ಟೀಕೆ ಮಾಡುವವರಿಗೆ ನಾವು ಜಗ್ಗುವುದಿಲ್ಲ, ಬಗ್ಗುವುದಿಲ್ಲ : ಡಿಸಿಎಂ ಡಿ.ಕೆ. ಶಿವಕುಮಾರ್

ಟೀಕೆ ಮಾಡುವವರಿಗೆ ನಾವು ಜಗ್ಗುವುದಿಲ್ಲ, ಬಗ್ಗುವುದಿಲ್ಲ : ಡಿಸಿಎಂ ಡಿ.ಕೆ. ಶಿವಕುಮಾರ್

ತೊರೆಕಾಡನಹಳ್ಳಿ (ಮಳವಳ್ಳಿ),  : “ಕೆಲಸ ಮಾಡಿರುವವರನ್ನು ಕಂಡರೆ ಟೀಕೆ ಮಾಡುವುದು, ಮರದಲ್ಲಿ ಹಣ್ಣು ಕಂಡರೆ ಕಲ್ಲು ಹೊಡೆಯುವುದು ಸಹಜ. ಟೀಕೆ ಮಾಡುವವರಿಗೆ ನಾವು ಜಗ್ಗಲ್ಲ, ಬಗ್ಗುವುದಿಲ್ಲ. ನಮ್ಮ ಕೆಲಸಗಳೇ ಅವರಿಗೆ ಉತ್ತರ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಬೆಂಗಳೂರಿನ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಕಾವೇರಿ ಐದನೇ ಹಂತದ ಯೋಜನೆಯನ್ನು ಬುಧವಾರ ಸಿಎಂ ಸಿದ್ದರಾಮಯ್ಯ ಅವರ ಜತೆಗೂಡಿ ಶಿವಕುಮಾರ್ ಲೋಕಾರ್ಪಣೆ ಮಾಡಿ, ಮಾತನಾಡಿದರು.

 “ಕಾವೇರಿ ಐದನೇ ಹಂತದ ಯೋಜನೆ ಕೇವಲ 110 ಹಳ್ಳಿಗಳಿಗೆ ಮಾತ್ರ ಸೀಮಿತವಾದ ಯೋಜನೆಯಲ್ಲ, ಕರ್ನಾಟಕ ರಾಜ್ಯದ ಜನಸಂಖ್ಯೆಯ ನಾಲ್ಕನೇ ಒಂದು ಭಾಗ ಅಂದರೆ 1.50 ಕೋಟಿ ಜನರಿಗೆ ಸಂಬಂಧಿಸಿದ ಯೋಜನೆಯಾಗಿದೆ. ಸಿದ್ದರಾಮಯ್ಯ ಅವರೇ ಆರಂಭಿಸಿದ ಈ ಯೋಜನೆ ಅವರ ಕಾಲದಲ್ಲಿ ಉದ್ಘಾಟನೆ ಆಗುತ್ತಿರುವುದು ಅವರಿಗೆ ಸಿಕ್ಕಿರುವ ಭಾಗ್ಯ ಇದು ಎಂದರು.

ಎತ್ತಿನಹೊಳೆ ಯೋಜನೆ ಜಾರಿ ಆಗುವುದಿಲ್ಲ ಎಂದು ಈ ಭಾಗದ ಸಂಸದರು ಟೀಕೆ ಮಾಡಿದ್ದರು. ಇನ್ನು ತುಂಗಾಭದ್ರ ಅಣೆಕಟ್ಟಿನ 19ನೇ ಕ್ರೇಸ್ಟ್ ಗೇಟ್ ಹಾಳಾಗಿದಾಗಲೂ ನಮ್ಮ ಸರ್ಕಾರದ ವಿರುದ್ಧ ಸಾಕಷ್ಟು ಟೀಕೆ ಮಾಡಿದರು. ಆಗ ನಾನು ಒಂದು ಮಾತು ಹೇಳಿದೆ. ಅವರ ಟೀಕೆಗಳು ಸಾಯುತ್ತವೆ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ ಎಂದು. ಅದೇ ರೀತಿ ಅವರ ಟೀಕೆಗಳು ಸತ್ತಿವೆ, ನಮ್ಮ ಕೆಲಸಗಳು ಉಳಿದಿವೆ. ಇದಕ್ಕೆ 1.50 ಕೋಟಿ ಜನರ ಉಪಯೋಗಕ್ಕೆ ಕೊಟ್ಟಿರುವ ಕುಡಿಯುವ ನೀರಿನ ಯೋಜನೆಯೇ ಸಾಕ್ಷಿ ಎಂದರು.

