ಒಳ ಮೀಸಲಾತಿ ಜಾರಿಗೆ ಪಟ್ಟು: ಅ. 18ರವರೆಗೆ ಗಡುವು

ಒಳ ಮೀಸಲಾತಿ ಜಾರಿಗೆ ಪಟ್ಟು: ಅ. 18ರವರೆಗೆ ಗಡುವು

ತುಮಕೂರು: ಒಳ ಮೀಸಲಾತಿ ಜಾರಿಗೆ ಪಟ್ಟು ಹಿಡಿದಿರುವ ಮಾದಿಗ ಸಮುದಾಯದ ಮುಖಂಡರು, ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲು ನಿರ್ಧರಿಸಿದ್ದಾರೆ.

ನಗರದಲ್ಲಿ ಬುಧವಾರ ಒಳ ಮೀಸಲಾತಿ ಚಿಂತನಾ- ಮಂಥನ ಹಾಗೂ ಒಳ ಮೀಸಲಾತಿ ಜಾರಿ ಹೋರಾಟದ ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು ಮೀಸಲಾತಿ ಜಾರಿಗೆ ತರುವಂತೆ ಆಗ್ರಹಿಸಿದರು.

ಮುಖಂಡರಾದ ಕೆ.ದೊರೈರಾಜ್, ‘ಮಾದಿಗ ಸಮುದಾಯ 30 ವರ್ಷಗಳಿಂದ ಹೋರಾಟ ನಡೆಸುತ್ತಿದೆ. ಸರ್ಕಾರಗಳು ಇತ್ತ ಗಮನ ಹರಿಸಿಲ್ಲ. ಅ. 18ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಜಾರಿಗೆ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಹೋರಾಟ ರೂಪಿಸಲಾಗುವುದು’ ಎಂದು ಎಚ್ಚರಿಸಿದರು.

ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ವೈ.ಎಚ್.ಹುಚ್ಚಯ್ಯ, ‘ರಾಜಕೀಯ ಪಕ್ಷಗಳ ಆದೇಶ ಪಾಲಿಸುತ್ತಾ, ಗುಲಾಮಗಿರಿ ಮಾಡುತ್ತಿರುವ ಮಾದಿಗ ಸಮುದಾಯದ ಮುಖಂಡರು ಮೀಸಲಾತಿಗಾಗಿ ಒಂದಾಗಬೇಕು. ರಾಜಕೀಯ ಪಕ್ಷಗಳು ಆಶ್ವಾಸನೆ ನೀಡುವುದು ಬಿಟ್ಟರೆ ಜಾರಿಗೆ ಮುಂದಾಗುತ್ತಿಲ್ಲ. ರಾಜಕೀಯ ಬದಿಗಿಟ್ಟು, ಸಮಾಜದ ಹಿತಕ್ಕಾಗಿ ಎಲ್ಲರು ಹೋರಾಟಕ್ಕೆ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಮುಖಂಡ ಕೆಂಚಮಾರಯ್ಯ, ‘ಒಳ ಮೀಸಲಾತಿ ಜಾರಿಗೆ ಸರ್ಕಾರ ಬದ್ಧತೆ ತೋರಬೇಕು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ನಡೆದುಕೊಳ್ಳಬೇಕು. ಮಾದಿಗರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು. ಸಮುದಾಯದ ಹಿತ ಕಾಯುವುದಷ್ಟೇ ನಮ್ಮ ಉದ್ದೇಶ ಇದರಲ್ಲಿ ಯಾವುದೇ ಪಕ್ಷವಿಲ್ಲ’ ಎಂದು ಹೇಳಿದರು.

ಮುಖಂಡರಾದ ಕೊಟ್ಟಶಂಕರ್, ಪಾವಗಡ ಶ್ರೀರಾಮ್, ರಂಗಧಾಮಯ್ಯ, ನರಸಿಂಹಯ್ಯ, ಶ್ರೀನಿವಾಸ್, ರಂಗನಾಥ್, ಲಕ್ಷ್ಮಿದೇವಮ್ಮ, ಪಿ.ಎನ್.ರಾಮಯ್ಯ, ಮರಳೂರು ಕೃಷ್ಣಮೂರ್ತಿ, ಹೆತ್ತೇನಹಳ್ಳಿ ಮಂಜುನಾಥ್, ಜಯಮೂರ್ತಿ, ಹೊಸಕೋಟೆ ನಾಗರಾಜು, ಆಟೊ ಶಿವರಾಜು, ರಂಜನ್ ಮೊದಲಾದವರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *