ಜನವಸತಿ ಪ್ರದೇಶದಲ್ಲಿ ಆಟೋ ಎಲ್ಪಿಜಿ ಘಟಕ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಜನವಸತಿ ಪ್ರದೇಶದಲ್ಲಿ ಆಟೋ ಎಲ್ಪಿಜಿ ಘಟಕ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು: ಕೊಡಗು ಜಿಲ್ಲೆ ಕುಶಾಲನಗರದ ವಸತಿ ಪ್ರದೇಶದಲ್ಲಿ ಆಟೋ ಎಲ್ಪಿಜಿ ಘಟಕದ ಸ್ಥಾಪನೆ ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಸಂಬಂಧ ಹೈಕೋರ್ಟ್, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ಕುಶಾಲನಗರದ ಮುಳ್ಳುಸೋಗೆಯ ಯು.ಎಂ.ಲಕ್ಷ್ಮಣ್ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಮತ್ತು ನ್ಯಾ.ಎಚ್.ರಾಚಯ್ಯ ಅವರಿದ್ದ ರಜಾಕಾಲದ ವಿಭಾಗೀಯ ಪೀಠ ನಡೆಸಿತು. ಸ್ಥಳೀಯ ಜಿಲ್ಲಾಡಳಿತ ಹಾಗೂ ಎಲ್ಪಿಜಿ ಘಟಕ ಆರಂಭಿಸುತ್ತಿರುವ ತೆನ್ಪಾಂಡಿಯನ್ ಎಲ್ಪಿಜಿ ಇಂಪೋರ್ಟ್ ಟರ್ಮಿನಲ್ ಲಿಮಿಟೆಡ್ ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ನೀಡಿ, ಆಕ್ಷೇಪಣೆ ಸಲ್ಲಿಸುವಂತೆ ಸೂಚನೆ ನೀಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎನ್.ಪಿ.ಅಮೃತೇಶ್, ”ನಿಯಮಗಳನ್ನು ಗಾಳಿಗೆ ತೂರಿ ಮುಳ್ಳು ಸೋಗೆ ಗ್ರಾಮದ ವಸತಿ ಬಡಾವಣೆಯಲ್ಲಿ ಆಟೋ ಎಲ್ಪಿಜಿ ವಿತರಣಾ ಘಟಕವನ್ನು ಆರಂಭಿಸಲಾಗುತ್ತಿದೆ. ಇದರಿಂದ ಅಲ್ಲಿನ ನಿವಾಸಿಗಳಿಗೆ ಸಾಕಷ್ಟು ತೊಂದರೆ ಆಗಲಿದೆ” ಎಂದರು.

‘ಅಲ್ಲದೇ, ವಲಯದ ನಿಯಮಗಳನ್ನು ಮೀರಿ ಘಟಕವನ್ನು ಸ್ಥಾಪಿಸಲಾಗುತ್ತಿದೆ. ಆ ಜಾಗಕ್ಕೆ ಹೊಂದಿಕೊಂಡಂತೆ ಚರ್ಚ್ ಇದೆ. ಹಾಗಾಗಿ, ಘಟಕ ಸ್ಥಾಪನೆಗೆ ನೀಡಿರುವ ಎನ್ಒಸಿ ಹಾಗೂ ಅನುಮತಿಗಳನ್ನು ವಾಪಸ್ ಪಡೆದುಕೊಳ್ಳುವಂತೆ ಸಂಬಂಧಿಸಿದ ಪ್ರಾಧಿಕಾರಗಳಿಗೆ ನಿರ್ದೇಶನ ನೀಡಬೇಕು” ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.

Leave a Reply

Your email address will not be published. Required fields are marked *