ಸುಪ್ರೀಂ ಕೋರ್ಟ್ ಆದೇಶದಂತೆ ಈ ವರ್ಷ ತಮಿಳುನಾಡಿಗೆ 132 ಟಿಎಂಸಿ ನೀರು ಹರಿಸಬೇಕಾಗಿತ್ತು. ಆದರೆ ಈವರೆಗೂ 213 ಟಿಎಂಸಿ ನೀರನ್ನು ಹರಿಸಲಾಗಿದೆ.

ನಮ್ಮ ನೀರು ನಮ್ಮ ಹಕ್ಕು ಎಂಬ ಉದ್ದೇಶದಿಂದ ಮೇಕೆದಾಟು ಪಾದಯಾತ್ರೆ ಮಾಡುದೆವು. ಬೆಂಗಳೂರಿನ ನೀರಿನ ಸಮಸ್ಯೆ ಬಗೆಹರಿಸಲು ನಮ್ಮ ಸರ್ಕಾರ ಜವಾಬ್ದಾರಿ ವಹಿಸಿಕೊಂಡಿದೆ ಎಂದು ತಿಳಿಸಿದರು.

ಸತ್ತರೆ ಇತಿಹಾಸ ನಿರ್ಮಾಣ

ಬದಲಾವಣೆ ತರುವಾಗ ಪ್ರಾಣವನ್ನು ಒತ್ತೆ ಇಟ್ಟು ಹೋರಾಟ ಮಾಡಬೇಕು, ಬದುಕಿದರೆ ನಾಯಕ, ಸತ್ತರೆ ಇತಿಹಾಸ ಎಂದು ಅಂಬೇಡ್ಕರ್ ಅವರು ಹೇಳಿದ್ದಾರೆ.

ನಾನು ನನ್ನ ಬದುಕಿನಲ್ಲಿ ಏನಾದರೂ ಸಾಧನೆ ಮಾಡಬೇಕು, ಬದಲಾವಣೆ ತರಬೇಕು ಎಂದು ರಾಜಕಾರಣಕ್ಕೆ ಬಂದಿದ್ದೇನೆ. ಜನ ಬದಲಾವಣೆಗೋಸ್ಕರ ನನ್ನನ್ನು ಹಾಗೂ ರಾಮಲಿಂಗಾರೆಡ್ಡಿ ಅವರನ್ನು ಸತತವಾಗಿ ಎಂಟು ಬಾರಿ ಆಯ್ಕೆ ಮಾಡಿದ್ದಾರೆ.

ಬೆಂಗಳೂರಿನ ಮನೆಗಳಲ್ಲಿ 365 ದಿನಗಳ ಕಾಲ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ನೇತೃತ್ವದಲ್ಲಿ ಗ್ಯಾಸ್ ಮೂಲಕ ವಿದ್ಯುತ್ ಉತ್ಪಾದನೆ ಯೋಜನೆಗೆ ಚಾಲನೆ ನೀಡಿದ್ದೇವೆ. ಆಮೂಲಕ ಬೆಂಗಳೂರಿನ ಜನರಿಗೆ ವಿದ್ಯುತ್, ನೀರಿನ ಪೂರೈಕೆ, ಒಳಚರಂಡಿ, ಕಸ ವಿಲೇವಾರಿಗೆ ಆದ್ಯತೆ ನೀಡುತ್ತಿದ್ದೇವೆ. ನಂತರ ಸಂಚಾರ ದಟ್ಟಣೆ ಬಗ್ಗೆ ಗಮನ ಹರಿಸಲಾಗುವುದು ಎಂದರು.

ಈ ಯೋಜನೆಗೆ ಜಪಾನ್ ನ ಜೈಕಾ ಸಂಸ್ಥೆಯವರು 4,500 ಕೋಟಿಯಷ್ಟು ಆರ್ಥಿಕ ನೆರವು ನೀಡಿದ್ದಾರೆ. ಆ ಸಂಸ್ಥೆಗೆ ರಾಜ್ಯದ ಜನತೆ ಪರವಾಗಿ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ನಾವು ಒಟ್ಟಾಗಿ ಕರ್ನಾಟಕ ರಾಜ್ಯವನ್ನು ಮತ್ತಷ್ಟು  ಅಭಿವೃದ್ಧಿ ಮಾಡೋಣ.

