ ಸಲ ಹೆಚ್ಚು ಫೋಕಸ್ ಮಾಡ್ತಿದ್ದೀರಿ ಅಷ್ಟೇ ಎಂದು ಹೇಳಿದರು.

ರೈತ ಮಹಿಳೆ ಮೇಲೆ ವಿನಯ್ ಕುಲಕರ್ಣಿ ಅತ್ಯಾಚಾರ ಆರೋಪದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ಸಂಪೂರ್ಣವಾದ ಮಾಹಿತಿ ಇಲ್ಲ. ವಿನಯ್ ಕುಲಕರ್ಣಿ ಅವರ ಮೇಲೆ ಬ್ಲಾಕ್ಮೇಲ್ ದೂರು ಕೊಟ್ಟಿರಬಹುದು. ನಾನು ನೋಡಿದ ಹಾಗೆ ವಿನಯ್ ಕುಲಕರ್ಣಿ ಆ ಥರ ವ್ಯಕ್ತಿ ಅಲ್ಲ. ಏನೇ ಇದ್ರೂ ತನಿಖೆ ಆಗಲಿ. ತನಿಖೆ ಬೇಡ ಅಂತಾ ವಿನಯ್ ಕುಲಕರ್ಣಿ ಹೇಳಿಲ್ಲ. ನಾವು ಬಿಜೆಪಿಯವರ ರೀತಿ ಓಡಿ ಹೋಗುವುದಿಲ್ಲ. ಮುನಿರತ್ನ ವಿಚಾರ ಬಗ್ಗೆ ಅವ್ರು ಮಾತಾಡ್ತಿದ್ದಾರಾ ಎಂದು ಪ್ರಶ್ನಿಸಿದರು.

ಗಾಳಿಯಲ್ಲಿ ಗುಂಡು ಹೊಡೆಯೋದನ್ನು ನಿಲ್ಲಿಸಿ. ವೈಯಕ್ತಿಕವಾಗಿ ಹೋಗ್ತಾರೆ. ಅವರ ತಟ್ಟೆಯಲ್ಲಿ ಹೆಗ್ಗಣಗಳ ರಾಶಿ ಬಿದ್ದಿದೆ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ವಾರಕ್ಕೆ ನಾನು ನಾಲ್ಕೈದು ಮಂತ್ರಿಗಳನ್ನು ಭೇಟಿ ಮಾಡ್ತೀನಿ. ಈ ಸಂದರ್ಭದಲ್ಲಿ ಬ್ರೇಕಿಂಗ್ ನ್ಯೂಸ್ ಆಗ್ತಿದೆ. ಒಬ್ಬರು ಶಾಸಕರಾದ್ರೂ ಹೇಳಿದ್ದಾರಾ ಸಿಎಂ ಕುರ್ಚಿ ಖಾಲಿ ಇದೆ ಅಂತಾ. ಹೈಕಮಾಂಡ್ ಹೇಳಿದ್ದಾರಾ?. ವೀಕ್ಷಕರನ್ನು ಏನಾದ್ರೂ ಕಳಿಸಿದ್ದಾರಾ ಎಂದು ಪ್ರಶ್ನೆ ಮಾಡಿದರು.

Leave a Reply

Your email address will not be published. Required fields are marked *