ಚನ್ನಮ್ಮನ ಕಿತ್ತೂರು: ಐತಿಹಾಸಿಕ ಚನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಕಿತ್ತೂರು ಸಂಸ್ಥಾನ, ರಾಣಿ ಚನ್ನಮ್ಮನ ಶೌರ್ಯ, ಸಾಹಸ, ಜೀವನ ಶೈಲಿ, ರಾಣಿ ಮತ್ತು ಸೇನಾನಿಗಳ ಹೋರಾಟದ ಕಥನವನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಬಿತ್ತರಿಸುವ ‘ಥೀಮ್ ಪಾರ್ಕ್’ ಶೀಘ್ರ ಅನುಷ್ಠಾನಗೊಳ್ಳಲಿದೆ.
ಇದಕ್ಕಾಗಿ ಕೋಟೆ ಆವರಣದೊಳಗಿರುವ ಸುಮಾರು ಏಳು ಎಕರೆ ಪ್ರದೇಶವನ್ನು ಗುರುತಿಸಲಾಗಿದೆ.
‘ಈಗಿನ ಯುಗದ ಪೀಳಿಗೆ ಅರಿಯುವ ಹಾಗೆ ಆಧುನಿಕ ತಂತ್ರಜ್ಞಾನದ ಈ ‘ಥೀಮ್ ಪಾರ್ಕ್’ ಯೋಜನೆ ಜಾರಿ ದೇಶದಲ್ಲಿಯೇ ಪ್ರಥಮ ಎಂದು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಮೂಲಗಳು ತಿಳಿಸುತ್ತವೆ. ಅಂದು ಕೊಂಡಂತೆ ಅನುಷ್ಠಾನಗೊಂಡರೆ ಹೆಚ್ಚಿನ ಪ್ರವಾಸಿಗರನ್ನು ಕಿತ್ತೂರು ಕಡೆಗೆ ಸೆಳೆಯಬಹುದು’ ಎಂಬ ನಿರೀಕ್ಷೆಯನ್ನು ಹೊಂದಲಾಗಿದೆ.
₹ 30 ಕೋಟಿ ಅನುದಾನ:
‘ಥೀಮ್ ಪಾರ್ಕ್ ಯೋಜನೆ ಜಾರಿಗೆ ರಾಜ್ಯ ಸರ್ಕಾರವು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ರೂ. 30 ಕೋಟಿ ಬಿಡುಗಡೆ ಮಾಡಿದೆ. ಯೋಜನೆಯ ನೀಲನಕ್ಷೆ ಸಿದ್ಧಪಡಿಸಲಾಗಿದೆ. ಎಂಡರಾಯ್ಡ್ ಮೊಬೈಲ್ ಸಾಧನ ಮೂಲಕ ಕೋಡ್ ಸ್ಕ್ಯಾನ್ ಮಾಡಿದರೆ ಪರದೆ ಮೇಲೆ ಇತಿಹಾಸ ಅರಿಯುವ ಸಾಹಿತ್ಯವು ತಂತ್ರಜ್ಞಾನದಲ್ಲಿ ಪ್ರದರ್ಶನವಾಗಲಿದೆ. ಇದು ದೇಶದಲ್ಲಿಯೇ ವಿಶೇಷ ಪ್ರಯತ್ನ’ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಈ ಮಹತ್ವಾಕಾಂಕ್ಷಿ ಯೋಜನೆ ಬಗ್ಗೆ ಬಣ್ಣಿಸುತ್ತಾರೆ.
‘ಕಲಾ ಗ್ಯಾಲರಿ, ಬರ್ಮೆಡ್ ಗ್ರೀನ್, ಹೂವಿನ ಹಾಸು, ಎತ್ತರಕ್ಕೆ ಚಿಮ್ಮುವ ಬಣ್ಣಗಳ ಕಾರಂಜಿ, ಗ್ಯಾಲರಿ, ಪ್ರತಿಮೆ, ತಿನಿಸುಕಟ್ಟೆ, ಮೂಲ ಸೌಲಭ್ಯ ಸೇರಿ ಅನೇಕ ವ್ಯವಸ್ಥೆಗಳನ್ನು ಥೀಮ್ ಪಾರ್ಕ್ ಒಳಗೊಂಡಿದೆ’ ಎಂದು ನೀಲನಕ್ಷೆಯ ವಿವರವನ್ನು ಅವರು ನೀಡುತ್ತಾರೆ.
‘ಇಲ್ಲಿನ ಕೋಟೆ ಅವಶೇಷ, ವಸ್ತುಸಂಗ್ರಹಾಲಯ ವೀಕ್ಷಿಸಲು ಪ್ರವಾಸಿಗರು ಆಗಮಿಸುತ್ತಾರೆ. ರಾಣಿ ಚನ್ನಮ್ಮನ ಹೋರಾಟ, ಹಿಂದಿನ ಕಾಲದ ಪೋಷಾಕು, ಖಡ್ಗ, ಡಾಲು, ಅಲ್ಲಿರುವ ಶಿಲ್ಪಗಳು, ಕಲಾ ಗ್ಯಾಲರಿ ವೀಕ್ಷಕರಲ್ಲಿ ಸ್ಪೂರ್ತಿ ತುಂಬುತ್ತವೆ. ಥೀಮ್ ಪಾರ್ಕ್ ಸಿದ್ಧವಾದರೆ ಪ್ರವಾಸಿಗರಿಗೆ ಮತ್ತು ವೀಕ್ಷಕರಿಗೆ ಮಾಹಿತಿ ಜತೆಗೆ ಹೊಸ ಅನುಭವವನ್ನು ತಂದುಕೊಡಲಿದೆ’ ಎನ್ನುತ್ತಾರೆ ಅವರು.
ಕೃಷ್ಣ ಬೈರೇಗೌಡ, ಅಧ್ಯಕ್ಷ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ಕಂದಾಯ ಸಚಿವಥೀಮ್ ಪಾರ್ಕ್ ಯೋಜನೆ ಅನುಷ್ಠಾನಕ್ಕಾಗಿ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಅನುದಾನ ಬಿಡುಗಡೆ ಮಾಡಲಾಗಿದೆ. ಟೆಂಡರ್ ಕರೆಯುವುದು ಬಾಕಿ ಇದೆ.ಬಾಬಾಸಾಹೇಬ ಪಾಟೀಲ, ಶಾಸಕಹಳೆಯ ಮಾದರಿಯ ಬಳಸಿ ಐತಿಹಾಸಿಕ ಕಥನ ಹೇಳಿದರೆ ಕೇಳುವ ವ್ಯವಧಾನ ಇಂದಿನ ಪೀಳಿಗೆಗಿಲ್ಲ. ತಂತ್ರಜ್ಞಾನದ ಮೂಲಕವೇ ಇಂದಿನ ಯುವಕರಿಗೆ ಕಿತ್ತೂರು ಇತಿಹಾಸ ತಿಳಿಸುವ ಕೆಲಸ ಮಾಡಬೇಕಿದೆ.