ಮೇಕೆದಾಟು ಯೋಜನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಅರಣ್ಯ ಭೂಮಿ ಹಸ್ತಾಂತರ ಮಾಡಲಾಗುತ್ತಿದೆ. ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ಮೇಕೆದಾಟು ಯೋಜನೆ ಭೂಮಿಪೂಜೆ ನಡೆಸುವ ಶಕ್ತಿಯನ್ನು ತಾಯಿ ಚಾಮುಂಡೇಶ್ವರಿ ನಮಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.

ನಮ್ಮಲ್ಲಿ ಕಾವೇರಿ ಆರತಿ ಮಾಡಬೇಕು ಎಂದು ಅದರ ರೂಪುರೇಷೆ ನಿರ್ಧರಿಸಲು ಸಚಿವ ಚಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ತಂಡ ರಚಿಸಲಾಗಿದೆ.

ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲವಿದೆ, ಎಲ್ಲಿ ಮನಸ್ಸಿದೆಯೋ ಅಲ್ಲಿ ಮಾರ್ಗವಿದೆ. ಹೀಗಾಗಿ ನಮ್ಮ ಸರ್ಕಾರ ಅನೇಕ ಕಾರ್ಯಕ್ರಮ ರೂಪಿಸಲಾಗುತ್ತಿದೆ. ನಾವು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ  ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಯಾವ ಸರ್ಕಾರ ಕೂಡ ಇಂತಹ ಕಾರ್ಯಕ್ರಮ ರೂಪಿಸಿಲ್ಲ.

ಈ ಯೋಜನೆಗೆ ಪಕ್ಷಭೇದ ಮರೆತು ಎಲ್ಲಾ ನಾಯಕರು ಸಹಕಾರ ನೀಡಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಬೇಸಿಗೆ ಕಾಲದಲ್ಲಿ ಬೆಂಗಳೂರಿನ 7 ಸಾವಿರ ಕೊಳವೆಬಾವಿಗಳು ಬರಿದಾದವು. ಅಂತರ್ಜಲ ಕುಸಿಯಿತು. ಆದರೂ ಬೆಂಗಳೂರಿನ ಜನರಿಗೆ ಹೆಚ್ಚಿನ ಸಮಸ್ಯೆ ಆಗದಂತೆ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದರು.

ಅಂಬೇಡ್ಕರ್ ಭವನ ನಿರ್ಮಾಣಕ್ಕೆ 5 ಕೋಟಿ

ಮಂಡ್ಯ ಜಿಲ್ಲೆಯ ಕಟ್ಟಕಡೆಯ ಹಳ್ಳಿಗಳಿಗೂ ಕಾಲುವೆಗಳಲ್ಲಿ ನೀರು ಹರಿಸುವ ವ್ಯವಸ್ಥೆ ಕಲ್ಪಿಸಲು ನಾವು ಶ್ರಮಿಸುತ್ತೇವೆ. ಇನ್ನು ಸ್ಥಳೀಯ ಶಾಸಕರಾದ ನರೇಂದ್ರಸ್ವಾಮಿ ಅವರು ನೂತನವಾಗಿ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. 5 ಕೋಟಿ ವೆಚ್ಚದಲ್ಲಿ ಈ ಭವನ ನಿರ್ಮಾಣ ಕಾರ್ಯ ಮಾಡಲಾಗುವುದು ಎಂದು ಹೇಳಿದರು.

ಈ ಯೋಜನೆಗೆ ಅನೇಕ ಅಧಿಕಾರಿಗಳು ಶ್ರಮಿಸಿದ್ದಾರೆ, ಇನ್ನು ಬೆಂಗಳೂರಿಗೆ ನೀರು ತೆಗೆದುಕೊಂಡು ಹೋಗಲು ಮಳವಳ್ಳಿ, ಕನಕಪುರ, ಬೆಂಗಳೂರು ದಕ್ಷಿಣ ಕ್ಷೇತ್ರಗಳ ಅನೇಕರು ತಮ್ಮ ಭೂಮಿ ತ್ಯಾಗ ಮಾಡಿದ್ದಾರೆ. ಆಮೂಲಕ ಹೃದಯ ಶ್ರೀಮಂತಿಕೆ ತೋರಿದ್ದಾರೆ.

ನಾವು ಪರಿಶುದ್ಧವಾದ ಆಡಳಿತ ಮಾಡಿಕೊಂಡು ಬರುತ್ತಿದ್ದೇವೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಅಗತ್ಯವಿದೆ ಎಂದರು.

Leave a Reply

Your email address will not be published. Required fields are marked *